ETV Bharat / international

5 ಲಕ್ಷ ಅಕ್ರಮ ವಲಸಿಗರನ್ನು ಹೊರಹಾಕಿದ ಪಾಕಿಸ್ತಾನ

author img

By ETV Bharat Karnataka Team

Published : Jan 3, 2024, 2:40 PM IST

ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿದ್ದ 5 ಲಕ್ಷ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲಾಗಿದೆ.

500,000 illegal immigrants repatriated from Pakistan
500,000 illegal immigrants repatriated from Pakistan

ಇಸ್ಲಾಮಾಬಾದ್ : ಸರಕಾರದ ಗಡಿಪಾರು ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ 5,00,000ಕ್ಕೂ ಅಧಿಕ ಅಕ್ರಮ ವಲಸಿಗರನ್ನು ದೇಶದಿಂದ ವಾಪಸ್ ಕಳುಹಿಸಲಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯ ಸೆನೆಟ್ ಅಥವಾ ಸಂಸತ್ತಿನ ಮೇಲ್ಮನೆಗೆ ಮಾಹಿತಿ ನೀಡಿದೆ. ವಾಪಸಾತಿ ಮತ್ತು ಗಡೀಪಾರು ಅಭಿಯಾನದ ಪ್ರಸ್ತುತ ಸ್ಥಿತಿಯ ಬಗ್ಗೆ ಸೆನೆಟರ್ ಮೊಹ್ಸಿನ್ ಅಜೀಜ್ ಎತ್ತಿದ ಪ್ರಶ್ನೆಗಳಿಗೆ ಸಚಿವಾಲಯ ಉತ್ತರಿಸಿದೆ.

"ಸುಮಾರು 1.7 ಮಿಲಿಯನ್ ಅಕ್ರಮ ವಲಸಿಗರು ದೇಶದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಅಫ್ಘಾನಿಸ್ತಾನದವರು. ನಮ್ಮ ದೇಶದಲ್ಲಿ ವಾಸಿಸಲು ಅಗತ್ಯವಾದ ಯಾವುದೇ ಕಾನೂನಾತ್ಮಕ ದಾಖಲೆಗಳಿಲ್ಲದೆ ಅವರು ಇಲ್ಲಿದ್ದಾರೆ. ಅಕ್ರಮ ನಿವಾಸಿಗಳ ಗಡಿಪಾರು ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದ ನಂತರ ಸರಿಸುಮಾರು 5,41,210 ಜನರನ್ನು ವಾಪಸ್ ಕಳುಹಿಸಲಾಗಿದೆ" ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಇನ್ನೂ 1.15 ಮಿಲಿಯನ್ ಅಕ್ರಮ ವಲಸಿಗರು ದೇಶದಲ್ಲಿ ನೆಲೆಸಿದ್ದಾರೆ. ಇವರನ್ನು ಸರ್ಕಾರದ ರಾಷ್ಟ್ರವ್ಯಾಪಿ ಗಡೀಪಾರು ಅಭಿಯಾನದ ಭಾಗವಾಗಿ ಸ್ವದೇಶಕ್ಕೆ ಕಳುಹಿಸಲಾಗುವುದು ಎಂದು ಅದು ಹೇಳಿದೆ. "ಉಳಿದವರನ್ನು ಗುರುತಿಸಿ ಗಡಿಪಾರು ಮಾಡುವ ಪ್ರಯತ್ನಗಳು ನಡೆಯುತ್ತಿವೆ. 5,00,000 ಅಕ್ರಮ ವಲಸಿಗರ ಪೈಕಿ ಶೇಕಡಾ 95 ಕ್ಕೂ ಹೆಚ್ಚು ಅಫ್ಘಾನ್ ಪ್ರಜೆಗಳಿದ್ದಾರೆ" ಎಂದು ಮೂಲಗಳು ದೃಢಪಡಿಸಿವೆ.

ಪಾಕಿಸ್ತಾನವು ದಶಕಗಳಿಂದ ತನ್ನ ದೇಶದಲ್ಲಿ ವಾಸಿಸುತ್ತಿರುವ ಕನಿಷ್ಠ 1.7 ಮಿಲಿಯನ್ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಗುರಿಯನ್ನು ಹೊಂದಿದೆ. ಅಕ್ರಮ ವಲಸಿಗರಲ್ಲಿ ಹೆಚ್ಚಿನವರು ಅಫ್ಘಾನ್ ಪ್ರಜೆಗಳು. ಭದ್ರತೆ ಮತ್ತು ಸುರಕ್ಷತೆಯ ಕಾರಣದಿಂದಾಗಿ ಇವರೆಲ್ಲ ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿ ಪಾಕಿಸ್ತಾನಕ್ಕೆ ಓಡಿ ಬಂದಿದ್ದಾರೆ. ಅಕ್ಟೋಬರ್ 2023 ರಲ್ಲಿ ಸರ್ಕಾರವು ಎಲ್ಲಾ ಅಕ್ರಮ ವಲಸಿಗರಿಗೆ ಅಕ್ಟೋಬರ್ 31 ರೊಳಗೆ ದೇಶವನ್ನು ತೊರೆಯುವಂತೆ ಅಂತಿಮ ಗಡುವು ನೀಡಿತ್ತು. ಗಡುವು ಮುಗಿದ ನಂತರ ಬಲವಂತದಿಂದ ಅವರನ್ನು ಹೊರಹಾಕುವುದಾಗಿ ಪಾಕಿಸ್ತಾನ ಸರ್ಕಾರ ಎಚ್ಚರಿಕೆ ನೀಡಿತ್ತು.

ನಿಗದಿತ ಗಡುವು ಮುಗಿದ ನಂತರ ಪಾಕಿಸ್ತಾನ ಸರ್ಕಾರವು ಔಪಚಾರಿಕವಾಗಿ ವಲಸಿಗರನ್ನು ಹೊರದಬ್ಬುವ ಕಾರ್ಯಾಚರಣೆ ಆರಂಭಿಸಿದೆ. ಈ ಸಂದರ್ಭದಲ್ಲಿ ಅಕ್ರಮವಾಗಿ ನೆಲೆಸಿದ್ದ ಅನೇಕರನ್ನು ಬಂಧಿಸಲಾಗಿದೆ. ಬಂಧಿತ ವಿದೇಶಿ ಪ್ರಜೆಗಳಲ್ಲಿ ಹೆಚ್ಚಿನವರು ಅಫ್ಘಾನಿಸ್ತಾನದವರಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಬದುಕಲು ತಮಗೆ ಯಾವುದೇ ಆಧಾರ ಇಲ್ಲದ್ದರಿಂದ ಪಾಕಿಸ್ತಾನದಲ್ಲಿಯೇ ಉಳಿಯಲು ಅವಕಾಶ ನೀಡಬೇಕೆಂದು ಇವರೆಲ್ಲ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ : ಇಮ್ರಾನ್ ಖಾನ್, ಮತ್ತವರ ಪಕ್ಷ ಪಿಟಿಐ ಈಗಲೂ ಪಾಕಿಸ್ತಾನದಲ್ಲಿ ಜನಪ್ರಿಯ; ಸಮೀಕ್ಷಾ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.