ಕರ್ನಾಟಕ

karnataka

ಭೂ ಕಬಳಿಕೆ ಪ್ರಕರಣ: ಸರ್ಕಾರದ ವಿಳಂಬ ಧೋರಣೆಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

By

Published : Jun 14, 2022, 11:15 AM IST

ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಪೂರ್ವಾನುಮತಿ ಪಡೆಯಲು ವಿಳಂಬ ಮಾಡಿದ್ದಕ್ಕಾಗಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿದೆ.

High Court
ಹೈಕೋರ್ಟ್

ಬೆಂಗಳೂರು: ಭೂ ಕಬಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಧಿಕಾರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವಲ್ಲಿ ವಿಳಂಬ ಧೋರಣೆ ಅನುಸರಿಸಿದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿದೆ.

ಆನೇಕಲ್ ತಾಲೂಕಿನ ರಾಮನಾಯಕನ ಹಳ್ಳಿಯಲ್ಲಿ ಸರ್ವೇ ನಂಬರ್​ 29ರಲ್ಲಿನ 66 ಎಕರೆ ಸರ್ಕಾರಿ ಜಮೀನನ್ನು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಅವರ ತಾಯಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಆರೋಪವಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಪೂರ್ವಾನುಮತಿ ಪಡೆಯಲು ವಿಳಂಬ ಮಾಡಿದ್ದಕ್ಕಾಗಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ದಂಡ ಹಾಕಿದೆ.

ಏನಿದು ಪ್ರಕರಣ?:ಎಸ್. ಭಾಸ್ಕರನ್ ಎಂಬವರು ಎಸಿಬಿಗೆ 2016ರ ಆಗಸ್ಟ್‌ 23ರಂದು ದೂರು ನೀಡಿ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.‌‌‌ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್ ಅವರು ತಮ್ಮ ತಾಯಿ ಹೆಸರಲ್ಲಿ ಭೂಮಿ ಒತ್ತುವರಿ ಮಾಡಿದ ಆರೋಪವಿದೆ. ಕೆಲ ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿ ಅಧಿಕಾರ ದುರ್ಬಳಕೆ ಮಾಡಿಕೊಂಡು, ಸರ್ಕಾರಿ ಜಮೀನಿಗೆ ಸಂಬಂಧಿಸಿದ ಕಂದಾಯ ದಾಖಲೆಗಳಲ್ಲಿ ತಮ್ಮ ತಾಯಿ ಹೆಸರು ನಮೂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಬಗ್ಗೆ ಎಸಿಬಿ ತನಿಖೆ ನಡೆಸಿದಾಗ ಬೆಂಗಳೂರಿನ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್ ಆಗಿರುವ ಡಿ.ಬಿ ಗಂಗಯ್ಯ ಪಾತ್ರ ಕಂಡು ಬಂದ ಹಿನ್ನೆಲೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ಎಸಿಬಿ 2018ರ ಸೆಪ್ಟೆಂಬರ್‌ 15ರಂದು ಎಫ್‌ಐಆರ್ ದಾಖಲಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಗಂಗಯ್ಯ ಅವರು ಹೈಕೋರ್ಟ್‌ಗೆ 2020ರಲ್ಲಿ ಅರ್ಜಿ ಸಲ್ಲಿಸಿದ್ದರು.

ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ:ಡಿ.ಬಿ ಗಂಗಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರ ನೇತೃತ್ವದ ಏಕ ಸದಸ್ಯ ಪೀಠ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ನೀಡಿದ್ದರೂ, ಈ ಪ್ರಕರಣದ 8ನೇ ಆರೋಪಿಯಾದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ಭೂ ಕಬಳಿಕೆ ಬಗ್ಗೆ 2019ರಲ್ಲಿಯೇ ದೂರು ದಾಖಲಾಗಿದ್ದರೂ, ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆಸಕ್ತಿ ತೋರಿಲ್ಲ. ಸರ್ಕಾರದ ಆಸ್ತಿಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್, ಈ ಪ್ರಕರಣದ ಬಗ್ಗೆ ಕಳೆದ ಎರಡು ವರ್ಷಗಳಿಂದ ವಿಚಾರಣೆ ನಡೆಸುತ್ತಿದ್ದು, ಎಸಿಬಿಯಿಂದ ತನಿಖಾ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿತ್ತು. ಪ್ರಕರಣದಲ್ಲಿ ಆರೋಪಿಗಳಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯುವ ವಿಚಾರವನ್ನು ಸ್ವತಃ ನ್ಯಾಯಾಲಯವೇ ಮೇಲ್ವಿಚಾರಣೆ ನಡೆಸುತ್ತಿತ್ತು.

ಪ್ರಕರಣದ 8ನೇ ಆರೋಪಿ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯಾಗಿದ್ದು, ಅವರ ವಿರುದ್ಧ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದಿಂದ ಪೂರ್ವಾನುಮತಿ ಪಡೆಯಬೇಕಿತ್ತು. ಆದರೆ, ಹಲವು ತಿಂಗಳಾದರೂ ಆರೋಪಿ ವಿರುದ್ಧದ ಸಂಬಂಧಪಟ್ಟ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸರ್ಕಾರ ಕಳುಹಿಸಿಕೊಡದಿರುವುದು ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತು.

ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಂದ ವಸೂಲಿ:6 ವಾರದಲ್ಲಿ 8ನೇ ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಪಡೆಯಲಾಗುವುದು ಎಂದು 2022ರ ಏಪ್ರಿಲ್‌ 20ರಂದು ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದ್ದರೂ, ಇದುವರೆಗೆ ಅನುಮತಿ ಪಡೆಯದಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಸರ್ಕಾರಕ್ಕೆ ಈಗ ದಂಡ ವಿಧಿಸಿದೆ.

ಒಂದು ವಾರದಲ್ಲಿ ದಂಡದ ಹಣವನ್ನು ಠೇವಣಿ ಇಡಬೇಕು. ಈ ದಂಡದ ಹಣವನ್ನು ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಪೂರ್ವಾನುಮತಿ ಪಡೆಯಲು ದಾಖಲೆಗಳನ್ನು ಕೇಂದ್ರ ಮತ್ತು ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ರವಾನಿಸದೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಂದ ಸರ್ಕಾರ ವಸೂಲಿ ಮಾಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಈ ಆದೇಶದ ಹೊರತಾಗಿಯೂ ದಂಡದ ಹಣ ಪಾವತಿಸದೇ ಹೋದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ಮಳಲಿ ಮಸೀದಿ ವಿವಾದ: ಅಸಲು ದಾವೆ ಸಿಂಧುತ್ವ ಕುರಿತ ಅರ್ಜಿ ವಿಚಾರಣೆಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ

ABOUT THE AUTHOR

...view details