ಕರ್ನಾಟಕ

karnataka

ಏಸೂರು ಕೊಟ್ರು ಈಸೂರು ಕೊಡೆವು.. 1942ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ ಈಸೂರು..

By

Published : Aug 14, 2022, 7:55 PM IST

Updated : Aug 14, 2022, 9:23 PM IST

ಕರ್ನಾಟಕದಲ್ಲಿ ಸ್ವಾತಂತ್ರ್ಯದ ಹೋರಾಟದ ಹಾದಿಯಲ್ಲಿ ಈಸೂರು, ನರಗುಂದ, ನವಲಗುಂದ ಹೋರಾಟಗಳು ಅಡಿಗಲ್ಲಿದ್ದಂತೆ. ಅವುಗಳ ಆಧಾರದಲ್ಲೇ ಸ್ವಾತಂತ್ರ್ಯದ ಕಿಚ್ಚು ಆರಂಭವಾಗಿ 1947ರಲ್ಲಿ ಸಂಪೂರ್ಣ ಸ್ವಾತಂತ್ರ್ಯವಾದದ್ದು.

Shivamogga Esuru village fight for independence
ಈಸೂರು

ಶಿವಮೊಗ್ಗ : ಅದು 1942 ನೇ ಇಸವಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿದ ಕ್ಷಣ. ಆಗ ದೇಶದ್ಯಾಂತ ಕ್ವಿಟ್ ಇಂಡಿಯಾ ಚಳವಳಿಯ ಕಾವು ಹೆಚ್ಚಿತ್ತು. ಭಾರತವನ್ನು ಬ್ರಿಟಿಷರ ದಾಸ್ಯದಿಂದ ಹೊರ ತರುವ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಹೊತ್ತು. ಜಿಲ್ಲೆಯ ಶಿಕಾರಿಪುರ ತಾಲೂಕು ಈಸೂರು ಗ್ರಾಮ ಗಾಂಧೀಜಿ ಕರೆಗೆ ಮನ್ನಣೆ ನೀಡಿದ ಪ್ರಥಮ ಗ್ರಾಮವಾಯಿತು.

ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡ ಪ್ರಥಮ ಗ್ರಾಮ:ತಮ್ಮ ಗ್ರಾಮವನ್ನು ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ಗ್ರಾಮವೆಂದು ಘೋಷಿಸಿಕೊಂಡಿತು. ತಮ್ಮ ಗ್ರಾಮವನ್ನು ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡ ಪ್ರಥಮ ಗ್ರಾಮ ಈಸೂರು ಆಯಿತು. ಗ್ರಾಮದ ಯುವಕರು, ಹಿರಿಯರು ಹೋರಾಟದ ರೂಪುರೇಷೆ ಸಿದ್ಧಪಡಿಸುವುದನ್ನು ಕಂಡ ಗ್ರಾಮದ ಮಕ್ಕಳು ಸಹ ತಮ್ಮನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಿಕೊಂಡರು. ತಮ್ಮ ಗ್ರಾಮಕ್ಕೆ ಯಾರೇ ಸರ್ಕಾರಿ ಅಧಿಕಾರಿಯಾಗಲಿ ಬರಬೇಕಾದರೆ ಗಾಂಧಿ ಟೋಪಿ ಹಾಕಿಕೊಂಡು ಬರಬೇಕು ಎಂದು ಮಕ್ಕಳು ಸಾರಿದ್ದರು.

1942ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮ ಈಸೂರು

ಈಸೂರಿಗೆ ಅಧಿಕಾರಿಗಳು ಕಂದಾಯ ವಸೂಲಿಗೆ ಆಗಮಿಸಿದ್ದರು. ಈ ವೇಳೆ ತಮ್ಮೂರಿಗೆ ಪ್ರವೇಶ ಪಡೆಯಬೇಕಾದಾಗ ನೀವು ಗಾಂಧಿ ಟೋಪಿ ಧರಿಸಬೇಕು ಎಂದು ಮಕ್ಕಳು ಹೇಳಿದಾಗ ತಹಶೀಲ್ದಾರ್ ಟೋಪಿ ಧರಿಸುತ್ತಾರೆ. ಆದರೆ, ಪೊಲೀಸ್ ಟೋಪಿ ಧರಿಸಲು ನಿರಾಕರಿಸಿ ಗ್ರಾಮ ಪ್ರವೇಶಕ್ಕೆ ಮುಂದಾಗುತ್ತಾನೆ. ಈ ವೇಳೆ ಶಾಲಾ ಮಕ್ಕಳು ಪೊಲೀಸಪ್ಪನ ಟೋಪಿ ತೆಗೆದು ಗಾಂಧಿ ಟೋಪಿ ಹಾಕಲು ಮುಂದಾದಾಗ ಮಕ್ಕಳ ಮೇಲೆ ಪೊಲೀಸರು ಹಲ್ಲೆ ನಡೆಸುತ್ತಾರೆ. ಮಕ್ಕಳು ಪೊಲೀಸರ ನಡುವೆ ಜಗಳವಾಗುತ್ತದೆ.

