ETV Bharat / entertainment

'ಗಂಗೂಬಾಯಿ ಕಥಿಯಾವಾಡಿ'ಗೆ ಒಂದು ವರ್ಷ: ಬನ್ಸಾಲಿಯೊಂದಿಗಿನ ಫೋಟೋ ಹಂಚಿಕೊಂಡ ಆಲಿಯಾ

author img

By

Published : Feb 25, 2023, 5:16 PM IST

'ಗಂಗೂಬಾಯಿ ಕಥಿಯಾವಾಡಿ' ಬಿಡುಗಡೆ ಆಗಿ ಒಂದು ವರ್ಷ ಪೂರೈಸಿದೆ.

Gangubai Kathiawadi First Anniversary
ಬನ್ಸಾಲಿಯೊಂದಿಗಿನ ಫೋಟೋ ಹಂಚಿಕೊಂಡ ಆಲಿಯಾ

ಬಾಲಿವುಡ್​ ಚಿತ್ರರಂಗದ ಹಿರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮತ್ತು ಬಹುಬೇಡಿಕೆ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ತೆರೆಕಂಡು ಇಂದಿಗೆ ಒಂದು ವರ್ಷ ಪೂರೈಸಿದೆ. ಸೂಪರ್​ ಹಿಟ್ ಚಿತ್ರದ ಮೊದಲ ವಾರ್ಷಿಕೋತ್ಸವದಂದು ಆಲಿಯಾ ಭಟ್ ಅವರು ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗಿನ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ವರ್ಷದ ನಮ್ಮ ಗಂಗು ಎಂದು ಬರೆದು ಹೃದಯದ ಇಮೋಜಿ ಹಾಕಿ, ಗಂಗೂಬಾಯಿ ಜಿಂದಾಬಾದ್​​, ಗಂಗೂಗಳು ಸುರಕ್ಷಿತ ಎಂದು ಬರೆದುಕೊಂಡಿದ್ದಾರೆ.

'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ವಿವಾದಗಳನ್ನು ಎದುರಿಸಿ ಕಳೆದ ಫೆಬ್ರವರಿ 25ರಂದು ತೆರೆ ಕಂಡಿತ್ತು. ಟೀಕೆಗಳ ನಡುವೆಯೂ ಚಿತ್ರ ಯಶಸ್ಸು ಕಂಡಿತು. 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿನ ಅಭಿನಯಕ್ಕಾಗಿ 2023ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ನಟಿ 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Gangubai Kathiawadi First Anniversary
'ಗಂಗೂಬಾಯಿ ಕಥಿಯಾವಾಡಿ'

'ಗಂಗೂಬಾಯಿ ಕಥಿಯಾವಾಡಿ' ಚಿತ್ರವು ಆಲಿಯಾ ಭಟ್ ಅವರ ಅತ್ಯಂತ ಯಶಸ್ವಿ ಚಿತ್ರ ಮತ್ತು ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿದ ಸಿನಿಮಾ. ಈ ಚಲನಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಚಿತ್ರದ ಬಿಡುಗಡೆಗೂ ಮೊದಲು ಮತ್ತು ನಂತರ ನಿರ್ದೇಶಕ ಮತ್ತು ನಟಿ ಕಟು ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ ಆಲಿಯಾ ಭಟ್​ ಅವರ 'ಗಂಗೂಬಾಯಿ' ನಟನೆ ದೊಡ್ಡ ಮನ್ನಣೆ ಗಳಿಸಿತು. ಅಜಯ್ ದೇವಗನ್ ಮತ್ತು ಶಂತನು ಮಹೇಶ್ವರಿ ಕೂಡ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಬಾಲಿವುಡ್​ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಕಾಲ್ಪನಿಕ ಜಗತ್ತಿಗೆ ಕರೆದೊಯ್ಯಲು ಇಷ್ಟಪಡುತ್ತಾರೆ. ಈ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ವೇಶ್ಯಾಗೃಹದಿಂದ ಬರುವ ಗಂಗೂಬಾಯಿ ಪ್ರಧಾನ ಮಂತ್ರಿಗಳಿಗೆ ತಮ್ಮ ಸಂದೇಶವನ್ನು ತಿಳಿಸುವ ಈ ಚಿತ್ರ ಭಾರತದಲ್ಲಿ ಐವತ್ತರ ಯುಗದ ಕಥಾವಸ್ತುವನ್ನು ಬಹಿರಂಗಪಡಿಸುತ್ತದೆ.

