ಉವಾಲ್ಡೆ(ಅಮೆರಿಕ):ಟೆಕ್ಸಾಸ್‌ನ ಪ್ರಾಥಮಿಕ ಶಾಲೆಯಲ್ಲಿ 18ರ ಹರೆಯದ ವ್ಯಕ್ತಿಯೊಬ್ಬ ನಡೆಸಿದ ಅತ್ಯಂತ ಅಮಾನವೀಯ ಗುಂಡಿನ ದಾಳಿಯಲ್ಲಿ 18 ಮಕ್ಕಳು ಮತ್ತು ಓರ್ವ ಶಿಕ್ಷಕ ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಈ ಘಟನೆಯ ಕುರಿತು ಮಾಹಿತಿ ನೀಡಿದ್ದು, ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
2012ರಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿ ಬಳಿಕ ನಡೆದ ಅತಿ ದೊಡ್ಡ ದುರಂತ ಇದಾಗಿದೆ.
ಇತ್ತೀಚೆಗೆ, ನ್ಯೂಯಾರ್ಕ್ನ ಬಫಲೊ ನಗರದ ಸೂಪರ್ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಎರಡು ವಾರಗಳ ನಂತರ ಮತ್ತೆ ಈ ಘಟನೆ ನಡೆದಿದೆ. ಆ ಘಟನೆಯನ್ನು 'ಜನಾಂಗೀಯ ಪ್ರೇರಿತ' ಸಾಮೂಹಿಕ ಗುಂಡಿನ ದಾಳಿ ಎಂದು ಹೇಳಲಾಗಿತ್ತು.
ಇದನ್ನೂ ಓದಿ:ಅಮೆರಿಕದಲ್ಲಿ 'ಜನಾಂಗೀಯ ಪ್ರೇರಿತ' ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು
ಶೋಕಾಚರಣೆಗೆ ಬೈಡನ್ ಸೂಚನೆ: ಶಾಲೆಯಲ್ಲಿ ಮೃತಪಟ್ಟ ಮಕ್ಕಳಿಗೆ ಸಂತಾಪ ಸೂಚಿಸಲು ಶ್ವೇತ ಭವನ ಸೇರಿದಂತೆ ಇತರ ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಶನಿವಾರದ(ಮೇ 28) ತನಕ ಅರ್ಧಕ್ಕೆ ಹಾರಿಸಲು ಅಧ್ಯಕ್ಷ ಜೋ ಬೈಡನ್ ಸೂಚನೆ ನೀಡಿದ್ದಾರೆ.
ಅಮೆರಿಕದಲ್ಲಿ ಗನ್ ಲಾಬಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜಪಾನ್ ಸೇರಿದಂತೆ ಏಷ್ಯಾದ ದೇಶಗಳಿಗೆ ಐದು ದಿನಗಳ ಪ್ರವಾಸಕ್ಕೆ ತೆರಳಿದ್ದ ಬೈಡನ್ 'ಇಂತಹ ಪ್ರಕರಣಗಳು ವಿಶ್ವದ ಇತರ ದೇಶಗಳಲ್ಲಿ ಅಪರೂಪಕ್ಕೊಮ್ಮೆ ಆಗುತ್ತವೆ. ಆದರೆ ಅಮೆರಿಕದಲ್ಲಿ ಪದೇ ಪದೆ ಆಗುತ್ತಿರುವುದು ವಿಷಾದದ ಸಂಗತಿ. ನಾವು ಗನ್ ಲಾಬಿಗೆ ಕಡಿವಾಣ ಹಾಕುತ್ತೇವೆ. ಮೃತರ ಗೌರವಾರ್ಥ ದೇಶವ್ಯಾಪಿ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸುತ್ತೇವೆ' ಎಂದು ಹೇಳಿದರು.
'ಹೃದಯ ವಿದ್ರಾವಕ ಘಟನೆ': ಟೆಕ್ಸಾಸ್ ಶಾಲೆಯಲ್ಲಿ ನಡೆದ ಶಾಲೆಯ ಗುಂಡಿನ ದಾಳಿಯನ್ನು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತೀವ್ರವಾಗಿ ಖಂಡಿಸಿದ್ದಾರೆ. ಕಠಿಣ ಕಾನೂನು ಕ್ರಮ ಮತ್ತು ನಿಲುವು ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ದಾಳಿಯನ್ನು 'ಹೃದಯ ವಿದ್ರಾವಕ ದುರಂತ' ಎಂದಿದ್ದಾರೆ.