ಕರ್ನಾಟಕ

karnataka

ಮೆಟ್ರೋ ಕಾಮಗಾರಿ: ಮರಗಳನ್ನು ಕಡಿಯಲು ಸಮ್ಮತಿ ನೀಡಿದ ಹೈಕೋರ್ಟ್

By

Published : Apr 21, 2022, 9:41 AM IST

ಬೆಂಗಳೂರು ನಗರದಲ್ಲಿ ಮೆಟ್ರೋ ಕಾಮಗಾರಿ ಹಿನ್ನೆಲೆ ಸಾವಿರಾರು ಮರಗಳನ್ನು ಕಡಿಯಲು ಹೈಕೋರ್ಟ್​ ಸಮ್ಮತಿ ನೀಡಿದೆ.

Metro Works in Bengaluru, High Court giving consent to cutting down trees, Karnataka high court news, Tree cut issue, ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ, ಮರ ಕಡಿಯಲು ಸಮ್ಮತಿ ನೀಡಿದ ಹೈಕೋರ್ಟ್, ಕರ್ನಾಟಕ ಹೈಕೋರ್ಟ್ ಸುದ್ದಿ, ಮರ ಕಡಿಯುವ ವಿಚಾರ,
ಮರಗಳನ್ನು ಕಡಿಯಲು ಸಮ್ಮತಿ ನೀಡಿದ ಹೈಕೋರ್ಟ್

ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಯ ಕಾಮಗಾರಿ ಹಿನ್ನೆಲೆ ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಹಾಗೂ ವೆಲ್ಲಾರ ಜಂಕ್ಷನ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ರಸ್ತೆಯಲ್ಲಿರುವ ಒಟ್ಟು 1,342 ಮರಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಅನುಮತಿ ನೀಡಿದೆ.

ಮೆಟ್ರೋ ಕಾಮಗಾರಿಗಾಗಿ ನಗರದಲ್ಲಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ ಪರಿಸರವಾದಿ ಟಿ.ದತ್ತಾತ್ರೇಯ ದೇವರೆ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಓದಿ:ಮನುಷ್ಯರಿಗೆ ಇದ್ದ ಆ್ಯಂಬುಲೆನ್ಸ್​ಗಳು ಈಗ ಮರಗಳಿಗೂ ವಿಸ್ತರಣೆ: ಹೇಗಿದೆ ಚಿಕಿತ್ಸೆ ಕಾರ್ಯ?

ವಿಚಾರಣೆ ವೇಳೆ ಬಿಎಂಆರ್‌ಸಿಎಲ್ ಪರ ವಕೀಲರು ವಾದ ಮಂಡಿಸಿ, 2022ರ ಮಾರ್ಚ್ 8ರಂದು ಮರ ತಜ್ಞರ ಸಮಿತಿಯು ವರದಿ ನೀಡಿತ್ತು. ಅದನ್ನು ಆಧರಿಸಿ ಕಸ್ತೂರಿ ನಗರ ಮತ್ತು ಕೆಂಪಾಪುರದ ಹೊರವರ್ತುಲ ರಸ್ತೆಯಲ್ಲಿ ಬರುವ ಮರಗಳ ಸ್ಥಳಾಂತರ ಮತ್ತು ತೆರವಿಗೆ ಬಿಬಿಎಂಪಿ ಅಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಒಪ್ಪಿಗೆ ನೀಡಿದ್ದಾರೆ ಎಂದು ವಿವರಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ನಡುವೆ 1,334 ಮರಗಳನ್ನು ಕಡಿಯಲು, 163 ಮರಗಳನ್ನು ಸ್ಥಳಾಂತರಿಸಲು ಹಾಗೂ 26 ಮರಗಳನ್ನು ಉಳಿಸಿಕೊಳ್ಳಲು ಅನುಮತಿ ನೀಡಿತು. ಹಾಗೆಯೇ, ವೆಲ್ಲಾರ್ ಜಂಕ್ಷನ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಮಾರ್ಗದಲ್ಲಿ 8 ಮರಗಳನ್ನು ಕತ್ತರಿಸಲು ಮತ್ತು 2 ಮರಗಳನ್ನು ಉಳಿಸಿಕೊಳ್ಳಲು ಅನುಮತಿ ನೀಡಿ ಆದೇಶಿಸಿತು.

ABOUT THE AUTHOR

...view details