ಕರ್ನಾಟಕ

karnataka

ಕ್ರೆಡಿಟ್ ಕಾರ್ಡ್​ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ

By

Published : May 19, 2023, 7:18 PM IST

ಕ್ರೆಡಿಟ್​ ಕಾರ್ಡ್​ಗಳ ಮೇಲೆ ಈಗ ಸಾಲ ಪಡೆಯುವ ಸೌಲಭ್ಯ ನೀಡಲಾಗುತ್ತಿದೆ. ನಿಮ್ಮ ಕಾರ್ಡ್​ ಲಿಮಿಟ್ ಒಳಗಡೆ ಸಾಲ ಪಡೆಯುವುದು ಈಗ ಸಾಧ್ಯವಿದೆ.

ಕ್ರೆಡಿಟ್ ಕಾರ್ಡ್​ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ
How to get a loan with a credit card?

ಹೈದರಾಬಾದ್ : ಕ್ರೆಡಿಟ್ ಕಾರ್ಡ್‌ಗಳನ್ನು ನಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಮಾತ್ರವಲ್ಲದೇ ತುರ್ತು ಸಂದರ್ಭಗಳಲ್ಲಿ ತಕ್ಷಣದ ಸಾಲದ ಸಾಧನವಾಗಿಯೂ ಬಳಸಬಹುದು. ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ, ಕ್ರೆಡಿಟ್ ಕಾರ್ಡ್ ಸಾಲವನ್ನು ಬಹಳ ತ್ವರಿತವಾಗಿ ಪಡೆಯಬಹುದು. ಇದಕ್ಕಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಆದರೆ, ಕ್ರೆಡಿಟ್ ಕಾರ್ಡ್‌ ಮೇಲೆ ಸಾಲ ಪಡೆಯುವ ಮುನ್ನ ಅದರ ನಿಯಮಗಳು ಮತ್ತು ನಿಬಂಧನೆಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಗಳನ್ನು ಮಾಡಬಹುದು ಹಾಗೂ ಕೆಲವೊಮ್ಮೆ ಸೀಮಿತ ಮಿತಿಯೊಳಗೆ ಎಟಿಎಂಗಳಿಂದ ಹಣವನ್ನು ಹಿಂಪಡೆಯಬಹುದು. ಇದಲ್ಲದೆ ಕ್ರೆಡಿಟ್ ಕಾರ್ಡ್‌ಗಳಲ್ಲಿ ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಬಳಸುವ ವಿಧಾನ ಮತ್ತು ಕ್ರೆಡಿಟ್ ಸ್ಕೋರ್ ಆಧರಿಸಿ ಕಾರ್ಡ್ ಕಂಪನಿಗಳು ಈ ಸಾಲವನ್ನು ನೀಡುತ್ತವೆ.

ಇದು ಅಸುರಕ್ಷಿತ ಸಾಲ:ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲರಿಗೂ ಇಂಥ ಸಾಲ ಸಿಗಲ್ಲ. ಬ್ಯಾಂಕುಗಳು ಮತ್ತು ಕಾರ್ಡ್ ಕಂಪನಿಗಳು ಆಯಾ ಕಾರ್ಡ್‌ಗಳಲ್ಲಿ ಎಷ್ಟು ಸಾಲವನ್ನು ನೀಡುತ್ತವೆ ಎಂಬುದನ್ನು ಮುಂಚಿತವಾಗಿ ತಿಳಿಸುತ್ತವೆ. ನಿಮಗೆ ನಗದು ಅಗತ್ಯವಿದ್ದಾಗ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇದು ಅಸುರಕ್ಷಿತ ಸಾಲವಾಗಿದೆ. ಆದರೆ ಸಾಲ ಮರುಪಾವತಿಸುವ ಸಮಯದಲ್ಲಿ ಬಡ್ಡಿ ಪಾವತಿಸಬೇಕಾಗುತ್ತದೆ. ಕಾರ್ಡ್‌ ಮೆಲೆ ಪಡೆದ ಸಾಲ ಮರುಪಾವತಿಗೆ ನಿಗದಿತ ಅವಧಿ ಇರುತ್ತದೆ. ಇದಕ್ಕೆ ಶೇ 16 ರಿಂದ 18 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 36 ತಿಂಗಳ ಗರಿಷ್ಠ ಸಾಲದ ಅವಧಿಯನ್ನು ಆಯ್ಕೆ ಮಾಡಬಹುದು.

ಲಿಮಿಟ್ ಕಡಿಮೆಯಾಗುವುದಿಲ್ಲ : ಕಾರ್ಡ್ ಬಳಸಿ ಎಟಿಎಂನಿಂದ ಹಣ ಡ್ರಾ ಮಾಡುತ್ತೀರಿ ಎಂದಿಟ್ಟುಕೊಳ್ಳಿ.. ಆ ಮಟ್ಟಿಗೆ ಕಾರ್ಡ್‌ನ ಮಿತಿ ಕಡಿಮೆಯಾಗುತ್ತದೆ. ಸಾಲವನ್ನು ತೆಗೆದುಕೊಳ್ಳುವಾಗ ಕಾರ್ಡ್ ಲಿಮಿಟ್​ನೊಂದಿಗೆ ಯಾವುದೇ ಸಂಬಂಧ ಇರುವುದಿಲ್ಲ. ಇದು ನಿಮಗೆ ಅಡೆತಡೆ ಇಲ್ಲದೇ ಖರೀದಿ ಮಾಡಲು ಅವಕಾಶ ನೀಡುತ್ತದೆ.

