ETV Bharat / international

ಬಲೂಚಿಸ್ತಾನದಲ್ಲಿ ಮಸೀದಿ ಬಳಿ ಭಾರಿ ಸ್ಫೋಟ; 35 ಸಾವು, 100 ಜನರಿಗೆ ಗಾಯ

author img

By ETV Bharat Karnataka Team

Published : Sep 29, 2023, 1:59 PM IST

ಬಲೂಚಿಸ್ತಾನದ ಮಸೀದಿಯೊಂದರ ಬಳಿ ಇಂದು ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 35 ಜನ ಸಾವಿಗೀಡಾಗಿದ್ದಾರೆ.

Blast near mosque in Balochistan kills 6, injures 30
Blast near mosque in Balochistan kills 6, injures 30

ಕ್ವೆಟ್ಟಾ (ಬಲೂಚಿಸ್ತಾನ್) : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದು, 100 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಾವು ನೋವು ಉಂಟಾಗಿರುವುದನ್ನು ದೃಢಪಡಿಸಿದ ಮಸ್ತುಂಗ್ ಸಹಾಯಕ ಆಯುಕ್ತ ಅತ್ತಾಹುಲ್ ಮುನೀಮ್, ಈದ್ ಮಿಲಾದ್-ಉನ್-ನಬಿಯ ಮೆರವಣಿಗೆಗಾಗಿ ಭಕ್ತರು ಒಟ್ಟುಗೂಡುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಮಸ್ತುಂಗ್ ಜಿಲ್ಲೆಯಲ್ಲಿ ನಡೆದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಶುಕ್ರವಾರದ ಸ್ಫೋಟ ಸಂಭವಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜಿಲ್ಲಾಡಳಿತದ ಪ್ರಕಾರ, ಮಸ್ತಂಗ್​ನ ಡಿಎಸ್​ಪಿ ನವಾಜ್ ಗಶಕೋರಿ ಕೂಡ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಈ ಘಟನೆಗೆ ತಾನು ಕಾರಣವಲ್ಲ ಎಂದು ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಹೇಳಿದೆ. ಇಂದು ಸಂಭವಿಸಿದ ಸ್ಫೋಟ ಭಾರಿ ಪ್ರಮಾಣದ್ದಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಸಿಂಧ್ ಹಂಗಾಮಿ ಮುಖ್ಯಮಂತ್ರಿ ಮಕ್ಬೂಲ್ ಬಕರ್ ಸ್ಫೋಟವನ್ನು ಖಂಡಿಸಿದ್ದಾರೆ. ಮುಗ್ಧ ಜನರ ಜೀವ ಬಲಿ ತೆಗೆದುಕೊಳ್ಳುವವರು ಮಾನವೀಯತೆಯ ಶತ್ರುಗಳು ಎಂದು ಮುಖ್ಯಮಂತ್ರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಸ್ಫೋಟದಲ್ಲಿ ಜಮಿಯತ್ ಉಲೇಮಾ-ಇ-ಇಸ್ಲಾಂ-ಫಜಲ್ (ಜೆಯುಐ-ಎಫ್) ನಾಯಕ ಹಫೀಜ್ ಹಮ್ದುಲ್ಲಾ ಸೇರಿದಂತೆ ಕನಿಷ್ಠ 11 ಜನರು ಗಾಯಗೊಂಡಿದ್ದರು. ಇದಕ್ಕೂ ಒಂದು ವಾರದ ಮೊದಲು, ಕಂದಾಯ ಅಧಿಕಾರಿಯೊಬ್ಬರನ್ನು ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದು ಹಾಕಿದ್ದರು. ಈ ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದರು.

ಮೇ ತಿಂಗಳಲ್ಲಿ, ಮಸ್ತುಂಗ್​ನ ಹೊರವಲಯದಲ್ಲಿರುವ ಕಿಲ್ಲಿ ಸೋರ್ ಕರೇಜ್ ಪ್ರದೇಶದಲ್ಲಿ ಪೋಲಿಯೊ ಲಸಿಕೆ ಹಾಕುವ ತಂಡದ ಮೇಲೆ ಅಪರಿಚಿತ ದಾಳಿಕೋರರು ದಾಳಿ ನಡೆಸಿದ್ದರು. ಅಕ್ಟೋಬರ್ 2022 ರಲ್ಲಿ, ಮಸ್ತುಂಗ್​ನ ಖಬುವಿನ ಪರ್ವತ ಪ್ರದೇಶದಲ್ಲಿ ಎರಡು ವಾಹನಗಳ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮೂವರು ಸಾವನ್ನಪ್ಪಿದರು ಮತ್ತು ಆರು ಜನರು ಗಾಯಗೊಂಡಿದ್ದರು.

ಜುಲೈ 2018 ರಲ್ಲಿ, ರಾಜಕಾರಣಿ ನವಾಬ್​ಜಾದಾ ಸಿರಾಜ್ ರೈಸಾನಿ ಸೇರಿದಂತೆ ಕನಿಷ್ಠ 128 ಜನರು ಇದೇ ಜಿಲ್ಲೆಯಲ್ಲಿ ನಡೆದ ಭೀಕರ ಆತ್ಮಾಹುತಿ ಸ್ಫೋಟದಲ್ಲಿ ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದನ್ನೂ ಓದಿ : ಜೆರೋಧಾ ಮಾರುಕಟ್ಟೆ ಮೌಲ್ಯ 30 ಸಾವಿರ ಕೋಟಿ; ಸಿಇಒ ನಿತಿನ್ ಕಾಮತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.