ಕರ್ನಾಟಕ

karnataka

ಖಾಕಿ ತೊಟ್ಟ ಡಾಲಿ.. ಹೊಯ್ಸಳ ಚಿತ್ರದ ಮೊದಲ ಹಾಡು ಬಿಡುಗಡೆ

By

Published : Feb 25, 2023, 5:50 PM IST

Updated : Feb 25, 2023, 6:00 PM IST

ಡಾಲಿ ಧನಂಜಯ್​ ಅಭಿನಯದ ಹೊಯ್ಸಳ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಆಗಿದೆ.

Hoysala movie first song
ಹೊಯ್ಸಳ ಚಿತ್ರದ ಹಾಡು ಬಿಡುಗಡೆ

ಕನ್ನಡ, ತೆಲುಗು ಚಿತ್ರರಂಗದಲ್ಲಿ ಅತ್ಯುತ್ತಮ ಅಭಿನಯದಿಂದ ಸಿನಿಪ್ರಿಯರ ಹೃದಯ ಗೆದ್ದಿರುವ ಸ್ಯಾಂಡಲ್​ವುಡ್​​ ನಟ ಡಾಲಿ ಧನಂಜಯ್. ಅಭಿನಯದ ಜೊತೆಗೆ ಹೊಸ ಪ್ರತಿಭೆಗಳ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಧನಂಜಯ್ ಈಗ 'ಹೊಯ್ಸಳ'ನಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಟೀಸರ್​ನಿಂದಲೇ ಸೌಂಡ್ ಮಾಡುತ್ತಿರುವ ಹೊಯ್ಸಳ ಚಿತ್ರದ ಭರ್ಜರಿ ಮಾಸ್ ಸಾಂಗ್ ಒಂದು ಅನಾವರಣಗೊಂಡಿದೆ.

'ಸಳ ಸಳ ಹೊಯ್ಸಳ'ಚಿತ್ರದ ಟೈಟಲ್ ಟ್ರ್ಯಾಕ್ ಇದಾಗಿದ್ದು, ತಮ್ಮ ಅಮೋಘ ಕಂಠದಿಂದ ಜನಪ್ರಿಯರಾಗಿರುವ ನಕಾಶ್ ಅಜೀಜ್ ಅವರು ಈ ಸಾಂಗ್​ ಅನ್ನು ಅಮೋಘವಾಗಿ ಹಾಡಿದ್ದಾರೆ. Rapಗೆ ಯೋಗಿ ಬಿ ಧ್ವನಿಯಾಗಿದ್ದಾರೆ. ಸಂತೋಷ್ ಆನಂದ್​​ ರಾಮ್ ಈ ಹಾಡನ್ನು ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಸಿಸಿ ಪಂದ್ಯದ ಸಂದರ್ಭ ಈ ಹಾಡು ಪ್ಲೇ ಆಗಿದೆ. ಕ್ರೀಡಾಂಗಣದಲ್ಲಿದ್ದ ಗಣ್ಯರು ಹಾಗೂ ಪ್ರೇಕ್ಷಕರು ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಾಮಾಜಿಕ ತಾಣದಲ್ಲೂ ಹಾಡಿಗೆ ಭಾರೀ‌ ಪ್ರಶಂಸೆ ವ್ಯಕ್ತವಾಗುತ್ತಿದೆ.

ನಟರಾಕ್ಷಸ ಎಂದೇ ಖ್ಯಾತರಾಗಿರುವ ಡಾಲಿ ಧನಂಜಯ್ ಅವರ 25ನೇ ಸಿನಿಮಾ ಆಗಿರೋ‌ ಹೊಯ್ಸಳ ಚಿತ್ರದಲ್ಲಿ, ಸಲಗ ಚಿತ್ರದ ನಂತರ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧನಂಜಯ್‌ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ನಡೆದಿರುವ ಘಟನೆಯನ್ನು ಆಧರಿಸಿರೋ ಕಥೆಯಾಗಿದೆ.

ಈ ಹಿಂದೆ ಗಣೇಶ್ ನಟನೆಯ ಗೀತಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಬಳಿಕ‌ ಧನಂಜಯ್ ಜೊತೆ ಅಮೃತ ಅಯ್ಯಂಗಾರ್ ಜೋಡಿಯಾಗಿದ್ದಾರೆ. ‌ಇವರ ಜೊತೆಗೆ ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಸೇರಿದಂತೆ ಸಾಕಷ್ಟು ಕಲಾವಿದರು ಈ‌ ಚಿತ್ರದಲ್ಲಿ ನಟಿಸಿದ್ದಾರೆ‌.

ಇದನ್ನೂ ಓದಿ:'ಗಂಗೂಬಾಯಿ ಕಥಿಯಾವಾಡಿ'ಗೆ ಒಂದು ವರ್ಷ: ಬನ್ಸಾಲಿಯೊಂದಿಗಿನ ಫೋಟೋ ಹಂಚಿಕೊಂಡ ಆಲಿಯಾ

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಮಾಗಳ ಬ್ಯಾಂಕ್‌ ಹೊಂದಿರುವ ನಟರ ಪೈಕಿ ಧನಂಜಯ್ ಕೂಡ ಒಬ್ಬರು. ಕೆಆರ್​ಜಿ ಸ್ಟುಡಿಯೋಸ್‌ ಮೂಲಕ ಕಾರ್ತಿಕ್‌ ಹಾಗೂ ಯೋಗಿ ಜಿ ರಾಜ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶಕರಾಗಿದ್ದು, ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕೆ ಇದೆ.

ಇದನ್ನೂ ಓದಿ:"ಆತ ಒಳ್ಳೆಯವನೋ ಕೆಟ್ಟವನೋ ಜಡ್ಜ್ ಮೆಂಟ್​ಗೆ ಸಿಗವಲ್ದು" ಇದು ಹೊಯ್ಸಳನ ಖದರ್

ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕುತೂಹಲ ಮೂಡಿಸಿದೆ. ಹಾಗಾಗಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ನಿರೀಕ್ಷೆ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಆ‌ ನಿರೀಕ್ಷೆಯಂತೆ ಮಾರ್ಚ್ 30ರಂದು ರಾಜ್ಯ ಅಲ್ಲದೇ ವಿಶ್ವದಾದ್ಯಂತ ಹೊಯ್ಸಳ ಸಿನಿಮಾ ಬಿಡುಗಡೆ ಆಗೋದು ಪಕ್ಕಾ ಅಂತಾ ‌ಚಿತ್ರತಂಡ ಅನೌನ್ಸ್​​ ಮಾಡಿದೆ. ಇನ್ನೂ ಹೊಯ್ಸಳ ಚಿತ್ರ ನಟ ಧನಂಜಯ್‌ ಅವರ 25ನೇ ಸಿನಿಮಾ ಎಂಬ ಕಾರಣಕ್ಕೆ‌ ಅಭಿಮಾನಿಗಳಲ್ಲಿ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ.

Last Updated : Feb 25, 2023, 6:00 PM IST

ABOUT THE AUTHOR

...view details