ಕರ್ನಾಟಕ

karnataka

ನಿರ್ಮಾಪಕ ಉಮಾಪತಿಗೆ ನೀಡಿದ್ದ ಭದ್ರತೆ ಹಿಂತೆಗೆತ: ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್

By

Published : Oct 14, 2021, 1:40 PM IST

ಕಳೆದ ಒಂದು ವರ್ಷದಿಂದ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ನಗರ ಪೊಲೀಸ್ ಆಯುಕ್ತರು ಯಾವುದೇ ಮುನ್ಸೂಚನೆ ನೀಡದೆ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿದೆ.

ಉಮಾಪತಿ
ಉಮಾಪತಿ

ಬೆಂಗಳೂರು:ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ತಮಗೆ ನೀಡಿದ್ದ ಭದ್ರತೆ ಹಿಂಪಡೆದಿರುವ ನಗರ ಪೊಲೀಸ್ ಆಯುಕ್ತರ ಕ್ರಮ ಸರಿಯಿಲ್ಲ ಎಂದು ಆಕ್ಷೇಪಿಸಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ, ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ ಉಮಾಪತಿ ಪರ ವಕೀಲರು, ಅರ್ಜಿದಾರರ ಮೇಲೆ ಈ ಹಿಂದೆ ದುಷ್ಕರ್ಮಿಗಳು ಉದ್ದೇಶಪೂರ್ವಕ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಭದ್ರತೆ ಕಲ್ಪಿಸಿದ್ದರು. ಕಳೆದ ಒಂದು ವರ್ಷದಿಂದ ಇದ್ದ ಭದ್ರತೆಯನ್ನು ನಗರ ಪೊಲೀಸ್ ಆಯುಕ್ತರು ಯಾವುದೇ ಮುನ್ಸೂಚನೆ ನೀಡದೆ ಹಿಂಪಡೆದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು: ನೇಪಾಳದಲ್ಲಿ ಆರೋಪಿಯ ಬಂಧನ

ಆದರೆ, ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡರಿಗೆ ಈಗಲೂ ಜೀವ ಬೆದರಿಕೆ ಇದೆ. ಹೀಗಾಗಿ ಅರ್ಜಿದಾರರಿಗೆ ಸೂಕ್ತ ಭದ್ರತೆ ನೀಡಲು ನಗರ ಪೊಲೀಸ್ ಆಯುಕ್ತರು ಹಾಗೂ ರಾಜ್ಯ ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದರು.

ವಾದ ಆಲಿಸಿದ ಪೀಠ, ಈ ಕುರಿತು ಪೊಲೀಸರ ವಾದವನ್ನೂ ಆಲಿಸಬೇಕಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ರೌಡಿಶೀಟರ್ ರಾಜೇಶ್ ಅಲಿಯಾಸ್ ಕರಿಯಾ ಎಂಬಾತನನ್ನು ಕಳೆದ ಜೂನ್​ನಲ್ಲಿ ನೇಪಾಳದಲ್ಲಿ ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ₹175 ಕೋಟಿ ವೆಚ್ಚದ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ ರಾಬರ್ಟ್ ಚಿತ್ರದ ನಿರ್ಮಾಪಕ

ABOUT THE AUTHOR

...view details