ದಾಖಲೆಗಳಿಲ್ಲದೆ ಸಾಲ:ಕ್ರೆಡಿಟ್ ಕಾರ್ಡ್‌ಗಳನ್ನು ತೆಗೆದುಕೊಳ್ಳುವಾಗ ನೀವು ಸಲ್ಲಿಸುವ ದಾಖಲೆಗಳ ಆಧಾರದ ಮೇಲೆ ಬ್ಯಾಂಕ್‌ಗಳು ಕಾರ್ಡ್‌ಗಳ ಮೇಲೆ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಆದ್ದರಿಂದ, ಬೇರೆ ಯಾವುದೇ ದಾಖಲೆಗಳನ್ನು ಪ್ರತ್ಯೇಕವಾಗಿ ಒದಗಿಸುವ ಅಗತ್ಯವಿಲ್ಲ.

ಆನ್‌ಲೈನ್‌ನಲ್ಲಿ ಸಾಲದ ವಿವರ: ನೀವು ಆನ್‌ಲೈನ್‌ನಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ಪರಿಶೀಲಿಸಿದಾಗ ಲೋನ್ ಅನುಮೋದನೆಯ ಬಗ್ಗೆ ನಿಮಗೆ ಮುಂಚಿತವಾಗಿ ತಿಳಿಯುತ್ತದೆ. ಬಡ್ಡಿ ಎಷ್ಟು, ಅವಧಿ ಮತ್ತು EMI ಮೊತ್ತದಂತಹ ಎಲ್ಲ ವಿವರಗಳನ್ನು ತಿಳಿದುಕೊಳ್ಳಬಹುದು. ತುರ್ತು ಸಂದರ್ಭಗಳಲ್ಲಿ ಮಾತ್ರ ಈ ಸೌಲಭ್ಯವನ್ನು ಬಳಸಲು ಪ್ರಯತ್ನಿಸಿ.

EMI ಕಾರ್ಡ್ ಬಿಲ್: ಈ ಸಾಲವನ್ನು ತೆಗೆದುಕೊಂಡ ನಂತರ EMI ಕಾರ್ಡ್ ಬಿಲ್ ಅನ್ನು ಬಡ್ಡಿ ಮತ್ತು ಅಸಲು ಮೊತ್ತದೊಂದಿಗೆ ಪಾವತಿಸಬೇಕು. ಆದ್ದರಿಂದ, ಕಂತು ಪಾವತಿಗೆ ಬೇರೆ ಪ್ರತ್ಯೇಕ ದಿನಾಂಕ ಇರುವುದಿಲ್ಲ. ಕೆಲ ಕಾರ್ಡ್ ಕಂಪನಿಗಳು ಐದು ವರ್ಷಗಳ ಅವಧಿಯನ್ನು ನೀಡುತ್ತವೆ. ಆದರೆ, ಅದನ್ನು ಮೂರು ವರ್ಷಕ್ಕೆ ಸೀಮಿತಗೊಳಿಸುವುದು ಯಾವಾಗಲೂ ಉತ್ತಮ.

ತುರ್ತು ಸಂದರ್ಭಗಳಲ್ಲಿ ಮಾತ್ರ ಪಡೆಯಿರಿ : ಹಣದ ಅಗತ್ಯವಿದ್ದಾಗ ಮಾತ್ರ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಲಭ್ಯವಿದ್ದರೆ, ಇತರ ಮಾರ್ಗಗಳನ್ನು ಅನ್ವೇಷಿಸಬೇಕು. ಕ್ರೆಡಿಟ್ ಕಾರ್ಡ್ ಸಾಲಗಳು ಹೆಚ್ಚಿನ ಬಡ್ಡಿ ದರವನ್ನು ಹೊಂದಿರುತ್ತವೆ. ನಿಮ್ಮ ಒಟ್ಟು EMI ಗಳು ನಿಮ್ಮ ಆದಾಯದ 40 ಪ್ರತಿಶತವನ್ನು ಮೀರದಂತೆ ನೋಡಿಕೊಳ್ಳಿ. ಕಾರ್ಡ್ ಬಿಲ್ ಗಳನ್ನು ಸಕಾಲಕ್ಕೆ ಪಾವತಿಸದಿದ್ದರೆ ಸಾಲದ ಸುಳಿಯಲ್ಲಿ ಸಿಲುಕುತ್ತೇವೆ. ಕ್ರೆಡಿಟ್ ಇತಿಹಾಸ ಮತ್ತು ಕ್ರೆಡಿಟ್ ಸ್ಕೋರ್ ಸಹ ಹಾನಿಯಾಗುತ್ತದೆ.

ಇದನ್ನೂ ಓದಿ : ಗೂಗಲ್ ಸಿಇಒ ಸುಂದರ್ ಪಿಚೈ ಪೂರ್ವಿಕರ ಮನೆ ಮಾರಾಟ: ತಮಿಳು ನಟನಿಂದ ಖರೀದಿ

ABOUT THE AUTHOR

...view details