ETV Bharat / science-and-technology

2023ರಲ್ಲಿ ನೈಸರ್ಗಿಕ ವಿಕೋಪಗಳಿಂದ ಜಗತ್ತಿನಲ್ಲಿ $250 ಬಿಲಿಯನ್ ಹಾನಿ

author img

By ETV Bharat Karnataka Team

Published : Jan 10, 2024, 1:24 PM IST

ಕಳೆದ ವರ್ಷ ವಿಶ್ವದಲ್ಲಿ ನೈಸರ್ಗಿಕ ಪ್ರಕೋಪಗಳಿಂದ 250 ಬಿಲಿಯನ್ ಡಾಲರ್ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

Natural disasters cause $250 bn loss globally in 2023
Natural disasters cause $250 bn loss globally in 2023

ಬರ್ಲಿನ್ : ನೈಸರ್ಗಿಕ ವಿಪತ್ತುಗಳಿಂದ 2023ರಲ್ಲಿ ವಿಶ್ವದಾದ್ಯಂತ ಸುಮಾರು 250 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಜರ್ಮನಿಯ ವಿಮಾ ಕಂಪನಿ ಮ್ಯೂನಿಚ್ ರೆ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಉತ್ತರ ಅಮೆರಿಕ ಮತ್ತು ಯುರೋಪ್​ನಲ್ಲಿ ಗುಡುಗು ಸಹಿತ ಮಳೆ ಹಿಂದೆಂದಿಗಿಂತಲೂ ಹೆಚ್ಚು ವಿನಾಶಕಾರಿಯಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಉತ್ತರ ಅಮೆರಿಕಾದಲ್ಲಿ ಚಂಡಮಾರುತದಿಂದ ಸುಮಾರು 66 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳು ನಾಶವಾದರೆ, ಯುರೋಪ್​ನಲ್ಲಿ ಚಂಡಮಾರುತದಿಂದ ಹಾನಿ 10 ಬಿಲಿಯನ್ ಡಾಲರ್​ನಷ್ಟು ಹಾನಿಯಾಗಿದೆ. "ಕೆಲ ವರ್ಷಗಳಿಂದ ಹೆಚ್ಚಾಗುತ್ತಿರುವ ಭೂಮಿಯ ತಾಪಮಾನವು ಅನೇಕ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯಗಳನ್ನು ತೀವ್ರಗೊಳಿಸುತ್ತಿದೆ. ಇದರಿಂದ ನಷ್ಟ ಹೆಚ್ಚಾಗುತ್ತಿದೆ" ಎಂದು ಮ್ಯೂನಿಚ್ ರೆ ಮುಖ್ಯ ಹವಾಮಾನ ವಿಜ್ಞಾನಿ ಅರ್ನ್ಸ್ಟ್ ರೌಚ್ ಹೇಳಿದ್ದಾರೆ.

ಜರ್ಮನಿಯಲ್ಲಿ, 1881 ರಲ್ಲಿ ಮಾಪನಗಳು ಪ್ರಾರಂಭವಾದಾಗಿನಿಂದ 2023 ಅತ್ಯಂತ ಬಿಸಿಯಾದ ವರ್ಷವಾಗಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ (ಡಿಡಬ್ಲ್ಯೂಡಿ) ತಿಳಿಸಿದೆ. ಬರ ಮತ್ತು ಶಾಖದ ಅಲೆಗಳ ಗುಣಲಕ್ಷಣಗಳನ್ನು ಹೊಂದಿದ್ದ ಹಿಂದಿನ ವರ್ಷಗಳಿಗೆ ವ್ಯತಿರಿಕ್ತವಾಗಿ, 2023ರ ವರ್ಷ ಹೆಚ್ಚಿನ ಮಟ್ಟದ ಮಳೆಯೊಂದಿಗೆ ಬಿಸಿ ಮತ್ತು ಆರ್ದ್ರ ಪರಿಸ್ಥಿತಿಗಳನ್ನು ಹೊಂದಿತ್ತು.

