ಕರ್ನಾಟಕ

karnataka

ಮುಗಿಯದ ರಾಜ್ಯ ಸಂಪುಟ ಸರ್ಕಸ್: ಮತ್ತೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

By

Published : Aug 5, 2022, 3:08 PM IST

CM Bommai and Amit Shah

ಈ ಬಾರಿಯಾದರೂ ಸಚಿವ ಸಂಪುಟ ವಿಸ್ತರಣೆಗೆ ಅವಕಾಶ ಸಿಗುತ್ತದೆಯೇನೋ ಎಂಬ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ದೆಹಲಿ ಪ್ರವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಣಿಯಾಗಿದ್ದಾರೆ.

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ರಚನೆಯಾಗಿ ವರ್ಷ ಕಳೆದರೂ ಸಂಪುಟ ವಿಸ್ತರಣೆ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ. ಹೈಕಮಾಂಡ್ ನಾಯಕರ ಭೇಟಿಗಾಗಿ ಅಲೆದಾಡಿ ಅಲೆದಾಡಿ ಸಾಕಾಗಿರುವ ಸಿಎಂ ಒಂದಿಲ್ಲೊಂದು ಕಾರಣಗಳಿಂದ ಬರಿಗೈಯಲ್ಲೇ ವಾಪಸ್​​ ಆಗುತ್ತಿದ್ದು, ಇದೀಗ ಮತ್ತೊಮ್ಮೆ ಹೊಸ ಭರವಸೆಯೊಂದಿಗೆ ರಾಜಧಾನಿ ವಿಮಾನ ಏರುತ್ತಿದ್ದಾರೆ.

ನಾಳೆ ಬೆಳಗ್ಗೆ 11.30ಕ್ಕೆ ದೆಹಲಿಗೆ ತೆರಳಲಿರುವ ಸಿಎಂ, ಸಂಜೆ 4.30ಕ್ಕೆ 'ಆಜಾದಿ ಕಾ ಅಮೃತ್ ಮಹೋತ್ಸವ' ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಡಿದ್ದು ಬೆಳಗ್ಗೆಯಿಂದ ಸಂಜೆಯವರೆಗೂ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲಿರುವ ಸಿಎಂ ಭಾನುವಾರ ರಾತ್ರಿ 11.30 ರ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್​​ ಆಗಲಿದ್ದಾರೆ.

ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಗಿದ ನಂತರ ವರಿಷ್ಠರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಲಿದ್ದಾರೆ. ಇದಕ್ಕಾಗಿ ಜೆ.ಪಿ.ನಡ್ಡಾ, ಅಮಿತ್ ಶಾ ಅವರ ಸಮಯಾವಕಾಶ ಕೋರಿದ್ದಾರೆ. ಅವಕಾಶ ಸಿಕ್ಕಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಂಪುಟ ವಿಸ್ತರಣೆ ಸರ್ಕಸ್: ಅತ್ಯಾಚಾರ ಆರೋಪ ಕೇಸ್​​ನಲ್ಲಿ ಬಿ ರಿಪೋರ್ಟ್ ಸಿಕ್ಕ ಹಿನ್ನೆಲೆಯಲ್ಲಿ ಮತ್ತೆ ಸಂಪುಟ ಸೇರಲು ರಮೇಶ್ ಜಾರಕಿಹೊಳಿ ತೀವ್ರ ಒತ್ತಡ ಹೇರುತ್ತಿದ್ದಾರೆ. ಇತ್ತ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದು ಮತ್ತೆ ಸಂಪುಟಕ್ಕೆ ರೀ ಎಂಟ್ರಿ ಕೊಡಲು ಕೆ.ಎಸ್.ಈಶ್ವರಪ್ಪ ಒತ್ತಡ ಹೇರುತ್ತಿದ್ದಾರೆ. ಇವರ ಜೊತೆ ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಮತ್ತಷ್ಟು ನಾಯಕರು ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದು, ಇವರೆಲ್ಲರ ಮನವೊಲಿಕೆ ಕಾರ್ಯ ಸಿಎಂ ಬೊಮ್ಮಾಯಿಗೆ ಕಷ್ಟದ ಕೆಲಸವಾಗಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಪದೇ ಪದೇ ಹೈಕಮಾಂಡ್ ನಾಯಕರ ಭೇಟಿ ಮಾಡಿ ಸಿಎಂ ಸಂಪುಟ ವಿಸ್ತರಣೆ ಸರ್ಕಸ್ ನಡೆಸುತ್ತಿದ್ದಾರೆ.

