ಕರ್ನಾಟಕ

karnataka

ತೆರಿಗೆ ಆದಾಯ ಹೆಚ್ಚಳಕ್ಕಾಗಿ ಸಿಗರೇಟು ನಿಷೇಧ ಹಿಂಪಡೆದ ನ್ಯೂಜಿಲೆಂಡ್​, ಮಲೇಷ್ಯಾ

By ETV Bharat Karnataka Team

Published : Jan 4, 2024, 5:07 PM IST

ನ್ಯೂಜಿಲೆಂಡ್​ ಮತ್ತು ಮಲೇಷ್ಯಾ ಸರ್ಕಾರಗಳು ಸಿಗರೇಟು ನಿಷೇಧ ಕಾಯ್ದೆ ಹಿಂಪಡೆದಿವೆ.

New Zealand, Malaysia reverse ban on smoking over tax revenue concerns
New Zealand, Malaysia reverse ban on smoking over tax revenue concerns

ನವದೆಹಲಿ:ನ್ಯೂಜಿಲೆಂಡ್ ಮತ್ತು ಮಲೇಷ್ಯಾ ಸರಕಾರಗಳು ಧೂಮಪಾನದ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿವೆ. ಸಿಗರೇಟಿನಿಂದ ಬರುವ ತೆರಿಗೆ ಆದಾಯ ಕೊರತೆಯಾಗದಂತೆ ನೋಡಿಕೊಳ್ಳಲು ಸರ್ಕಾರಗಳು ಈ ಕ್ರಮಕ್ಕೆ ಮುಂದಾಗಿವೆ. ನ್ಯೂಜಿಲೆಂಡ್ ನ ಹೊಸ ಸರ್ಕಾರವು ತನ್ನ ಆರಂಭಿಕ 100 ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ನ್ಯೂಜಿಲೆಂಡ್ ನ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸಲು ಮತ್ತು ಸಿಗರೇಟುಗಳ ಮಾರಾಟದ ಮೇಲಿನ ನಿಷೇಧ ತೆಗೆದುಹಾಕುವ ಕಾಯ್ದೆ ಜಾರಿಗೊಳಿಸಲು ಬದ್ಧವಾಗಿದೆ.

ಇದೇ ರೀತಿಯ ಕ್ರಮದಲ್ಲಿ ಮಲೇಷ್ಯಾ ಸರ್ಕಾರ ಉದ್ದೇಶಿತ ಧೂಮಪಾನ ನಿಷೇಧ ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಮತ್ತು ಇದರ ಬದಲಿಗೆ ಮಸೂದೆಯ ಪರಿಷ್ಕೃತ ಆವೃತ್ತಿಯನ್ನು ಪ್ರಸ್ತುತಪಡಿಸಿದೆ. ಆದರೆ ಪರಿಷ್ಕೃತ ಕಾಯ್ದೆ ದುರ್ಬಲವಾಗಿದೆ. ಧೂಮಪಾನ ನಿಷೇಧ ಕಾಯ್ದೆ ಹಿಂಪಡೆದಿದ್ದಕ್ಕೆ ಎರಡೂ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಸರ್ಕಾರಕ್ಕೆ ಆದಾಯ ಹೆಚ್ಚಿಸಲು ನಿಷೇಧ ಹಿಂಪಡೆಯುತ್ತಿರುವುದಾಗಿ ಸರ್ಕಾರಗಳು ಸಮರ್ಥಿಸಿಕೊಂಡಿವೆ.

ನ್ಯೂಜಿಲೆಂಡ್​​ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ನೇತೃತ್ವದಲ್ಲಿ ಧೂಮಪಾನ ನಿಷೇಧ ಕಾಯ್ದೆ ಹಿಂಪಡೆಯುವ ಕ್ರಮಗಳು ನಡೆದಿವೆ. ಪ್ರಧಾನ ಮಂತ್ರಿ ನೇತೃತ್ವದ ಮಧ್ಯಮ -ಬಲಪಂಥೀಯ ರಾಷ್ಟ್ರೀಯ ಪಕ್ಷವು ನ್ಯೂಜಿಲೆಂಡ್ ಫಸ್ಟ್ ಪಾರ್ಟಿ ಮತ್ತು ಲಿಬರ್ಟೇರಿಯನ್ ಎಸಿಟಿ ನ್ಯೂಜಿಲೆಂಡ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಸಿಗರೇಟು ನಿಷೇಧವನ್ನು ಹಿಂಪಡೆಯುವ ನಿರ್ಧಾರವು ನ್ಯೂಜಿಲೆಂಡ್ ಸರ್ಕಾರಕ್ಕೆ ತೆರಿಗೆ ಕಡಿತಕ್ಕೆ ಹಣಕಾಸು ಒದಗಿಸುವಲ್ಲಿ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೊಂದು ಪ್ರಮುಖ ಚುನಾವಣಾ ಭರವಸೆಯಾಗಿದೆ.

ಹಾಗೆಯೇ ತೆರಿಗೆ ಸಂಗ್ರಹದಲ್ಲಿ ಗಣನೀಯ ಕುಸಿತವಾಗುವ ಭೀತಿಯಿಂದ ಮಲೇಷ್ಯಾ ಸರ್ಕಾರವು ತನ್ನ ಸಿಗರೇಟು ನಿಷೇಧ ಕಾಯ್ದೆಯನ್ನು ಹಿಂಪಡೆದಿದೆ. 2021 ರಲ್ಲಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಮಾರಾಟದಿಂದ ಮಲೇಷ್ಯಾವು ಸರಿಸುಮಾರು 3.47 ಬಿಲಿಯನ್ ರಿಂಗಿಟ್ ($ 743 ಮಿಲಿಯನ್) ತೆರಿಗೆ ಆದಾಯ ಗಳಿಸಿದೆ ಎಂದು ಇತ್ತೀಚಿನ ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಡಿಸೆಂಬರ್ 2022 ರಲ್ಲಿ, ನ್ಯೂಜಿಲೆಂಡ್ ವಿಶ್ವದ ಅತ್ಯಂತ ಕಠಿಣ ಸಿಗರೇಟು ನಿಷೇಧ ಕಾಯ್ದೆಯನ್ನು ಜಾರಿ ಮಾಡಿತ್ತು. ಯುವ ಪೀಳಿಗೆಗೆ ತಂಬಾಕು ಮಾರಾಟ ನಿಷೇಧಿಸುವ, ಸಿಗರೇಟುಗಳಲ್ಲಿ ನಿಕೋಟಿನ್ ಮಟ್ಟವನ್ನು ನಿರ್ಬಂಧಿಸುವ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿಸಲಾದ ಅಂಗಡಿಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಸಮಗ್ರ ಕಾನೂನು ಹೊಂದಿದೆ.

ಇದನ್ನೂ ಓದಿ : 5 ಲಕ್ಷ ಅಕ್ರಮ ವಲಸಿಗರನ್ನು ಹೊರಹಾಕಿದ ಪಾಕಿಸ್ತಾನ

ABOUT THE AUTHOR

...view details