ಕಾರವಾರ: ದೇಶದೆಲ್ಲೆಡೆ 75 ಸ್ವಾಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಅದರಂತೆ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಆಳಿದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಕೋಟೆಯಲ್ಲಿಯೂ ಈ ಭಾರಿ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೋಟೆಯನ್ನು ಕೇಸರಿ, ಬಿಳಿ, ಹಸಿರು ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಳಿಸಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.
ಕೋಟೆಗೆ ಮತ್ತಷ್ಟು ಮೆರುಗು: ಕುಮಟಾ ತಾಲೂಕಿನಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಮಿರ್ಜಾನ್ ಕೋಟೆ, ಈಗಾಗಲೇ ಮಳೆಯಿಂದಾಗಿ ಹಸಿರು ಹುಲ್ಲುಗಳು ಬೆಳೆದು ಹಸಿರ ಹಾಸಿಗೆಯಂತೆ ಕಣ್ಸೆಳೆಯುತ್ತಿತ್ತು. ಇದೀಗ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನ ಅಳವಡಿಸಿರುವುದು ಕೋಟೆಗೆ ಮತ್ತಷ್ಟು ಮೆರುಗು ನೀಡಿದೆ. ಪುರಾತತ್ವ ಇಲಾಖೆಗೆ ಒಳಪಡುವ ಈ ಕೋಟೆಯನ್ನು ಅಮೃತ ಮಹೋತ್ಸವದ ನಿಮಿತ್ತ ಧಾರವಾಡ ವಿಭಾಗದ ಪುರಾತತ್ವ ಇಲಾಖೆಯು ಕೇಸರಿ, ಬಿಳಿ, ಹಸಿರು ತ್ರಿವರ್ಣದ ಕಾಂಬಿನೇಶನ್ನಲ್ಲಿ ಹ್ಯಾಲೋಜಿನ್ ಲೈಟ್ಗಳನ್ನ ಬಳಸಿ ಶೃಂಗರಿಸಿದೆ. ಸಂಜೆ 6 ರಿಂದ ರಾತ್ರಿ 11 ರವರೆಗೂ ಲೈಟ್ ಗಳು ಉರಿಯಲಿದ್ದು, ಆಗಸ್ಟ್ 15ರ ತನಕವೂ ಕೋಟೆ ಹೀಗೆಯೇ ಕಂಗೊಳಿಸಲಿದೆ.
ಪ್ರತಿ ಮಳೆಗಾಲದ ವೇಳೆ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದ ಕೋಟೆ, ಇದೀಗ ವಿದ್ಯುತ್ ಅಲಂಕಾರದಿಂದಾಗಿ ಮತ್ತಷ್ಟು ಮೆರುಗು ಹೆಚ್ಚಿಸಿಕೊಂಡಿದೆ. ಕೋಟೆಯ ಮುಂಭಾಗದುದ್ದಕ್ಕೂ ಅಳವಡಿಸಿರುವ ಕೇಸರಿ ಬಿಳಿ ಹಸಿರು ಬಣ್ಣದ ಲೈಟ್ಗಳು ಕೋಟೆ ನೋಡುವವರನ್ನು ರೋಮಾಂಚನಗೊಳಿಸುತ್ತದೆ. ಇದೇ ಕಾರಣದಿಂದ ನಿತ್ಯ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಕರ್ನಾಟಕದ ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿಗೊಂಡಿದ್ದ ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು 16 ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕೋಟೆಯನ್ನು ಕಟ್ಟಿರುವ ಕುರಿತು ಹಲವಾರು ಭಿನ್ನಾಭಿಪ್ರಾಯಗಳಿವೆ. ಇಬ್ನಬಟೂಟ ಎಂಬ ನವಾಯತ ರಾಜ 1,200 ರಲ್ಲಿ ಕಟ್ಟಿರುವುದಾಗಿ ಹೇಳುತ್ತಾರೆ. ಮತ್ತೊಂದು ವಾದದ ಪ್ರಕಾರ, ಈ ಕೋಟೆಯನ್ನು ಬಿಜಾಪುರದ ಸುಲ್ತಾನ ಶರೀಫ್ ಉಲ್ ಮುಲ್ಕ್ ಇದನ್ನು 1608-1640 ರ ಕಾಲದಲ್ಲಿ ಕುಮಟಾ ಪಟ್ಟಣ ರಕ್ಷಣೆ ದೃಷ್ಟಿಯಿಂದ ಕಟ್ಟಿದನೆಂದು ಹೇಳಲಾಗುತ್ತದೆ.
ಇದನ್ನೂ ಓದಿ: ತ್ರಿವರ್ಣದಲ್ಲಿ ಬೆಳಗಿದ ರಾಷ್ಟ್ರೀಯ ಸ್ಮಾರಕಗಳನ್ನೊಮ್ಮೆ ನೋಡಿ
ಆದರೆ ಸ್ಥಳೀಯರು ಸೇರಿದಂತೆ ಹೆಚ್ಚಿನವರ ಪ್ರಕಾರ, ಇದು ಗೇರುಸೊಪ್ಪೆಯ ರಾಣಿ ಕಟ್ಟಿರುವುದು ಎಂಬ ಮಾತುಗಳಿವೆ. ರಾಣಿ ಚೆನ್ನಭೈರಾದೇವಿಯು ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು, ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯವನು ರಾಜ್ಯಭಾರ ಮಾಡಿರುವುದು ವಿಶೇಷವಾಗಿದೆ. ಈ ರಾಣಿಯ ಆಳ್ವಿಕೆಯ ಅವಧಿಯಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು. ಈ ಪ್ರದೇಶವು ಅಕ್ಕಿ ಮತ್ತು ಕಾಳುಮೆಣಸಿನ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿನ ಉತ್ಪನ್ನಗಳನ್ನು ವಿದೇಶಗಳಿಗೆ ರಪ್ತು ಮಾಡಲಾಗುತಿತ್ತು ಎಂದು ಹೇಳಲಾಗುತ್ತದೆ.