ಹವಾಮಾನ ಬದಲಾವಣೆಯು ಅನಿಯಂತ್ರಿತವಾಗಿ ಮುಂದುವರಿಯುತ್ತಿದೆ ಎಂದು ಡಿಡಬ್ಲ್ಯೂಡಿಯ ಹವಾಮಾನ ಮತ್ತು ಪರಿಸರ ವ್ಯವಹಾರ ಪ್ರದೇಶದ ಮುಖ್ಯಸ್ಥ ಟೋಬಿಯಾಸ್ ಫುಚ್ಸ್ ಹೇಳಿದರು. ನಾವು ಹವಾಮಾನವನ್ನು ರಕ್ಷಿಸುವ ಪ್ರಯತ್ನಗಳನ್ನು ತೀವ್ರಗೊಳಿಸಬೇಕು ಮತ್ತು ಹವಾಮಾನದಲ್ಲಿನ ವಿಪರೀತಗಳಿಂದ ಉಂಟಾಗುವ ಹಾನಿಗೆ ಹೊಂದಿಕೊಳ್ಳಲು ಕಲಿಯಬೇಕು ಎಂದು ಅವರು ತಿಳಿಸಿದರು.

ಫೆಬ್ರವರಿಯಲ್ಲಿ ಆಗ್ನೇಯ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳು 2023 ರ ಅತ್ಯಂತ ವಿನಾಶಕಾರಿ ನೈಸರ್ಗಿಕ ವಿಪತ್ತುಗಳಾಗಿವೆ. ಈ ವಿಪತ್ತುಗಳಲ್ಲಿ 58,000 ಜನ ಸಾವನ್ನಪ್ಪಿದ್ದಾರೆ ಮತ್ತು ಒಟ್ಟಾರೆ 50 ಬಿಲಿಯನ್ ಡಾಲರ್ ನಷ್ಟವಾಗಿದೆ. ಇದು ವರ್ಷದ ಅತ್ಯಂತ ದುಬಾರಿ ನೈಸರ್ಗಿಕ ವಿಪತ್ತು ಎಂದು ಮ್ಯೂನಿಚ್ ರೆ ತಿಳಿಸಿದೆ.

ಕಳೆದ ವರ್ಷ ನೈಸರ್ಗಿಕ ವಿಪತ್ತುಗಳಿಂದ ಉಂಟಾದ ಸಾವುಗಳ ಸಂಖ್ಯೆ 74,000 ಕ್ಕೆ ಏರಿದೆ. ಸುಮಾರು 63,000 ಜನರು 2023 ರಲ್ಲಿ ಇಂತಹ ಭೂಭೌತಿಕ ಅಪಾಯಗಳ ಪರಿಣಾಮವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದು 2010ರ ನಂತರದ ಅತ್ಯಧಿಕ ಸಾವಿನ ಸಂಖ್ಯೆಯಾಗಿದೆ ಎಂದು ಅದು ಹೇಳಿದೆ. "ನೈಸರ್ಗಿಕ ವಿಪತ್ತುಗಳಿಂದ ಜನರನ್ನು ರಕ್ಷಿಸಲು ಸಮಗ್ರ ಡೇಟಾ ಮತ್ತು ಅಪಾಯಗಳಲ್ಲಿನ ಬದಲಾವಣೆಗಳ ಆಳವಾದ ಜ್ಞಾನ ಪ್ರಮುಖ ಅಂಶಗಳಾಗಿವೆ" ಎಂದು ಮ್ಯೂನಿಚ್ ರೆ ನಿರ್ವಹಣಾ ಮಂಡಳಿಯ ಸದಸ್ಯ ಥಾಮಸ್ ಬ್ಲಂಕ್ ಒತ್ತಿ ಹೇಳಿದರು.

ಇದನ್ನೂ ಓದಿ : 65 ಸಾವಿರ ಕೋಟಿ ರೂ. ದಾಟಿದ 'ಮೇಡ್​ - ಇನ್ - ಇಂಡಿಯಾ' ಐಫೋನ್ ರಫ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.