ಕರ್ನಾಟಕ

karnataka

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆವರೆಗೂ ಬೊಮ್ಮಾಯಿಯವರೇ ಸಿಎಂ: ಕಟೀಲ್

By

Published : Dec 25, 2021, 4:07 PM IST

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆವರೆಗೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

Nalin Kumar Kateel criticize on congress
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.

ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡಿರುವುದು

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಚುನಾವಣೆವರೆಗೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲ ಒಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಹಾಗೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ. ಸಿಎಂ ಬದಲಾವಣೆ ಕೇವಲ ಊಹಾಪೋಹ, ಕಪೋಕಲ್ಪಿತ ಕತೆ, ಯಾರೂ ಕೂಡ ಇದನ್ನು ನಂಬುವ ಅವಶ್ಯಕತೆ ಇಲ್ಲ. ಬೊಮ್ಮಾಯಿ ಅವರು ಪೂರ್ಣ ಅವಧಿವರೆಗೆ ಸರ್ಕಾರವನ್ನು ನಡೆಸಲಿದ್ದಾರೆ ಎಂದರು.

ಸಂಪುಟ ಪುನರ್​​ರಚನೆ ಇಲ್ಲ:

ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸಚಿವ ಸಂಪುಟ ಪುನರ್​ ರಚನೆಯೂ ಇಲ್ಲ. ವಿವಿಧ ಕಾರಣಕ್ಕೆ ಖಾಲಿ ಇರುವ ಸ್ಥಾನಗಳನ್ನು ತುಂಬುವ ಕೆಲಸವನ್ನು ಮಾತ್ರ ಮಾಡುತ್ತೇವೆ ಎಂದರು.

ಸೋಲಿನ ಆತ್ಮಾವಲೋಕನ:

ಬೆಳಗಾವಿ ಸೋಲಿನ ಬಗ್ಗೆ ಅವಲೋಕನ ಮಾಡಲಾಗಿದೆ. ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಇನ್ನೊಮ್ಮೆ ಸಭೆ ನಡೆಸಿ ಸೋಲಿನ ಕುರಿತು ಆತ್ಮಾವಲೋಕನ ಮಾಡಲಿದ್ದೇವೆ. ಪರಿಷತ್ ಚುನಾವಣೆ ಕುರಿತು ಹೈಕಮಾಂಡ್​​​ಗೆ ವರದಿ ಸಲ್ಲಿಸುತ್ತೇವೆ. ನಮ್ಮ ಗುರಿ ಇದ್ದದ್ದು 10 ಸ್ಥಾನ. ಆದರೆ, 11 ಸ್ಥಾನ ಗೆದ್ದಿದ್ದೇವೆ. ಕಳೆದ ಬಾರಿಗಿಂತ 5 ಹೆಚ್ಚು ಗೆದ್ದಿದ್ದೇವೆ ಎಂದರು.

ಚುನಾವಣೆ ಗೆಲ್ಲುವುದೇ ನಮ್ಮ ಟಾಸ್ಕ್:

ಹೈಕಮಾಂಡ್ ನಮಗೆ ಯಾವ ಟಾಸ್ಕ್ ಅನ್ನೂ ನೀಡಿಲ್ಲ. ಮುಂದಿನ ಚುನಾವಣೆಯನ್ನು ಗೆಲ್ಲುವುದೇ ನಮ್ಮ ಟಾಸ್ಕ್. 150 ಸ್ಥಾನದ ಗುರಿಯೊಂದಿಗೆ ಹೊರಟಿದ್ದೇವೆ, ಗುರಿ ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರ ಭಾವನೆಗೆ ಸ್ಪಂದನೆ:

ಕಳೆದ ಹತ್ತಾರು ವರ್ಷಗಳ ಹೋರಾಟದ ಗುರಿ ಮತಾಂತರ ನಿಷೇಧ ಕಾಯ್ದೆ ತರಬೇಕು ಎನ್ನುವುದಾಗಿತ್ತು. ರಾಜ್ಯದ ಜನತೆಯ ಭಾವನೆಗೆ ಸ್ಪಂದಿಸಿ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸುವ ಮೂಲಕ ಜನರ ಭಾವನೆಗೆ ಗೌರವ ಕೊಟ್ಟಿದ್ದೇವೆ. ಮತಾಂತರ ಎನ್ನುವ ಪಿಡುಗು ರಾಜ್ಯದ ಸಾಮರಸ್ಯ ಕೆಡಿಸಿತ್ತು. ಯಾವುದೋ ಒಂದು ಸಮುದಾಯದ ವಿರುದ್ಧ ಇದನ್ನು ತಂದಿಲ್ಲ. ಎಲ್ಲ ಮತದಲ್ಲಿಯೂ ಮತಾಂತರ ಆಗುತ್ತಿದೆ. ಇದರಿಂದ ಗಲಭೆಗಳು ಆಗುತ್ತಿತ್ತು.

ಪಟ್ಟಣಗಳಿಗೆ ಕೇಂದ್ರೀಕೃತವಾಗಿದ್ದ ಮತಾಂತರ ಇಂದು ಹಳ್ಳಿಗಳಿಗೂ ವಿಸ್ತಾರಗೊಂಡಿದೆ. ಬಡತನ ನಿರುದ್ಯೋಗದ ದುರ್ಲಾಭ ಪಡೆದು ಆಮಿಷಗಳನ್ನೊಡ್ಡಿ ಮತಾಂತರ ಮಾಡುವುದಕ್ಕೆ ಕಡಿವಾಣ ಹಾಕಲು ಈ ಕಾಯ್ದೆ ತರಲಾಗುತ್ತಿದೆ. ಸರಿಯಾದ ಕಾಯ್ದೆ ತರುವ ಮೂಲಕ ಮತಾಂತರ ತಡೆಯುವ, ಸಾಮರಸ್ಯ, ಏಕತೆ ಮೂಡಿಸುವ ಒಂದು ಒಳ್ಳೆಯ ಸಂದೇಶವನ್ನು ಕಾಯ್ದೆ ಕೊಡಲಿದೆ ಎಂದು ಸಮರ್ಥಿಸಿಕೊಂಡರು.