ಹೋದ ಪುಟ್ಟ ಬಂದ ಪುಟ್ಟ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಹುತೇಕ ಪ್ರತಿ ತಿಂಗಳು ದೆಹಲಿಗೆ ಭೇಟಿ ನೀಡಿದ್ದಾರೆ. ಒಮ್ಮೊಮ್ಮೆ ತಿಂಗಳಲ್ಲೇ ಎರಡು ಮೂರು ಬಾರಿ ಭೇಟಿ ನೀಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹೈಕಮಾಂಡ್ ನಾಯಕರನ್ನು ಎರಡು ವರ್ಷದಲ್ಲಿ ಭೇಟಿ ಮಾಡಿದ್ದಕ್ಕಿಂತ ನಾಲ್ಕಾರು ಪಟ್ಟು ಹೆಚ್ಚಿಗೆ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಆದರೆ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳುವಲ್ಲಿ ಇನ್ನು ಸಫಲರಾಗಿಲ್ಲ.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಐದಾರು ಬಾರಿ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಿದರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ. ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ ರಾಜ್ಯಕ್ಕೆ ಬಂದಾಗಲೂ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆದರೂ ಅನುಮತಿ ಮಾತ್ರ ಸಿಕ್ಕಿಲ್ಲ.

ಖುದ್ದು ಅಮಿತ್ ಶಾ ಮಲ್ಲೇಶ್ವರಂ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಕುರಿತು ಎಲ್ಲ ರೀತಿಯ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು. ದೆಹಲಿಗೆ ಹೋಗಿ ಮಾಹಿತಿ ನೀಡುವುದಾಗಿ ತಿಳಿಸಿ ನಿರ್ಗಮಿಸಿದ ಅಮಿತ್ ಶಾ ಇಲ್ಲಿಯವರೆಗೂ ಸಂಪುಟ ವಿಸ್ತರಣೆ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಮೋದಿ ಬಳಿ ಹೋದರೆ ಅಮಿತ್ ಶಾ ಬಳಿ ಹೋಗಿ ಎನ್ನುವ ಉತ್ತರ, ಅಮಿತ್ ಶಾ ಬಳಿ ಹೋದರೆ ನಡ್ಡಾ ಜೊತೆ ಚರ್ಚಿಸಿ ಎನ್ನುವ ಉತ್ತರ, ನಡ್ಡಾ ಬಳಿ ಹೋದರೆ ಚರ್ಚಿಸಿ ಹೇಳುತ್ತೇವೆ ಎನ್ನುವ ಉತ್ತರ ಸಿಗುತ್ತಿದೆ. ಪ್ರತಿ ಬಾರಿ ಇದೇ ಉತ್ತರದೊಂದಿಗೆ ಸಿಎಂ ದೆಹಲಿಯಿಂದ ಬೆಂಗಳೂರಿಗೆ ವಾಪಸ್​​ ಆಗುತ್ತಿದ್ದಾರೆ.

ಇದೀಗ ರಾಜ್ಯದಲ್ಲಿ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದು, 8 ತಿಂಗಳು ಮಾತ್ರ ಸಮಯವಿದೆ. ಈಗ ಚುನಾವಣಾ ಸಂಪುಟ ಸಿದ್ದಗೊಳಿಸಿ ರಂಗಪ್ರವೇಶ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಿಯೂ ಪ್ರಯೋಜನವಿಲ್ಲದಂತಾಗಲಿದೆ. ಹಾಗಾಗಿ ಈಗ ಮತ್ತೆ ಸಂಪುಟ ಸರ್ಕಸ್ ನಡೆಸಲು ಅಗತ್ಯ ಸಿದ್ದತೆ ಮಾಡಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳುತ್ತಿದ್ದಾರೆ. ಈ ಬಾರಿಯಾದರೂ ಸಂಪುಟ ಸರ್ಕಸ್​​ಗೆ ಬೀಳುತ್ತಾ ತೆರೆ, ಬೊಮ್ಮಾಯಿ ಸಂಪುಟಕ್ಕೆ ಆಗಲಿದೆಯಾ ಸರ್ಜರಿ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಸಂಪುಟ ಸರ್ಕಸ್​.. ಸಿಎಂ-ಶಾ ಭೇಟಿ ಅಂತ್ಯ, ಬರಿಗೈಯಲ್ಲೇ ರಾಜ್ಯಕ್ಕೆ ಬೊಮ್ಮಾಯಿ ವಾಪಸ್

ABOUT THE AUTHOR

...view details