ಕರ್ನಾಟಕ

karnataka

ಸಾಲ ಹಿಂದಿರುಗಿಸಲು ವಿಫಲನಾದ ಕಟ್ಟಡ ಮಾಲೀಕ.. ಬೀದಿಗೆ ಬಿದ್ದ 32ಕ್ಕೂ ಹೆಚ್ಚು ಬಾಡಿಗೆದಾರರು!

By

Published : Oct 6, 2021, 3:10 PM IST

ಮಂಜುನಾಥ್ ಎಂಬುವವರು ಬ್ಯಾಂಕ್​​​ನಿಂದ ಪಡೆದ ಸಾಲ ಹಿಂದಿರುಗಿಸಲು ವಿಫಲರಾದ ಹಿನ್ನೆಲೆ, ಅವರಿಗೆ ಸೇರಿದ 3 ಕಟ್ಟಡಗಳನ್ನು ಬ್ಯಾಂಕ್​​ನವರು ಸೀಜ್ ಮಾಡಿದ್ದಾರೆ. ಈ ಹಿನ್ನೆಲೆ ಕಟ್ಟಡಗಳಲ್ಲಿ ವಾಸವಿದ್ದ 32ಕ್ಕೂ ಹೆಚ್ಚು ಮನೆಯ ಬಾಡಿಗೆದಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

bank staff seized more than 32 house
32ಕ್ಕೂ ಹೆಚ್ಚು ಮನೆ ಸಿಜ್​

ತುಮಕೂರು: ನಗರದ ಬನಶಂಕರಿ ಬಡಾವಣೆಯಲ್ಲಿ ವಾಸವಾಗಿರುವ ಮಂಜುನಾಥ್ ಎಂಬುವವರು ಬ್ಯಾಂಕ್​​​ನಿಂದ ಪಡೆದ ಸಾಲವನ್ನು ಹಿಂದಿರುಗಿಸಲು ವಿಫಲರಾದ ಹಿನ್ನೆಲೆ, ತುಮಕೂರಿನ ಕೆನರಾ ಬ್ಯಾಂಕ್​​​​ನಿಂದ ಅವರಿಗೆ ಸೇರಿದ 2 ಬಿಲ್ಡಿಂಗ್, ಮಹಿಳಾ ಬ್ಯಾಂಕ್​​​​ನಿಂದ 1 ಬಿಲ್ಡಿಂಗ್ ಸೇರಿದಂತೆ ಒಟ್ಟು 3 ಕಟ್ಟಡಗಳನ್ನು ಬ್ಯಾಂಕ್​​ನವರು ಸೀಜ್ ಮಾಡಿದ್ದಾರೆ. ಈ ಹಿನ್ನೆಲೆ ಕಟ್ಟಡಗಳಲ್ಲಿ ವಾಸವಿದ್ದ 32ಕ್ಕೂ ಹೆಚ್ಚು ಮನೆಯ ಬಾಡಿಗೆದಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

32ಕ್ಕೂ ಹೆಚ್ಚು ಮನೆ ಸಿಜ್​ - ಪ್ರತಿಕ್ರಿಯೆ

ನಗರದ ಬನಶಂಕರಿ ಬಡಾವಣೆಯ 2ನೇ ಮುಖ್ಯರಸ್ತೆಯಲ್ಲಿ ಇರುವ ಮಂಜುನಾಥ್​​ಗೆ ಒಂದು ತಿಂಗಳ ಹಿಂದೆ ಬ್ಯಾಂಕ್ ವತಿಯಿಂದ ಮನೆ ನೋಟಿಸ್ ನೀಡಲಾಗಿತ್ತು. ನಿನ್ನೆ ರಾತ್ರಿ ಬ್ಯಾಂಕ್ ಸಿಬ್ಬಂದಿ ಏಕಾಏಕಿ ಬಂದು ಮೂರು ಕಟ್ಟಡದಲ್ಲಿ ವಾಸವಿದ್ದ ಬಾಡಿಗೆದಾರರನ್ನು ಹೊರಗೆ ಕರೆಸಿ 32ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕಿದ್ದಾರೆ. ಇನ್ನು ಕಟ್ಟಡದಲ್ಲಿ ವಾಸವಿದ್ದವರು ಮಳೆಯಲ್ಲಿ ನೆನೆಯುತ್ತಾ, ಆಶ್ರಯಕ್ಕಾಗಿ ಕಣ್ಣೀರಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಟ್ಟಡ ಮಾಲೀಕ ಪ್ರತಿಕ್ರಿಯೆ:

ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ/ಕಟ್ಟಡ ಮಾಲೀಕ ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ, ಒಂದು ತಿಂಗಳ ಹಿಂದೆ ಬ್ಯಾಂಕ್ ವತಿಯಿಂದ ನೋಟಿಸ್ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಾಲ ಮರುಪಾವತಿ ಬಗ್ಗೆ ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಾವು ನಮ್ಮ ಬಳಿ ಇರುವ ಹಣವನ್ನು ಅವರಿಗೆ ಪಾವತಿ ಮಾಡಲು ಸಾಕಷ್ಟು ಪ್ರಯತ್ನಪಟ್ಟರೂ ಅವಕಾಶ ನೀಡದೇ ಇದೀಗ ಬ್ಯಾಂಕ್ ಸಿಬ್ಬಂದಿ ಏಕಾಏಕಿ ಬಂದು ಕಟ್ಟಡದಲ್ಲಿದ್ದ ಬಾಡಿಗೆದಾರರನ್ನು ಬೀದಿಗೆ ತಳ್ಳಿರುವುದು ನಿಜಕ್ಕೂ ನೋವುಂಟು ಮಾಡಿದೆ.

ನಾನು ಮಾಡಿದ ಸಾಲದಿಂದ ಪುಟ್ಟ ಕಂದಮ್ಮಗಳು ಹಾಗೂ ಮಹಿಳೆಯರು ಬೀದಿಗೆ ಬರುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಕೂಡ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾರೆ. ಬುಧವಾರ ಸರ್ಕಾರಿ ರಜೆ ಇರುವುದನ್ನು ಗಮನಿಸಿ, ರಾತ್ರಿ ಏಕಾಏಕಿ ಕಟ್ಟಡದಲ್ಲಿ ವಾಸವಿದ್ದ ಪ್ರತಿ ಮನೆಗಳಿಗೂ ಬೀಗ ಹಾಕುವ ಮೂಲಕ ಅಧಿಕಾರಿಗಳು ಕುಟುಂಬಗಳನ್ನು ಬೀದಿಗೆ ತಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ:ಕಲುಷಿತ ನೀರು ಸೇವನೆ ಪ್ರಕರಣ: ಮಕರಬ್ಬಿ ಪಿಡಿಓ ಅಮಾನತು, ಹಲವರಿಗೆ ನೋಟಿಸ್

32 ಮನೆಗಳಿಗೆ ಬ್ಯಾಂಕ್ ಸಿಬ್ಬಂದಿ ಬೀಗ ಜಡಿದಿದ್ದು, ಸುಮಾರು 150ಕ್ಕೂ ಹೆಚ್ಚು ಜನರು ಬೀದಿಯಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ABOUT THE AUTHOR

...view details