ಮಕ್ಕಳ ಮೇಲೆ ಹಲ್ಲೆ ಕಂಡ ಗ್ರಾಮದ ಮಹಿಳೆಯಾದ ಪಾರ್ವತಮ್ಮ, ಸಿದ್ದಮ್ಮ ಮತ್ತು ಹಾಲಮ್ಮನವರು ಪೊಲೀಸರೂಂದಿಗೆ ವಾಗ್ವಾದ ನಡೆಸುತ್ತಾರೆ. ನಂತರ ಪೊಲೀಸರು ಮಹಿಳೆಯರ ಮೇಲೂ ಹಲ್ಲೆ ನಡೆಸುತ್ತಾರೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು ಸಾವನ್ನಪ್ಪುತ್ತಾರೆ. ಈ ಎಲ್ಲಾ ಘಟನೆಗಳು ಗ್ರಾಮದ ವೀರಭದ್ರೇಶ್ವರ ದೇವಾಲಯದ ಮುಂದೆ ನಡೆಯುತ್ತವೆ. ಮಕ್ಕಳು ಮತ್ತು ಮಹಿಳೆಯರ ಕೊಲೆಯಾದ ನಂತರ ದೇವಾಲಯದ ಗಂಟೆ ಬಾರಿಸಲಾಗುತ್ತದೆ.

ಈಸೂರ ಹೋರಾಟದ ನೆನಕೆಗಳು

ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮದವರು ದೇವಾಲಯದ ಗಂಟೆ ಶಬ್ದ ಕೇಳಿ ದೇವಾಲಯದ ಬಳಿ ಬಂದಾಗ ಘಟನೆ ಕಂಡು ಕೋಪಗೊಂಡ ಗ್ರಾಮಸ್ಥರು ಪೊಲೀಸ್ ರನ್ನು ಹಾಗೂ ಅಧಿಕಾರಿಗಳನ್ನು ಕೋಲು, ದೊಣ್ಣೆಗಳಿಂದ ಹೊಡೆದು ಕೊಲೆ ಮಾಡುತ್ತಾರೆ. ಬ್ರಿಟಿಷ್ ಸರ್ಕಾರಕ್ಕೆ ತಿಳಿದು ಹೆಚ್ಚಿನ ಪಡೆ ಕಳುಹಿಸಿ ಗ್ರಾಮವನ್ನು ಲೂಟಿ ಮಾಡಲಾಗುತ್ತದೆ. ಪುರುಷರು ಮನೆ ಬಿಟ್ಟು ಕಾಡು ಸೇರುತ್ತಾರೆ. ಮಹಿಳೆಯರ ಮಾನ ಭಂಗವಾಗುತ್ತದೆ.

ಬ್ರಿಟಿಷರಿಂದ ಗ್ರಾಮಸ್ಥರ ಮೇಲೆ ಹಲ್ಲೆ, ಕೊಲೆ:ಗ್ರಾಮದ ಸಾಹುಕಾರ ಬಸಪ್ಪನವರ ಮನೆಗೆ ಬೆಂಕಿ ಹಚ್ಚಲಾಗುತ್ತದೆ. ಈಸೂರು ಗ್ರಾಮದಲ್ಲಿ ನಡೆದ ಘಟನೆಯ ಹಿಂದೆ ಗ್ರಾಮದ ಸಾಹುಕಾರ್ ಬಸಪ್ಪನವರೇ ಕಾರಣ ಎಂದು ಅವರ ಮನೆ ಲೂಟಿ ಮಾಡಿಸಲಾಗುತ್ತದೆ. ಅವರ ಮನೆಗೆ ಬೆಂಕಿ ಹಾಕಲಾಗುತ್ತದೆ. ಇದರಿಂದ ಭಯಪಟ್ಟ ಕೆಲವರು ಗ್ರಾಮವನ್ನೇ ತೊರೆಯುತ್ತಾರೆ.

