ETV Bharat / international

ಅಮೆರಿಕದಲ್ಲಿ 'ಜನಾಂಗೀಯ ಪ್ರೇರಿತ' ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು

author img

By

Published : May 15, 2022, 9:00 AM IST

18 ವರ್ಷದ ಯುವಕನೊಬ್ಬ ಬಫಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಶನಿವಾರ ಜನಾಂಗೀಯ ಪ್ರೇರಿತ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 10 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ

mass shooting at Buffalo supermarket
ಅಮೆರಿಕದಲ್ಲಿ ಜನಾಂಗೀಯ ಪ್ರೇರಿತ ಸಾಮೂಹಿಕ ಗುಂಡಿನ ದಾಳಿ

ನ್ಯೂಯಾರ್ಕ್: ನಗರದ ಬಫಲೋ ಸೂಪರ್ ಮಾರ್ಕೆಟ್‌ನಲ್ಲಿ ಸುರಕ್ಷಾ ಕವಚ ಹಾಗೂ ಹೆಲ್ಮೆಟ್‌ ಧರಿಸಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತರಲ್ಲಿ 11 ಮಂದಿ ಆಫ್ರಿಕನ್ ಅಮೆರಿಕನ್ನರಿದ್ದು ಪೇಟನ್ ಜೆಂಡ್ರಾನ್(18) ಕೃತ್ಯವೆಸಗಿದ ಬಂದೂಕುಧಾರಿ. ದುಷ್ಕರ್ಮಿ ಕೃತ್ಯವನ್ನು ಕ್ಯಾಮರಾದಲ್ಲಿ ಲೈವ್‌ ಸ್ಟ್ರೀಮ್‌ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮೊದಲು ಪಾರ್ಕಿಂಗ್‌ ಸ್ಥಳದಲ್ಲಿದ್ದ ನಾಲ್ಕು ಜನರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ, ಬಳಿಕ ಸೂಪರ್‌ ಮಾರ್ಕೆಟ್‌ ಒಳ ನುಗ್ಗಿ ದಾಳಿ ಮಾಡಿದ್ದಾನೆ. ಮೃತಪಟ್ಟವರಲ್ಲಿ ಒಬ್ಬರು ನಿವೃತ್ತ ಪೊಲೀಸ್‌ ಅಧಿಕಾರಿಯಾಗಿದ್ದು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರು (ನಿವೃತ್ತ ಪೊಲೀಸ್‌ ಅಧಿಕಾರಿ) ಮೃತಪಡುವ ಮುನ್ನ ದಾಳಿಕೋರನ ಮೇಲೆ ಪ್ರತಿದಾಳಿ ನಡೆಸಿದ್ದರು ಎಂದು ಬಫಲೊ ಪೊಲೀಸ್‌ ಕಮಿಷನರ್‌ ಜೋಸೆಫ್‌ ಗ್ರಾಮಗ್ಲಿಯಾ ವಿವರಿಸಿದ್ದಾರೆ.

ಪೊಲೀಸರು ಸಾಮೂಹಿಕ ಗುಂಡಿನ ದಾಳಿಯನ್ನು "ದ್ವೇಷದ ಅಪರಾಧ ಮತ್ತು ಜನಾಂಗೀಯ ಪ್ರೇರಿತ ಹಿಂಸಾತ್ಮಕ ಉಗ್ರ ಕೃತ್ಯ" ಎಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣ, ತ್ವರಿತ ತನಿಖೆ ನಡೆಸಲು ಮತ್ತು ಅಮಾಯಕರ ಸಾವಿಗೆ ನ್ಯಾಯ ಒದಗಿಸಲು ನ್ಯಾಯಾಂಗ ಬದ್ಧವಾಗಿದೆ" ಎಂದು ಯುಎಸ್​​ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಹೇಳಿದ್ದಾರೆ.

ಇದನ್ನೂ ಓದಿ: ಕಾಶ್ಮೀರಿ ಪಂಡಿತನ ಹತ್ಯೆ : ಪ್ರಧಾನಿ - ಅಮಿತ್​ ಶಾ ವಿರುದ್ಧ ಆಕ್ರೋಶ - ಸಾಮೂಹಿಕ ರಾಜೀನಾಮೆ ಬೆದರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.