ಕರ್ನಾಟಕ

karnataka

ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್​ ನಿಧನ...ಮೋದಿ ಸೇರಿ ಅನೇಕರ ಸಂತಾಪ

By

Published : Sep 21, 2022, 10:46 AM IST

Updated : Sep 21, 2022, 12:33 PM IST

Comedian Raju Srivastava
Comedian Raju Srivastava ()

ಏಮ್ಸ್​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಉತ್ತರ ಪ್ರದೇಶದ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್ ಇಂದು ನಿಧನರಾಗಿದ್ದಾರೆ.

ನವದೆಹಲಿ: ಜಿಮ್​​ನಲ್ಲಿ ವರ್ಕೌಟ್​ ಮಾಡುತ್ತಿದ್ದಾಗ ಹೃದಯಾಘಾತವಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್​ (58) ಇಂದು ನಿಧನರಾಗಿದ್ದಾರೆ.

ಸ್ಟ್ಯಾಂಡ್-ಅಪ್​ ಕಮೇಡಿಯನ್​(stand-up comedian) ಆಗಿರುವ ರಾಜು ಶ್ರೀವಾಸ್ತವ್ ಆಗಸ್ಟ್​ 10 ರಂದು​​ ಜಿಮ್​​ನಲ್ಲಿ ದೈಹಿಕ ಕಸರತ್ತು ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ದೆಹಲಿ ಏಮ್ಸ್‌ಗೆ​ ಕರೆತರಲಾಗಿತ್ತು. ಮೂಲತಃ ಕಾನ್ಪುರ ಮೂಲದವರಾಗಿರುವ ಇವರು, ಉತ್ತರ ಪ್ರದೇಶ ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ರಾಜು ಶ್ರೀವಾಸ್ತವ್ ಅವರ ಮಿದುಳು ನಿಷ್ಕ್ರೀಯವಾಗಿದೆ​ ಎಂದು ಹೇಳಲಾಗಿತ್ತು. ಇದಕ್ಕೂ ಮುನ್ನ ಅವರಿಗೆ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿತ್ತು. ಆಗಸ್ಟ್​ 25ರಂದು ಅವರಿಗೆ ಪ್ರಜ್ಞೆ ಬಂದಿತ್ತು ಎಂದು ಆಸ್ಪತ್ರೆಯ ವೈದ್ಯ ಗರ್ವಿತ್ ನರಂಗ್ ಮಾಹಿತಿ ನೀಡಿದ್ದರು. ಏಮ್ಸ್​​ನಲ್ಲಿ ಕಳೆದ 30 ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಹಾಸ್ಯನಟ ಇದೀಗ ಇಹಲೋಕದ ಪಯಣ ಮುಗಿಸಿದ್ದಾರೆ.

ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಾಜು ಶ್ರೀವಾಸ್ತವ್​, ಮೈನೇ ಪ್ಯಾರ್ ಕಿಯಾ, ಮೈನ್ ಪ್ರೇಮ್ ಕಿ ದಿವಾನಿ ಹೂ, ಆಮ್ದಾನಿ ಅಥಾನಿ ಖರ್ಚಾ ರುಪೈಯಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಮತ್ತು ಬಿಗ್ ಬಾಸ್ 3 ನಂತಹ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದರು.

ಪ್ರಧಾನಿ ಮೋದಿ ಸಂತಾಪ:ಹಾಸ್ಯನಟ ರಾಜು ಶ್ರೀವಾಸ್ತವ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ನಗು, ಹಾಸ್ಯ ಮತ್ತು ಸಕಾರಾತ್ಮಕತೆಯಿಂದ ಅವರು ತಮ್ಮ ಜೀವನ ರೂಪಿಸಿಕೊಂಡಿದ್ದರು. ಬೇಗನೆ ನಮ್ಮನ್ನು ಅಗಲಿದ್ದಾರೆ. ಆದರೆ, ಅಸಂಖ್ಯಾತ ಜನರ ಹೃದಯದಲ್ಲಿ ನೆಲೆಯೂರಿದ್ದಾರೆ. ಅವರ ನಿಧನ ದುಃಖಕರ. ಕುಟುಂಬ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

ಕಂಬನಿ ಮಿಡಿದ ಗಣ್ಯರು:ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಪ್ರಸಿದ್ಧ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್​ ಅವರ ನಿಧನದಿಂದ ತುಂಬಾ ದುಃಖಿತನಾಗಿದ್ದೇನೆ. ಓರ್ವ ಕಲಾವಿದ ಆಗಿರುವುದರ ಜೊತೆಗೆ ಅವರು ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ರೀತಿಯ ಕೆಲಸ ಮಾಡಿದ್ದರು. ಅವರ ಸಾವಿನ ನೋವು ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್​, ಛತ್ತೀಸ್​​ಗಢ ಸಿಎಂ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಚಿತ್ರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, ಸಂಗೀತಗಾರ ಕೈಲಾಸ್ ಖೇರ್​ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Last Updated :Sep 21, 2022, 12:33 PM IST

ABOUT THE AUTHOR

...view details