ಕರ್ನಾಟಕ

karnataka

ಬಿಬಿಎಂಪಿ ಚುನಾವಣೆ ಬಗ್ಗೆ ಸುಪ್ರೀಂ ತೀರ್ಪು ಸ್ವಾಗತಾರ್ಹ: ಹೆಚ್​ಡಿಕೆ

By

Published : May 21, 2022, 6:54 AM IST

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಜೆಡಿಎಸ್‌ ಸ್ವಾಗತಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

H D Kumaraswamy
H D Kumaraswamy

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ ) ಚುನಾವಣೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅವಧಿ ಮುಗಿದರೂ ಕಳೆದ ಎರಡು ವರ್ಷಗಳಿಂದ ಬಿಜೆಪಿ ಸರ್ಕಾರವು ಪಾಲಿಕೆ ಚುನಾವಣೆ ಮಾಡಿರಲಿಲ್ಲ. ಹೇಗಾದರೂ ಮಾಡಿ ಚುನಾವಣೆಯನ್ನ ಮುಂದಕ್ಕೆ ಹಾಕಿಕೊಂಡು ಬರುತ್ತಿತ್ತು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಸರ್ಕಾರ ಯಾವುದೇ ಸಬೂಬು ಹೇಳದೆ ಚುನಾವಣೆ ನಡೆಸಲೇಬೇಕು. 8 ವಾರಗಳಲ್ಲಿ ಮೀಸಲಾತಿ ಪ್ರಕ್ರಿಯೆ ಮುಗಿಸಿ ಚುನಾವಣೆ ನಡೆಸಬೇಕು. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಚುನಾವಣೆ ಮಾಡಬೇಕು ಎಂದರು.

ನಾವು ಚುನಾವಣೆಗೆ ಸಿದ್ಧವಾಗಿದ್ದೇವೆ. ರಾಜ್ಯ ಸರ್ಕಾರ, ಕಾಂಗ್ರೆಸ್ ಸರ್ಕಾರದ ಆಡಳಿತ, ಬಿಜೆಪಿ ಸರ್ಕಾರದ ಆಡಳಿತವನ್ನ ಜನ ನೋಡಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರಿಗೆ ತೀವ್ರ ಆಕ್ರೋಶ ಇದೆ. ನಮ್ಮ ಪಕ್ಷದ ಕುರಿತು ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತೇವೆ. ತಕ್ಷಣವೇ ಚುನಾವಣೆ ನಡೆದರೂ ನಮ್ಮ ಪಕ್ಷ ತಯಾರಿದೆ. ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿಯಷ್ಟೇ ಸಮಾನವಾಗಿ ಸ್ಥಾನ ಪಡೆಯಲಿದೆ ಎಂದು ಹೆಚ್​ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲ ಭಾಷೆಗಳನ್ನ ಮೋದಿ ಗೌರವಿಸಲಿ: ಎಲ್ಲಾ ಸ್ಥಳೀಯ ಭಾಷೆಗಳಿಗೆ ಗೌರವ ನೀಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಭಾಷೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವಿಮುಖ ನೀತಿ ನಿಲುವು ತೋರಿಸುತ್ತಿದೆ. ಮೋದಿ ಅವರು ಸ್ಥಳೀಯ ಭಾಷೆಗಳನ್ನು ಗೌರವಿಸಬೇಕು ಅಂತಾರೆ. ಆದರೆ, ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ರಾಷ್ಟ್ರಭಾಷೆ ಆಗಬೇಕು ಅಂತಾರೆ. ಯಾರನ್ನು ನಂಬುವುದು ಎಂದು ಪ್ರಶ್ನಿಸಿದರು.

ನೀನು ಹೊಡೆದ ಹಾಗೆ ಮಾಡು, ನಾನು ಅತ್ತ ಹಾಗೆ ಮಾಡ್ತೀನಿ ಎಂಬಂತೆ ಮೋದಿ-ಅಮಿತ್ ಶಾ ವರ್ತನೆ ಇದೆ. ಸ್ಥಳೀಯ ಭಾಷೆಗಳನ್ನು ಸರ್ವನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮೊದಲು ಮೋದಿ ಅವರು ಪ್ರಾದೇಶಿಕ ಭಾಷೆಗಳನ್ನು ಗೌರವಿಸಲಿ ಎಂದು ವಾಗ್ದಾಳಿ ನಡೆಸಿದರು.

ಎರಡು ದಿನದಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ:ಎರಡು-ಮೂರು ದಿನಗಳಲ್ಲಿ ಜೆಡಿಎಸ್‌ ಪಕ್ಷದ ರಾಜ್ಯಸಭೆ ಮತ್ತು ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ನಮ್ಮ ಹೈಕಮಾಂಡ್ ದೆಹಲಿಯಲ್ಲಿ ಇಲ್ಲ. ನಮ್ಮ ಹೈಕಮಾಂಡ್ ‌ಇಲ್ಲೇ ಇದೆ. ನಾವು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡಿದ್ದೇವೆ. ವರಿಷ್ಠರ ಜತೆ ಚರ್ಚೆ ಮಾಡಿ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ:ಧಾರವಾಡ ಬಳಿ ಭೀಕರ ಅಪಘಾತ: ಮೂವರು ಮಕ್ಕಳು ಸೇರಿ ಏಳು ಜನ ಸ್ಥಳದಲ್ಲೇ ದುರ್ಮರಣ

ABOUT THE AUTHOR

...view details