ಕರ್ನಾಟಕ

karnataka

ಬಾಲಕಿಯರಿಗೆ ಶಿಕ್ಷಣದ ಅವಕಾಶ ನೀಡುವಂತೆ ತಾಲಿಬಾನ್​ಗೆ ವಿಶ್ವಸಂಸ್ಥೆ ಒತ್ತಾಯ

By ETV Bharat Karnataka Team

Published : Sep 29, 2023, 6:53 PM IST

ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಂತೆ ತಾಲಿಬಾನ್ ಸರ್ಕಾರಕ್ಕೆ ವಿಶ್ವಸಂಸ್ಥೆ ಒತ್ತಾಯಿಸಿದೆ.

UNGA President urges Taliban to allow Afghan girls back in school
UNGA President urges Taliban to allow Afghan girls back in school

ವಿಶ್ವಸಂಸ್ಥೆ : ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣದ ಮೇಲೆ ಹೇರಿರುವ ನಿಷೇಧವನ್ನು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಮರುಪರಿಶೀಲಿಸಲಿ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್​ಜಿಎ) ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಒತ್ತಾಯಿಸಿದ್ದಾರೆ. ಆಫ್ಘನ್ ಮಹಿಳೆಯರು ಮತ್ತು ಬಾಲಕಿಯರು, ಪುರುಷರಷ್ಟೇ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಅವರ ಮಾನವ ಹಕ್ಕುಗಳನ್ನು ಎತ್ತಿಹಿಡಿಯಬೇಕು ಮತ್ತು ಗೌರವಿಸಬೇಕು ಎಂದು ಫ್ರಾನ್ಸಿಸ್ ಹೇಳಿದರು. ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

"ಶಿಕ್ಷಣದ ಮೇಲಿನ ನಿಷೇಧದ ನೀತಿಯನ್ನು ಮರು ಪರಿಶೀಲಿಸುವಂತೆ ಮತ್ತು ಬಾಲಕಿಯರು ಶಾಲೆಗೆ ಹೋಗಿ ಶಿಕ್ಷಣ ಪಡೆಯಲು ಅವಕಾಶ ನೀಡುವಂತೆ ನಾನು ಆಫ್ಘನ್ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ. ಇದರಿಂದ ಅವರು ತಮ್ಮ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬಹುದು" ಎಂದು ಯುಎನ್​ಜಿಎ ಅಧ್ಯಕ್ಷರು ಹೇಳಿದರು.

"ಮಹಿಳೆಯರು ಅಫ್ಘಾನಿಸ್ತಾನವನ್ನು ಬಲವಾದ ಒಗ್ಗಟ್ಟಿನ ರಾಜ್ಯವನ್ನಾಗಿ ಮಾಡುವಲ್ಲಿ ತಮ್ಮ ಕೊಡುಗೆ ನೀಡಬಹುದು. ಅವರು ಹಾಗೆ ಮಾಡಲು ಬಯಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಬಾಲಕಿಯರನ್ನು ಶಾಲೆಯಿಂದ ಹೊರಗಿಡುವ ಮೂಲಕ ಹತಾಶೆ ಭಾವನೆಯನ್ನು ಸೃಷ್ಟಿಸಬಾರದು. ಇದು ದೇಶವನ್ನು ಬಲಪಡಿಸುವ ನೀತಿಯಲ್ಲ. ಇದರಿಂದ ದೇಶ ದುರ್ಬಲವಾಗುತ್ತದೆಯೇ ಹೊರತು ಮತ್ತೇನೂ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಅವರು ತಮ್ಮ ನೀತಿಯನ್ನು ಶೀಘ್ರದಲ್ಲೇ ಮರುಪರಿಶೀಲಿಸುವಂತೆ ನಾನು ಅವರನ್ನು ವಿನಂತಿಸುತ್ತೇನೆ." ಎಂದು ಅವರು ನುಡಿದರು.

ಬಾಲಕಿಯರ ಶಿಕ್ಷಣದ ಮೇಲೆ ನಿರ್ಬಂಧ ವಿಧಿಸಿರುವ ವಿಶ್ವದ ಏಕೈಕ ದೇಶ ಅಫ್ಘಾನಿಸ್ತಾನ ಎಂಬುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. 50 ಕ್ಕೂ ಹೆಚ್ಚು ನಿರ್ಬಂಧಕಾರಿ ಆದೇಶಗಳ ಮೂಲಕ ತಾಲಿಬಾನ್ ಮಹಿಳೆಯರ ಜೀವನದ ಎಲ್ಲಾ ಸ್ವಾತಂತ್ರ್ಯಗಳನ್ನು ಕಿತ್ತುಕೊಂಡಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಪುನರ್​ ಸ್ಥಾಪಿಸಬೇಕೆಂದು ವಿಶ್ವಸಂಸ್ಥೆ (ಯುಎನ್) ಸಭೆಯಲ್ಲಿ 11 ದೇಶಗಳು ತಾಲಿಬಾನ್ ಸರ್ಕಾರದ ಮೇಲೆ ಒತ್ತಡ ಹೇರಿವೆ. ಅಮೆರಿಕ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಬ್ರಿಟನ್, ಜಪಾನ್, ಬ್ರೆಜಿಲ್, ಯುನೈಟೆಡ್ ಅರಬ್ ಎಮಿರೇಟ್ಸ್, ಸ್ವಿಟ್ಜರ್ಲೆಂಡ್, ಈಕ್ವೆಡಾರ್, ಅಲ್ಬೇನಿಯಾ ಮತ್ತು ಮಾಲ್ಟಾ ಸೇರಿದಂತೆ ಇತರ ದೇಶಗಳು ತಾಲಿಬಾನ್ ಸರ್ಕಾರವು ಮಹಿಳೆಯರು ಮತ್ತು ಬಾಲಕಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು "ಲಿಂಗ ಆಧರಿತ ಹಿಂಸಾಚಾರ" ಎಂದು ಉಲ್ಲೇಖಿಸಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಶ್ವ ಸಮುದಾಯದ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ತಾಲಿಬಾನ್ ಅಧಿಕಾರಿಗಳು, ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗವು ತಮ್ಮ ದೇಶದೊಳಗಿನ ಸಣ್ಣ ಆಂತರಿಕ ವಿಷಯವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಲೂಚಿಸ್ತಾನದಲ್ಲಿ ಮಸೀದಿ ಬಳಿ ಭಾರಿ ಸ್ಫೋಟ; 35 ಸಾವು, 100 ಜನರಿಗೆ ಗಾಯ

ABOUT THE AUTHOR

...view details