ಕರ್ನಾಟಕ

karnataka

ಕಂಗನಾ ರಣಾವತ್, ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹದ ಕೇಸ್​​ ದಾಖಲಿಸಿದ ಕೆಪಿವೈಸಿಸಿ

By

Published : Nov 24, 2021, 9:06 AM IST

KPYCC case file against kangana and ajith barthi

ನಟಿ ಕಂಗನಾ ರಣಾವತ್ ಹಾಗೂ ಪತ್ರಕರ್ತ ಅಜಿತ್ ಬಾರ್ತಿ ವಿರುದ್ಧ ಕೆಪಿವೈಸಿಸಿ ದೇಶ ದ್ರೋಹ ದೂರು ದಾಖಲಿಸಿದೆ.

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ವೀರ ಸೇನಾನಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರ್ ಲಾಲ್ ನೆಹರು ವಿರುದ್ಧ ಅವಹೇಳನಕಾರಿಯಾಗಿ ಟೀಕೆ ಮಾಡಿರುವ ಪತ್ರಕರ್ತ ಅಜಿತ್ ಬಾರ್ತಿ ವಿರುದ್ಧ ದೇಶ ದ್ರೋಹ ಪ್ರಕರಣದಡಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್(KPYCC) ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಕಂಗನಾ ರಣಾವತ್ ಹಾಗು ಅಜಿತ್ ಬಾರ್ತಿ ವಿರುದ್ಧ ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ನೇತೃತ್ವದಲ್ಲಿ ದೂರು

ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ನೇತೃತ್ವದ ಯುವ ಕಾಂಗ್ರೆಸ್​​ನ ಕಾನೂನು ಘಟಕ ಕಂಗನಾ ರಣಾವತ್ ಮತ್ತು ಅಜಿತ್ ಬಾರ್ತಿ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ. ದೇಶ ದ್ರೋಹ ಎಸಗಿರುವ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ 124-A, 153-A, 500, 504, 505 ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯ ನಾಯಕರ ವಿರುದ್ಧ ಮಾಡಿದ ಮಾನಹಾನಿಕರ ಟೀಕೆಗಳು, ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಸೆಕ್ಷನ್ 13 ಅಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಕಂಗನಾ ರಣಾವತ್ ದೇಶಕ್ಕೆ 1947ರಲ್ಲಿ ದೊರೆತಿದ್ದು ಸ್ವಾತಂತ್ರ್ಯವಲ್ಲ, ಅದು ಭಿಕ್ಷೆ. ನಿಮಗೆ ನಿಜವಾದ ಸ್ವಾತಂತ್ರ್ಯ ದೊರೆತಿದ್ದು, 2014ರಲ್ಲಿ ಎಂದು ಹೇಳುವ ಮೂಲಕ ಸ್ವಾತಂತ್ರ್ಯ ಸೇನಾನಿಗಳಿಗೆ ಘೋರ ಅಪಮಾನ ಮಾಡಿದ್ದಾರೆ. ಇದೇ ರೀತಿ, ಅಜಿತ್ ಬಾರ್ತಿ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಕೆಪಿವೈಸಿಸಿ ಕಾನೂನು ಘಟಕ ತನ್ನ ದೂರಿಯಲ್ಲಿ ಮನವಿ ಮಾಡಿದೆ.

ದೇಶದ ಕೀರ್ತಿಗೆ ಧಕ್ಕೆಯಾಗಿದೆ:

ದೂರು ದಾಖಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಂ.ಎಸ್. ರಕ್ಷಾ ರಾಮಯ್ಯ, ದೇಶ 75 ನೇ ಸ್ವಾತಂತ್ರ್ಯೋತ್ಸವದ 'ಆಜಾದಿ ಕಾ ಅಮೃತ್ ಮಹೋತ್ಸವ್' ಆಚರಿಸುತ್ತಿರುವ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್ ಮಾಡಿರುವ ಟೀಕೆಯಿಂದ ಭಾರತದ ಕೀರ್ತಿಗೆ ದೇಶ ವಿದೇಶಗಳಲ್ಲಿ ಧಕ್ಕೆಯಾಗಿದೆ. ಇವರ ವಿರುದ್ಧ ಈವರೆಗೆ ಕೇಂದ್ರದ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಕಂಗನಾ ರಣಾವತ್ ನಿಜವಾದ ದೇಶ ಭಕ್ತೆಯಾಗಿದ್ದರೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು 'ಅಜಾದಿ ಕಾ ಅಮೃತ್ ಮಹೋತ್ಸವ್'ದ ರಾಯಾಭಾರಿ ಆಗಿ ನೇಮಕಮಾಡಿಕೊಳ್ಳುವುದು ಸೂಕ್ತ ಎಂದು ಕಿಡಿ ಕಾರಿದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಬಳಸಿಕೊಳ್ಳಿ:

