ಕನ್ನಡದ ಬಿಗ್ ಬಾಸ್ ಶೋ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟ ರೂಪೇಶ್ ಶೆಟ್ಟಿಯ 'ಸರ್ಕಸ್' ಸಿನಿಮಾ ಜೂನ್ 23 ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ತುಳುನಾಡು ಮಾತ್ರವಲ್ಲದೇ ಇಡೀ ಕರ್ನಾಟಕದ ಜನರನ್ನು ಹಾಸ್ಯ ಲೋಕದ ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಬಿಗ್ ಬಾಸ್ ವಿನ್ನರ್ ಆದ ಬಳಿಕ ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಗೆಲ್ಲಿಸಿದ್ದಾರೆ.
'ಸರ್ಕಸ್' ತುಳು ಸಿನಿಮಾ. ಆದರೂ ಈ ಚಿತ್ರ ತುಳು ಭಾಷೆ ಬಲ್ಲವರಿಗೆ ಮಾತ್ರವಲ್ಲ, ಬಾರದವರಿಗೂ ಅರ್ಥವಾಗುವಂತೆ ಕಥೆಯನ್ನು ಕಟ್ಟಿಕೊಡಲಾಗಿದೆ. ಇದಕ್ಕೂ ಮೊದಲು ರೂಪೇಶ್ ಶೆಟ್ಟಿ ಅಭಿನಯಿಸಿದ್ದ 'ಗಿರಿಗಿಟ್' ಎಂಬ ತುಳು ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಅದಕ್ಕೂ ಮೊದಲು ಮತ್ತು ನಂತರದಲ್ಲಿ ಕೆಲವು ಸಿನಿಮಾಗಳಲ್ಲಿ ರೂಪೇಶ್ ಶೆಟ್ಟಿ ನಟಿಸಿದ್ದರಾದರೂ ಅದೃಷ್ಟ ಕೂಡಿ ಬಂದಿರಲಿಲ್ಲ. ಇದೀಗ 'ಸರ್ಕಸ್' ಕೂಡ 'ಗಿರಿಗಿಟ್'ನಂತೆ ಸೂಪರ್ ಹಿಟ್ ಆಗಿದೆ.
ಸಿನಿಮಾವನ್ನು ಈಗಾಗಲೇ ಅನೇಕರು ವೀಕ್ಷಿಸಿದ್ದಾರೆ. ಕರಾವಳಿಯ ಎಲ್ಲಾ ಗಲ್ಲಿಗಲ್ಲಿಯಲ್ಲಿಯೂ ಸರ್ಕಸ್ ಹವಾನೇ ಇದೆ. ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಸೆಳೆಯಲೆಂದೇ ಕಾಲೇಜು ಕಾಲೇಜಿಗೆ ಭೇಟಿ ನೀಡಿ 'ಸರ್ಕಸ್' ಚಿತ್ರತಂಡ ಪ್ರಚಾರವನ್ನು ಮಾಡಿದೆ. ಅದ್ಭುತ ಕಾಮಿಡಿಯನ್ನು ಒಳಗೊಂಡ ಈ ಚಿತ್ರ ತನ್ನ ಕಥೆಯಿಂದಲೇ ಸೂಪರ್ ಹಿಟ್ ಆಗಿರುವುದಂತು ನಿಜ.
ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಚಿತ್ರವು ಭರ್ಜರಿ ಸಕ್ಸಸ್ ಕಂಡಿದೆ. ಈ ಸಲುವಾಗಿ 'ಸರ್ಕಸ್' ಸಿನಿಮಾ ಸೆಲೆಬ್ರಿಟಿ ಶೋವನ್ನು ಬೆಂಗಳೂರಿನ ಖಾಸಗಿ ಮಾಲ್ವೊಂದರಲ್ಲಿ ಪ್ರದರ್ಶಿಸಲಾಗಿತ್ತು. ಈ ವೇಳೆ ಬಿಗ್ ಬಾಸ್ ವಿನ್ನರ್ಗೆ ಸಹ ಸ್ಪರ್ಧಿಗಳು ಸಾಥ್ ನೀಡಿದ್ದಾರೆ. ರಾಕೇಶ್ ಅಡಿಗ, ದಿವ್ಯಾ ಉರುಡುಗ, ಅರವಿಂದ್ ಕೆ.ಪಿ, ಸಾನ್ಯ ಅಯ್ಯರ್, ನವಾಜ್, ಸಾನ್ಯಾ ಅಯ್ಯರ್ ತಾಯಿ ದೀಪಾ ಅಯ್ಯರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಸಿಂಪಲ್ ಸುನಿ ಪ್ರಶಂಸೆ:ನಿರ್ದೇಶಕ ಸಿಂಪಲ್ ಸುನಿ 'ಸರ್ಕಸ್' ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ ನಟನೆ ಮತ್ತು ಇಡೀ ಚಿತ್ರತಂಡದ ನಟನೆಯನ್ನು ಹಾಡಿ ಹೊಗಳಿದ್ದಾರೆ. ಇಷ್ಟು ಚೆನ್ನಾಗಿ ಕಾಮಿಡಿ ಮಾಡಬಹುದಾ? ಎಂದು ಆಶ್ಚರ್ಯಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡೈರೆಕ್ಟರ್ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
