ಕರ್ನಾಟಕ

karnataka

ಸಿಎಂ ನಿವಾಸಕ್ಕೆ ಈಶ್ವರಪ್ಪ, ಸವದಿ ಭೇಟಿ: ಸಂಪುಟ ಸೇರ್ಪಡೆಗೆ ಹಿರಿಯರಿಂದಲೂ ಲಾಬಿ

By

Published : Jun 23, 2022, 11:46 AM IST

ಈಶ್ವರಪ್ಪ, ಸವದಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿ ಇಂದು ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಬೆಂಗಳೂರು: ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು.

ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿ ಬೊಮ್ಮಾಯಿ ಜೊತೆ ಕೆಲ ಕಾಲ ಚರ್ಚೆ ನಡೆಸಿದರು. ಗುತ್ತಿಗೆದಾರರಿಂದ ಶೇ.40 ಕಮಿಷನ್​ಗೆ ಬೇಡಿಕೆಯಿಟ್ಟ ಆರೋಪದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈಶ್ವರಪ್ಪ, ಮತ್ತೆ ಸಂಪುಟ ಸೇರುವ ಕುರಿತು ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕ್ಷೇತ್ರದಲ್ಲೇ ಇದ್ದ ಈಶ್ವರಪ್ಪ, ಒಂದೆರೆಡು ಬಾರಿ ಮಾತ್ರ ಬೆಂಗಳೂರಿಗೆ ಬಂದು ಸಿಎಂ ಭೇಟಿಯಾಗಿದ್ದರು. ಇದೀಗ ಸಿಎಂ ದೆಹಲಿಗೆ ತೆರಳುತ್ತಿರುವ ವೇಳೆ ಇಂದು ಮತ್ತೆ ಸಿಎಂ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಇನ್ನು ದೆಹಲಿಗೆ ತೆರಳಲು ಸಿಎಂ ನಿವಾಸದಿಂದ ನಿರ್ಗಮಿಸುವ ವೇಳೆ ಅವರ ಕಾರು ಹತ್ತಿದ ಲಕ್ಷ್ಮಣ ಸವದಿ, ಬೊಮ್ಮಾಯಿ ಜೊತೆ ಪ್ರಯಾಣ ಬೆಳೆಸಿದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಲಕ್ಷ್ಮಣ ಸವದಿ ಮೊನ್ನೆತಾನೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಸಂಪುಟ ಸೇರ್ಪಡೆ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕಳೆದ ರಾತ್ರಿ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ದಂಡು ಸಿಎಂ ನಿವಾಸಕ್ಕೆ ದೌಡಾಯಿಸಿದ್ದು, ಇಂದು ಬೆಳಗ್ಗೆ ಹಿರಿಯ ನಾಯಕರು ಭೇಟಿ ಮಾಡಿ ಬೇಡಿಕೆ ಇರಿಸಿದ್ದಾರೆ. ಹೀಗಾಗಿ, ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ, ಹೈಕಮಾಂಡ್ ಜೊತೆ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸುತ್ತಾರಾ? ಅಥವಾ ಪುನರ್​ ರಚನೆ ಕುರಿತು ಮಾತುಕತೆ ನಡೆಸಲಿದ್ದಾರಾ? ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ಜೆಡಿಎಸ್​ನಿಂದ ಉಚ್ಚಾಟನೆ ಮಾಡಿರೋದು ನನಗೆ ಸಂತಸ ತಂದಿದೆ: ಗುಬ್ಬಿ ಶಾಸಕ ಶ್ರೀನಿವಾಸ್

ABOUT THE AUTHOR

...view details