ಕಂಗನಾ ರಣಾವತ್ ಅವರು ಅವರು ಹೇಳಿರುವುದು ಸೂಕ್ತ ಎಂದು ಕಂಡು ಬಂದಲ್ಲಿ ಮೋದಿ ಸರ್ಕಾರ ಬೇಕಿದ್ದರೆ ನವ ಭಾರತದ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಿ. ಗಾಂಧೀಜಿ ಅವರ ಹೋರಾಟವನ್ನು ಅತ್ಯಂತ ಕೀಳು ಮಟ್ಟದಿಂದ ದಿಕ್ಕರಿಸಿರುವ ಈ ನಟಿಯನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಬೇಕಿದ್ದರೆ ಬಳಸಿಕೊಳ್ಳಲಿ. ಸ್ವಚ್ಛತಾ ಭಾರತದ ಅಭಿಯಾನದಲ್ಲಿ ಮಹಾತ್ಮ ಗಾಂಧೀಜಿ ಕನ್ನಡಕದ ಲೋಗೋ ತೆಗೆದು ಕಂಗನಾ ರಣಾವತ್ ಲೋಗೋ ಬೇಕಿದ್ದರೆ ಹಾಕಿಕೊಳ್ಳಲಿ ಎಂದು ರಕ್ಷಾ ರಾಮಯ್ಯ ವ್ಯಂಗ್ಯವಾಡಿದರು.

ಹೇಗೆ ಮುಂದುವರೆಸುತ್ತೀರಿ?:
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇನ್ನೂ ಹಲವು ವೀರ ಸ್ವಾತಂತ್ರ್ಯ ಹೋರಾಟಗಾರರು ಈಗಲೂ ನಮ್ಮ ಜತೆ ಬದುಕಿದ್ದಾರೆ. ಇಂತಹ ದೇಶ ದ್ರೋಹಿಗಳನ್ನು ಮುಂದಿಟ್ಟುಕೊಂಡು ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮವನ್ನು ಹೇಗೆ ಮುಂದುವರೆಸುತ್ತೀರಿ ಎಂದು ಕೆಪಿವೈಸಿಸಿ ಅಧ್ಯಕ್ಷರು ಪ್ರಶ‍್ನಿಸಿದ್ದಾರೆ.

ಇದೇ ರೀತಿಯಲ್ಲಿ ಭಾರತದ ಸಾರ್ವಭೌಮತ್ವ ಪ್ರಶ್ನಿಸಿರುವ ಅಜಿತ್ ಬಾರ್ತಿ ವಿರುದ್ಧವೂ ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ತನ್ನ ಹೋರಾಟ ತೀವ್ರಗೊಳಿಸಲಿದೆ ಎಂದು ರಕ್ಷಾ ರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಸಂದರ್ಭದಲ್ಲಿ ಕಾನೂನು ಘಟಕದ ಅಧ್ಯಕ್ಷ ಚಾಣಕ್ಯ, ಜವಾಹರ್ ಲಾಲ್ ಬಾಲ್ ಭವನ್ ಅಧ್ಯಕ್ಷ ಸಿರಿಲ್ ಪ್ರಭು, ಕೆಪಿವೈಸಿಸಿ ಕಾರ್ಯದರ್ಶಿ ವಿಜಯ್ ಆನಂದ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಮಹಿಳಾ ಪೊಲೀಸರ ಸಂಚಾರ ನಿಯಮ ಉಲ್ಲಂಘನೆ: ವಿಡಿಯೋ ಮಾಡಿ ಛೀಮಾರಿ ಹಾಕಿದ ಟ್ರಾಫಿಕ್ ವಾರ್ಡನ್ !

ABOUT THE AUTHOR

...view details