ವಿಶ್ವಸಂಸ್ಥೆ:ಮಂಗಳವಾರ ಇಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಪಾಲ್ಗೊಂಡ ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್, "ಭಾರತದಿಂದ ನಮಸ್ತೆ..." ಎನ್ನುತ್ತಾ ತಮ್ಮ ಭಾಷಣ ಆರಂಭಿಸಿದರು. "ಪ್ರಜಾಪ್ರಭುತ್ವದ ಪ್ರಾಚೀನ ಸಂಪ್ರದಾಯಗಳು ಮತ್ತು ಆಳವಾದ ಆಧುನಿಕ ಬೇರುಗಳನ್ನು ಒಳಗೊಂಡಿರುವ ಸಮಾಜಕ್ಕಾಗಿ ನಾನು ಮಾತನಾಡುತ್ತಿದ್ದೇನೆ. ನಮ್ಮ ಆಲೋಚನೆ, ಅಭ್ಯಾಸ ಮತ್ತು ಕಾರ್ಯಗಳು ಹೆಚ್ಚು ಸಂಘಟಿತವಾಗಿವೆ. ಸದ್ಯದ ಜಾಗತಿಕ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಪೂರಕವಾಗಿವೆ'' ಎಂದು ಅವರು ಹೇಳಿದರು.
''ನಾವು ಸಂಪ್ರದಾಯ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಕೆಲಸ ಮಾಡುತ್ತಿದ್ದೇವೆ. ಎರಡನ್ನೂ ಸಮಾನ ವಿಶ್ವಾಸದ ಹಾದಿಯ ಮೇಲೆ ತರುತ್ತೇವೆ. ಈ ಸಮ್ಮಿಲನವೇ ಪ್ರಸ್ತುತ ಭಾರತವನ್ನು ವ್ಯಾಖ್ಯಾನಿಸುತ್ತದೆ. ನಮ್ಮ ದೇಶವು ಚಂದ್ರಯಾನ-3ರ ಯೋಜನೆಯ ಯಶಸ್ಸಿನ ಮೂಲಕ ತಾನು ಏನೆಂಬುದನ್ನು ಇಡೀ ಜಗತ್ತಿಗೆ ತೋರಿಸಿದೆ'' ಎಂದು ಜೈಶಂಕರ್ ತಿಳಿಸಿದರು.
ನಾವು ಸೇತುವೆಯಾಗಿ ನಿಂತಿದ್ದೇವೆ:''ವಿಶ್ವದಲ್ಲಿ ಉತ್ತರ-ದಕ್ಷಿಣ ಎಂಬ ಒಡಕು ನಿವಾರಣೆಗೆ ನಾವು ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಪೂರ್ವ-ಪಶ್ಚಿಮವನ್ನು ಒಂದಾಗಿಸುವ ಕೆಲಸ ಮಾಡುತ್ತಿದ್ದೇವೆ. ಇಂದು ಮಾನವೀಯತೆ ಎದುರಿಸುತ್ತಿರುವ ಸವಾಲುಗಳನ್ನು ಜಯಿಸಲು ನಾವು ಬಲಿಷ್ಠ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತಿದ್ದೇವೆ ಎಂದರು.
''ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತ ಪರಿವರ್ತನೆಯನ್ನು ಅನುಸರಿಸಲು ಉತ್ಸುಕವಾಗಿವೆ. ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ ಎಂಬ ನಮ್ಮ ಘೋಷಣೆಯನ್ನು ಜಗತ್ತು ನಂಬುತ್ತಿದೆ. ನಮ್ಮ ದೇಶವನ್ನು ಪರಿಹಾರ ತಯಾರಕನಾಗಿ ಇಂದು ನೋಡಲಾಗುತ್ತಿದೆ'' ಎಂದು ತಿಳಿಸಿದರು.
ಭಾರತದಲ್ಲಿ ಜಿ20 ಶೃಂಗಸಭೆ:ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ಜಾಗತಿಕ ಮಹತ್ವದ ಜಿ20 ಶೃಂಗಸಭೆಯಲ್ಲಿ 'ಭಾರತ'ವನ್ನು ಪ್ರತಿನಿಧಿಸುವ ನಾಯಕ ಎಂದು ಗುರುತಿಸಲ್ಪಟ್ಟರು. ಈ ಸಂದರ್ಭದಲ್ಲಿ ಸರ್ಕಾರವು ಹಲವಾರು ಅಧಿಕೃತ ಜಿ20 ದಾಖಲೆಗಳಲ್ಲಿ ಇಂಡಿಯಾದ ಬದಲಾಗಿ 'ಭಾರತ್' ಎಂಬ ಹೆಸರನ್ನು ಬಳಸಿತ್ತು.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ20 ಪ್ರತಿನಿಧಿಗಳು ಮತ್ತು ಇತರ ಅತಿಥಿಗಳಿಗೆ ಔತಣಕೂಟದ ಆಹ್ವಾನ ಕಳುಹಿಸಿದ್ದರು. ಈ ಆಹ್ವಾನ ಪತ್ರಿಕೆಯಲ್ಲಿ ಇಂಡಿಯಾದ ಬದಲಿಗೆ ಭಾರತ ಎಂದು ನಮೂದಿಸುವ ಮೂಲಕ ದೇಶದ ಹೆಸರಿನಿಂದ 'ಇಂಡಿಯಾ'ವನ್ನು ಕೈಬಿಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ರಾಜಕೀಯ ಗದ್ದಲ ಎಬ್ಬಿಸಿದ್ದವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಲು ಮಾಡಿಕೊಂಡಿರುವ ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಎಂದು ಹೆಸರಿಸಿರುವುದಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಟೀಕಿಸಲಾಗಿತ್ತು.
ಇದನ್ನೂ ಓದಿ:INDIA vs Bharat... ಈ ಎರಡೂ ಹೆಸರುಗಳ ಸುತ್ತಲಿನ ಇತಿಹಾಸ ಏನು.. ಏನಿದರ ಸಂಕ್ಷಿಪ್ತ ನೋಟ!