"ಕೆಲವು ಚಿತ್ರಗಳು ಭಾಷೆ ಗೊತ್ತಿಲ್ಲದಿದ್ದರು, ಭಾವನೆ ಕಟ್ಟಿ ಕೊಡುತ್ತದೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ, ಹಿಡಿಸುತ್ತದೆ. ಅರವಿಂದ್ ಬೋಳಾರ್, ಭೋಜರಾಜ್, ನವೀನ್ ಡಿ ಪಡೀಲ್ ಇವರಿದ್ದರೆ ಕಾಮಿಡಿಗೆ ಬರವಿರುವುದಿಲ್ಲ. ಆದರೆ ಈ ಚಿತ್ರದ ರೈಟಿಂಗ್ ಹಾಗೂ ಟೈಮಿಂಗ್ ಎಷ್ಟು ಚೆನ್ನಾಗಿತ್ತು ಎಂದರೆ ಸಿನಿಮಾ ಮುಗಿಯುವವರೆಗೂ ಪ್ರೇಕ್ಷಕರು ನಗುತ್ತಲೇ ಇದ್ದರು. ಇತ್ತೀಚಿಗೆ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ನೋಡುವುದೇ ಭಾಗ್ಯ. ಅದರಲ್ಲೂ ಅವರು ಎಂಜಾಯ್ ಮಾಡುತ್ತಿದ್ದ ರೀತಿ ಹಾಗೂ ಈ ಚಿತ್ರ ಎಲ್ಲಾ ಕಡೆ ಹೌಸ್ಫುಲ್ ಓಡುತ್ತಿರುವುದು ತುಂಬಾ ಖುಷಿಯ ವಿಷಯ. ಭರಪೂರ ನಗಲು ಬಯಸುವವರು ಈ ಚಿತ್ರಕ್ಕೆ ಭೇಟಿ ಕೊಡುವುದು ಸೂಕ್ತ. Almost ಅರ್ಥವಾಗುತ್ತದೆ, ಇಲ್ಲದಿದ್ದರೂ ಸಬ್ಟೈಟಲ್ಸ್ ಇದೆ. ಇಡೀ ಚಿತ್ರ ತಂಡಕ್ಕೆ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.
ಚಿತ್ರತಂಡ ಹೀಗಿದೆ.. ತುಳು ಸಿನಿಮಾ ರಂಗದಲ್ಲಿ ಅತಿ ದೊಡ್ಡ ಸೂಪರ್ ಹಿಟ್ ಚಿತ್ರ 'ಗಿರಿಗಿಟ್' ಬಳಿಕ ರೂಪೇಶ್ ಶೆಟ್ಟಿ ನಿರ್ದೇಶಿಸಿರುವ 2ನೇ ಚಿತ್ರ ಸರ್ಕಸ್. ಗಿರಿಗಿಟ್ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದಾರೆ. ಸಲಗ ಖ್ಯಾತಿಯ ಯಶ್ ಶೆಟ್ಟಿ ಸರ್ಕಸ್ ಮೂಲಕ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅದೇ ರೀತಿ ರಚನಾ ರೈ ಎಂಬ ನಟಿಯನ್ನೂ ಪರಿಚಯಿಸಲಾಗಿದೆ.
ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಚಂದ್ರಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾರ್, ರೂಪಾ ವರ್ಕಾಡಿ ಹಾಗು ಪಂಚಮಿ ಭೋಜರಾಜ್ ತಾರಾಗಣದಲ್ಲಿದ್ದಾರೆ. ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್ ಲಾಂಛನದಡಿಯಲ್ಲಿ ಸರ್ಕಸ್ ತಯಾರಾಗಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾವರ ನಿರ್ಮಿಸಿದ್ದಾರೆ. ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನ ದಾಸ್ ಕ್ಯಾಮರಾ ವರ್ಕ್, ರಾಹುಲ್ ವಶಿಷ್ಠ ಸಂಕಲನ, ಲೋಯ್ ಅವರ ಸಂಗೀತ ಚಿತ್ರಕ್ಕಿದೆ.
ಇದನ್ನೂ ಓದಿ:Actor Ganesh: 'ಕೃಷ್ಣಂ ಪ್ರಣಯ ಸಖಿ' ಬೆನ್ನಲ್ಲೇ 42ನೇ ಸಿನಿಮಾ ಘೋಷಿಸಿದ ಗೋಲ್ಡನ್ ಸ್ಟಾರ್ ಗಣೇಶ್