ಗ್ರಾಮದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗುತ್ತದೆ. ಇದು ಇತರೆ ಕಡೆ ವ್ಯಾಪಿಸುತ್ತದೆ. ಈ ವೇಳೆ 20 ಕ್ಕೂ ಮುಂದಿಯನ್ನು ಬಂಧಿಸಲಾಗುತ್ತದೆ. ಬಂಧಿತರಾದವರನ್ನು ಸಾಗರ, ಶಿವಮೊಗ್ಗ ಜೈಲಿನಲ್ಲಿ ಇಡಲಾಗುತ್ತದೆ. ವಿಚಾರಣೆ ನಡೆಸಿ, ಇವರನ್ನು ಸರ್ಕಾರಿ ವಿರೋಧಿಗಳೆಂದು ತೀರ್ಪು ನೀಡಿ ಗಲ್ಲು ಶಿಕ್ಷೆ ನೀಡಲಾಗುತ್ತದೆ.

ಏಸೂರು ಕೊಟ್ರು ಈಸೂರು ಕೊಡೆವು ಎಂದು 1942 ರಲ್ಲೆ ಸ್ವಾತಂತ್ರ್ಯ ಘೋಷಿಸಿಕೊಂಡ ಈಸೂರು

ಈಸೂರಿನ ಐವರಿಗೆ ಗಲ್ಲು:ಮೊದಲು ಐವರು ಪುರುಷರಿಗೆ ಹಾಗೂ ಇಬ್ಬರು ಮಹಿಳೆಯರಿಗೆ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಇದರಲ್ಲಿ ಹೆಣ್ಣು ಮಕ್ಕಳನ್ನು ಕೊಂದರೆ ಸ್ತ್ರೀ ಹತ್ಯೆ ದೋಷ ಎಂದು ಪರಿಗಣಿಸಿ, ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಉಳಿದವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. 1943 ರ ಮಾರ್ಚ್ 3 ರಲ್ಲಿ ಗುರಪ್ಪ ಮತ್ತು ಜಿನಹಳ್ಳಿ ಮಲ್ಲಪ್ಪ ಅವರನ್ನು ಗಲ್ಲಿಗೆ ಹಾಕಲಾಗುತ್ತದೆ. 1943 ರ ಮಾರ್ಚ್ 9 ರಂದು ಸೂರ್ಯನಾರಾಯಣಚಾರ್ ಮತ್ತು ಬಡಕಳ್ಳಿ ಹಾಲಪ್ಪ ಅವರನ್ನು ಗಲ್ಲಿಗೆ ಹಾಕಲಾಗುತ್ತದೆ. 1943 ಮಾರ್ಚ್ 10 ರಂದು ಗೌಡ್ರ ಶಂಕರಪ್ಪನವರನ್ನು ಗಲ್ಲಿಗೆ ಏರಿಸಲಾಗುತ್ತದೆ. ಇನ್ನೂ ಕೆಲವರ ವಿಚಾರಣೆ ಬಾಕಿ ಉಳಿದಿರುತ್ತದೆ.

ಉಳಿದವರನ್ನು ಸ್ವಾತಂತ್ರ್ಯದ ನಂತ್ರ ಬಿಡುಗಡೆ ಮಾಡಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಹುಚ್ಚರಾಯಪ್ಪ ಎಂಬುವರು ಕಳೆದ ವರ್ಷ ಆಗಸ್ಟ್ ನಲ್ಲಿ ನಿಧರಾಗಿದ್ದಾರೆ. ಇಂತಹ ಗ್ರಾಮದಲ್ಲಿ ಇಂದಿಗೂ ಸಹ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಶೇಷವಾಗಿ ಹಬ್ಬದಂತೆ ಗ್ರಾಮದಲ್ಲಿ ಆಚರಿಸಲಾಗುತ್ತದೆ. ಈಸೂರು ಗ್ರಾಮ ದೇಶದಲ್ಲಿಯೇ ಗುರುತಿಸಿಕೊಂಡ ಗ್ರಾಮವಾಗಿದೆ. ಇಂತಹ ಗ್ರಾಮದಲ್ಲಿ ನಾವು ಹುಟ್ಡಿರುವುದೇ ನಮ್ಮ ಪುಣ್ಯ ಎನ್ನುತ್ತಾರೆ ಗ್ರಾಮದ ಶಿವರಾಜ್ ಹಾಗೂ ಗುರುಪ್ರಸಾದ್​.