ಇನ್ನು, ನಿರ್ದೇಶಕರು ನಿನ್ನೆ ತಮ್ಮ 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಚಿತ್ರೋದ್ಯಮದ ಹಲವು ಗಣ್ಯರು ಈ ಪಾರ್ಟಿಗೆ ಸಾಕ್ಷಿಯಾಗಿದ್ದರು. ಜುಲೈನಲ್ಲಿ ನಿರ್ದೇಶಕ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಆಲಿಯಾ ಭಟ್​ ನಟಿಸುತ್ತಿದ್ದಾರೆ.

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹೆಚ್ಚಿನ ಸಿನಿಮಾಗಳು ವಿವಾದಗಳನ್ನು ಎದುರಿಸಿಯೇ ಬಿಡುಗಡೆ ಆಗಿವೆ. ನಿರ್ದೇಶಕರ ಕೊನೆಯ ಕೆಲ ಚಿತ್ರಗಳು ಸಹ ಹಲವರಿಂದ ಆಕ್ರೋಶ ಎದುರಿಸಿದೆ. ಬಿಡುಗಡೆಯ ದಿನವೂ ಜನರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಕೊನೆಯ ನಿರ್ದೇಶನ ಚಿತ್ರ ಇದೇ 'ಗಂಗೂಬಾಯಿ ಕಥಿಯಾವಾಡಿ'. ಈ ಸಿನಿಮಾ ಬಗ್ಗೆ ಎರಡು ಕಡೆಯಿಂದ ವಿವಾದ ಇತ್ತು. ಚಲನಚಿತ್ರವನ್ನು ಆಧರಿಸಿದ ಮಹಿಳೆಯ ಕುಟುಂಬ (ಗಂಗೂಬಾಯಿ) ಮತ್ತು ಚಿತ್ರ ಸೆಟ್ಟೇರಿರುವ ಪ್ರದೇಶದ (ಕಥಿಯಾವಾಡಿ) ಜನರು ಇದನ್ನು ತೀವ್ರವಾಗಿ ವಿರೋಧಿಸಿದ್ದರು.

ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿ ಜನ್ಮದಿನ: ವಿರೋಧದ ನಡುವೆಯೂ ಹಿಟ್ ಆದ ಸಿನಿಮಾಗಳಿವು!

ತಮ್ಮ ನಿರ್ದೇಶನದಿಂದಾಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಈ ಪೈಕಿ 4 ರಾಷ್ಟ್ರೀಯ ಪ್ರಶಸ್ತಿಗಳು, 10 ಫಿಲ್ಮ್‌ಫೇರ್ ಪ್ರಶಸ್ತಿಗಳು ಜೊತೆಗೆ ಕೆಲ ವಿದೇಶಿ ಪ್ರಶಸ್ತಿಗಳನ್ನು ಪಡೆದಿರುವ ಇವರು 'BAFTA' ನಲ್ಲಿ ನಾಮನಿರ್ದೇಶನವನ್ನೂ ಸ್ವೀಕರಿಸಿದ್ದಾರೆ. ಇದಲ್ಲದೇ ಭಾರತದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಖ್ಯಾತ ನಿರ್ದೇಶಕ ಬನ್ಸಾಲಿ ಬತ್ತಳಿಕೆಯಿಂದ ಬಂದ ಟಾಪ್​ 10 ಚಿತ್ರಗಳಿವು..

'ಹೀರಾಮಂಡಿ' ಇವರ ಮುಂದಿನ ವೆಬ್ ಸರಣಿ. 1940ರ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಹೀರಾಮಂಡಿ ಎಂಬ ಜಿಲ್ಲೆಯ ಸಾಂಸ್ಕೃತಿಕ ವಾಸ್ತವತೆಯನ್ನು ಬಿಂಬಿಸುವ ಚಿತ್ರವಿದು. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ ಸಂಜೀದಾ ಶೇಖ್​ ಹಾಗೂ ಶರ್ಮಿನ್ ಸೆಗಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಲಾಹೋರ್‌ನ ವೇಶ್ಯೆಯರು ಮತ್ತು ಅವರ ಜೀವನವನ್ನು ಆಧರಿಸಿದೆ ಎಂದು ಹೇಳಲಾಗಿದ್ದು, 'ಗಂಗೂಬಾಯಿ ಕಥಿಯಾವಾಡಿ' ಕೂಡ ವೇಶ್ಯೆಯರ ಜೀವನ ಕುರಿತ ಕಥೆಯೇ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.