ಸಿದ್ದುಗೆ ಜಾಣ ಮರೆವಾ?

ಕಾಂಗ್ರೆಸ್ ವಿರೋಧಕ್ಕಾಗಿ ಇರುವ ಪಕ್ಷ. ಸಿಎಎ ತರಲು ಅವರೇ ಹೋರಾಟ ಮಾಡಿ, ಬಳಿಕ ನಾವು ತಂದಾಗ ವಿರೋಧ ಮಾಡಿದರು. ಕೃಷಿ ಕಾನೂನು ತರಲು ಪ್ರಣಾಳಿಕೆಯಲ್ಲಿ ಅವರೇ ಹೇಳಿದ್ದರು. ಅದನ್ನು ನಾವು ತಂದಾಗ ಕಾಯ್ದೆ ವಿರುದ್ಧ ಹೋರಾಟ ಮಾಡಿದರು. ಕೊರೊನಾ ಬಂದಾಗ ಲಸಿಕೆ ಇಲ್ಲ ಎಂದು ಬೊಬ್ಬೆ ಹೊಡೆದರು, ಲಸಿಕೆ ಕೊಟ್ಟಾಗ ಪಡೆಯಲಿಲ್ಲ.

ಕಾಂಗ್ರೆಸ್​ಗೆ ಮತಾಂತರ ಕಾಯ್ದೆ ವಿರೋಧಿಸುವ ನೈತಿಕತೆ ಇಲ್ಲ. ಕಾಯ್ದೆ ತರಲು 2016ರಲ್ಲಿ ಸಿದ್ದರಾಮಯ್ಯ ಅವರೇ ಸಹಿ ಹಾಕಿದ್ದರು. ಎಂಥ ಮರೆವು ಸಿದ್ದರಾಮಯ್ಯನವರಿಗೆ? ಇದು ಕುರುಡು ಮರೆವಾ, ಜಾಣ ಮರೆವಾ?. ಕಾಂಗ್ರೆಸ್ ಅಧಿಕಾರ ಇದ್ದಾಗ ಒಂದು ಇಲ್ಲದಾಗ ಮತ್ತೊಂದು ರೀತಿಯಲ್ಲಿ ವರ್ತಿಸುತ್ತಿದೆ. ಮೊದಲಿಗೆ ಕಾಂಗ್ರೆಸ್ ಪಕ್ಷವೇ ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿತ್ತು, ಆದರೆ ಆಗಿರಲಿಲ್ಲ. ಈಗ ನಾವು ಕಾಯ್ದೆ ತರಲು ಹೊರಟಿದ್ದೇವೆ. ಹಾಗಾಗಿ ಕಾಂಗ್ರೆಸ್​​ ವಿರೋಧ ಮಾಡಬೇಕು ಎಂದು ಮಾಡುತ್ತಿದೆಯಷ್ಟೇ ಎಂದು ಟೀಕಿಸಿದರು.

ಇದು ಆರ್​ಎಸ್​ಎಸ್​ ಅಜೆಂಡಾ ಆಗಿದ್ದರೆ ಸಿದ್ದರಾಮಯ್ಯ ಆರ್​ಎಸ್​ಎಸ್ ಅಜೆಂಡಾದ ಅನುಷ್ಠಾನಕ್ಕೆ ಮುಂದಾಗಿದ್ದರಾ? ಅವರೇ ಆರ್​ಎಸ್​ಎಸ್ಅಜೆಂಡಾವನ್ನು ಜಾರಿಗೆ ತರಲು ಬಂದಿದ್ದರೆಂದರೆ, ನಾವು ಪರಿವಾರದವರು ನಾವು ಜಾರಿಗೆ ತರಲೇಬೇಕಲ್ಲವೇ ಎಂದರು.

ಇದನ್ನೂ ಓದಿ:ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ : ಸಿ ಟಿ ರವಿ

ಆಮಿಷದ ಮತಾಂತರದಿಂದ ಸಮಾಜದ ಸಾಮರಸ್ಯದಲ್ಲಿ ಸಮಸ್ಯೆಗಳಾಗುತ್ತಿದ್ದವು. ಕಾಯ್ದೆ ಮೂಲಕ ಇದರ ನಿಯಂತ್ರಣ ಆಗಲಿದೆ. ಕಾಯ್ದೆ ಮೂಲಕ ಸರ್ಕಾರ ಸಾಮರಸ್ಯದ ಸಂದೇಶ ಕೊಟ್ಟಿದೆ. ಯಾರೇ ಆಗಲಿ ಆಮಿಷವೊಡ್ಡಿ ಬಲಾತ್ಕಾರವಾಗಿ ಮತಾಂತರ ಮಾಡುವ ಪ್ರಯತ್ನ ಮಾಡುವಂತಿಲ್ಲ. ಸ್ವಯಂಪ್ರೇರಿತವಾಗಿ ಬೇರೆ ಮತಕ್ಕೆ ಹೋಗುವುದಿದ್ದರೆ ಅದಕ್ಕೆ ಅವಕಾಶವಿದೆ. ಒತ್ತಡ ತಂದು ಮತಾಂತರ ಮಾಡುವುದಕ್ಕೆ ಮಾತ್ರ ಕಾಯ್ದೆಯಲ್ಲಿ ನಿರ್ಬಂಧವಿದೆ ಎಂದರು.

ABOUT THE AUTHOR

...view details