ಈಸೂರು ಗ್ರಾಮದ ಹೋರಾಟ ಒಂದು ಇತಿಹಾಸ. ಇದು ಎಲ್ಲಾರಿಗೂ ಸ್ಫೂರ್ತಿ ಹಾಗೂ ಹೋರಾಟದ ಕಿಚ್ಚು ರೂಪಿಸುವ ಗ್ರಾಮಸ್ಥರ ಹೋರಾಟ ನಿಜಕ್ಕೂ ಅದ್ಬುತವಾಗಿದೆ. ಗ್ರಾಮೀಣ ಭಾಗದ ಜನರು ಮಹಾತ್ಮ ಗಾಂಧೀಜಿ ಅವರ ಅದರ್ಶವನ್ನು ಮೈಗೂಡಿಸಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎಂಬುದೇ ಒಂದು ರೋಮಾಂಚನಕಾರಿ ವಿಷಯವಾಗಿದೆ ಎನ್ನುತ್ತಾರೆ ಇತಿಹಾಸ ಉಪನ್ಯಾಸಕರಾದ ಮೋಹನ್ ಚಂದ್ರಗುತ್ತಿ.

ಸ್ವಾತಂತ್ರ್ಯ ಬಂದು 50 ವರ್ಷಗಳ ನಂತರ ನಮ್ಮನ್ನಾಳುವ ಸರ್ಕಾರಗಳು ಈಸೂರು ಗ್ರಾಮದಲ್ಲಿ ಹೆಸರಿಗೆ ಸ್ಮಾರಕ ನಿರ್ಮಾಣ ಮಾಡಿವೆ. ಒಂದು ಧ್ವಜಸ್ತಂಭ ನಿರ್ಮಾಣವಾಗಿದೆ. ಅದರಲ್ಲಿ ಏಸೂರು ಕೊಟ್ಟರು ಈಸೂರು ಕೊಡೆವು ಎಂಬ ಗ್ರಾಮದವರ ಘೋಷಣ ವಾಕ್ಯವನ್ನು ಹಾಕಲಾಗಿದೆ. ಹಾಗೆಯೇ ಸ್ಮಾರಕ ಭವನದ ಮುಂದೆ ಗಲ್ಲು ಶಿಕ್ಷಗೆ ಒಳಗಾದವರ ಹೆಸರನ್ನು ಕೆತ್ತಿಸಲಾಗಿದೆ.

ಅಭಿವೃದ್ದಿಯತ್ತ ಈಸೂರು ಗ್ರಾಮ:ಹಲವು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನವನ್ನು ಮೇಲ್ದರ್ಜೆಗೆ ಏರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸ್ಮಾರಕ ಭವನ, ಹೋರಾಟಗಾರರ ಪರಿಚಯವನ್ನು ತಿಳಿಸುವ ಭವನವನ್ನು ನಿರ್ಮಿಸಲು ಹಣ ಬಿಡುಗಡೆ ಮಾಡಿದೆ. ಹೀಗಾಗಿ ಈ ಗ್ರಾಮದ ಬಹುದಿನದ ಕನಸು ನನಸಾಗುತ್ತಿದೆ.

ಇದನ್ನೂ ಓದಿ :ಐತಿಹಾಸಿಕ ಮಿರ್ಜಾನ್ ಕೋಟೆಗೆ ತ್ರಿವರ್ಣದ‌ ಮೆರಗು: ಕಳೆಗಟ್ಟಿದ ಸ್ವಾತಂತ್ರ್ಯೋತ್ಸವ ಸಂಭ್ರಮ

Last Updated :Aug 14, 2022, 9:23 PM IST

ABOUT THE AUTHOR

...view details