ಕರ್ನಾಟಕ

karnataka

ಪಾಕಿಸ್ತಾನ: ಚುನಾವಣಾ ಆಯೋಗದ ಪಟ್ಟಿಯಲ್ಲಿ ಇಮ್ರಾನ್ ಪಕ್ಷದ ಚಿಹ್ನೆಯೇ ಮಾಯ!

By ETV Bharat Karnataka Team

Published : Jan 10, 2024, 4:16 PM IST

ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಕಟಿಸಿದ ಪಕ್ಷಗಳ ಚಿಹ್ನೆಗಳ ಪಟ್ಟಿಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಚಿಹ್ನೆ ಕಾಣೆಯಾಗಿದೆ.

Imran Khan's PTI missing from poll body's symbols' list
Imran Khan's PTI missing from poll body's symbols' list

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಪಕ್ಷಗಳ ಚಿಹ್ನೆಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬ್ಯಾಟ್ ಚಿಹ್ನೆ ಕಾಣೆಯಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗವು ಪಿಟಿಐ ಪಕ್ಷವನ್ನು ಈ ಪಟ್ಟಿಯಿಂದ ಹೊರಗಿಟ್ಟಿದೆ.

ಪಕ್ಷ ಹಾಗೂ ನಾಯಕರ ವಿರುದ್ಧದ ಹಲವಾರು ಮೊಕದ್ದಮೆಗಳು ಮತ್ತು ಅನೇಕ ರಾಜಕೀಯ ಪಕ್ಷಗಳ ಮಧ್ಯೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಇಮ್ರಾನ್ ಖಾನ್ ಅವರ ಪಕ್ಷಕ್ಕೆ ಆಯೋಗದ ಈ ಕ್ರಮ ನುಂಗಲಾರದ ತುತ್ತಾಗಿದೆ.

ಮಂಗಳವಾರ, ಚುನಾವಣಾ ಆಯೋಗವು ಕನಿಷ್ಠ 145 ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆಗಳ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಕಳುಹಿಸಿದೆ. ಆದರೆ ಈ ಪಟ್ಟಿಯಲ್ಲಿ ಪಿಟಿಐನ 'ಬ್ಯಾಟ್' ಚಿಹ್ನೆ ಕಾಣೆಯಾಗಿದೆ. ರಾಜಕೀಯ ಪಕ್ಷಗಳು ನಾಮನಿರ್ದೇಶನ ಮಾಡಿದ ಅಭ್ಯರ್ಥಿಗಳಿಗೆ ಆಯಾ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಬೇಕು ಎಂದು ಚುನಾವಣಾ ಆಯೋಗವು ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಆಂತರಿಕ ಚುನಾವಣೆಗಳನ್ನು ನಡೆಸದ ಕಾರಣ ಕೆಲ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ತಡೆ ಹಿಡಿಯಲಾಗಿದೆ ಎಂದು ಪಾಕಿಸ್ತಾನ ಚುನಾವಣಾ ಆಯೋಗದ ಮೂಲಗಳು ದೃಢಪಡಿಸಿವೆ. ಇದಲ್ಲದೇ, ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದರ ವಿರುದ್ಧದ ಮೇಲ್ಮನವಿಗಳ ವಿಚಾರಣೆಯ ಪ್ರಕ್ರಿಯೆಯನ್ನು ಮೇಲ್ಮನವಿ ನ್ಯಾಯಮಂಡಳಿಗಳು ಪೂರ್ಣಗೊಳಿಸುವ ನಿರೀಕ್ಷೆಯಿದೆ.

ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಮಂಡಳಿಯು ಬುಧವಾರ ಮೇಲ್ಮನವಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಲಿದ್ದು, ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗುವುದು. ಜನವರಿ 12 ರಂದು ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದ್ದು, ಅದೇ ದಿನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ.

ಮಾಜಿ ಸಂಪರ್ಕ ಸಚಿವ ಫವಾದ್ ಚೌಧರಿ ಮತ್ತು ಪಿಟಿಐ ನಾಯಕ ಮುರಾದ್ ಸಯೀದ್ ಸೇರಿದಂತೆ ಅನೇಕ ಅಭ್ಯರ್ಥಿಗಳ ಮೇಲ್ಮನವಿಗಳನ್ನು ಚುನಾವಣಾ ಆಯೋಗದ ಮೇಲ್ಮನವಿ ನ್ಯಾಯಮಂಡಳಿಗಳು ಈಗಾಗಲೇ ವಜಾಗೊಳಿಸಿವೆ.

ಆದಾಗ್ಯೂ ಪಿಟಿಐನ ಇತರ ಅನೇಕ ಉನ್ನತ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಲಾಗಿದೆ. ಆದರೆ ಈ ಮುಖಂಡರು ಪಿಟಿಐನ ಬ್ಯಾಟ್ ಚಿಹ್ನೆಯಡಿ ಸ್ಪರ್ಧಿಸಲು ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸರ್ಕಾರ ಮತ್ತು ಆಡಳಿತವು ಪಿಟಿಐ ಅನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದೆ ಎಂದು ಪಕ್ಷದ ನಾಯಕತ್ವ ಹೇಳಿಕೊಂಡಿದೆ.

ಇದನ್ನೂ ಓದಿ : 2023ರಲ್ಲಿ ನೈಸರ್ಗಿಕ ವಿಕೋಪಗಳಿಂದ ಜಗತ್ತಿನಲ್ಲಿ $250 ಬಿಲಿಯನ್ ಹಾನಿ

ABOUT THE AUTHOR

...view details