ಕರ್ನಾಟಕ

karnataka

ಸರ್ಕಾರಿ ಕಚೇರಿಯಲ್ಲಿ ಲಾಡೆನ್‌ ಭಾವಚಿತ್ರ ಹಾಕಿ, ಮೆಚ್ಚುಗೆ: ಎಂಜಿನಿಯರ್ ವಜಾ

By

Published : Mar 22, 2023, 10:28 AM IST

ಅಲ್​ಖೈದಾ ಉಗ್ರ ಒಸಾಮಾ ಬಿನ್​ ಲಾಡೆನ್​​ನನ್ನು ಹೊಗಳಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಕೆಲಸದಿಂದ ವಜಾಗೊಳಿಸಿದೆ.

UP engineer sacked for eulogising Osama Bin Laden
ಒಸಾಮಾ ಬಿನ್ ಲಾಡೆನ್‌ನನ್ನು ಶ್ಲಾಘಿಸಿದ ಇಂಜಿನಿಯರ್ ವಜಾ

ಕಾನ್ಪುರ (ಉತ್ತರ ಪ್ರದೇಶ): ಅಮೆರಿಕದ ವಿಶೇಷ ಸೇನಾ ಪಡೆಯಿಂದ ಹತ್ಯೆಗೀಡಾದ ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್‌ನ ಭಾವಚಿತ್ರವನ್ನು ತನ್ನ ಕಚೇರಿಯಲ್ಲಿ ಅಳವಡಿಸಿ ಮತ್ತು ಆತನನ್ನು ಹೊಗಳಿದ್ದಕ್ಕಾಗಿ ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್​ನ (ಯುಪಿಪಿಸಿಎಲ್) ಎಂಜಿನಿಯರ್‌ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ರವೀಂದ್ರ ಪ್ರಕಾಶ್ ಗೌತಮ್ ಎಂಬಾತನೇ ಅಮಾನತುಗೊಂಡ ಇಂಜಿನಿಯರ್​.

ಯುಪಿಪಿಸಿಎಲ್​ನ ಉಪವಿಭಾಗಾಧಿಕಾರಿಯಾಗಿದ್ದ ರವೀಂದ್ರ ಪ್ರಕಾಶ್​ ಗೌತಮ್,​​ ಕಳೆದ 2022ರ ಜೂನ್ ತಿಂಗಳಲ್ಲಿ ಫಾರೂಕಾಬಾದ್ ಜಿಲ್ಲೆಯ ಕಾಯಮ್‌ಗಂಜ್​ನಲ್ಲಿರುವ ಉಪವಿಭಾಗ-IIರ ತನ್ನ ಕಚೇರಿಯಲ್ಲಿ ಉಗ್ರ ಒಸಾಮಾ ಬಿನ್​ ಲಾಡೆನ್​​ನ ಭಾವಚಿತ್ರ ಹಾಕಿದ್ದರು ಎನ್ನಲಾಗಿದೆ. ಇದೀಗ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ ಕೆಲಸದಿಂದ ತೆಗೆದುಹಾಕಿ ಯುಪಿಪಿಸಿಎಲ್​​ನ ಅಧ್ಯಕ್ಷ ಎಂ.ದೇವರಾಜ್ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ತನಿಖಾ ಸಮಿತಿಯು, ದೇಶವಿರೋಧಿ ಕೃತ್ಯದಲ್ಲಿ ತೊಡಗಿ, ಇಲಾಖೆಗೆ ಕಳಂಕ ತರುವ ಕೆಲಸ ಮಾಡಿರುವುದಾಗಿ ಅಭಿಪ್ರಾಯಪಟ್ಟಿದೆ.

ಕಳೆದ ವರ್ಷ ಅಮಾನತುಗೊಂಡ ಗೌತಮ್​​ನ ಕಾಯಮ್​ಗಂಜ್​​ ಕಚೇರಿಯಲ್ಲಿ ಒಸಾಮಾ ಬಿನ್​ ಲಾಡೆನ್​ನ ಚಿತ್ರವನ್ನು ತೂಗು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆರೋಪಿಯು ಈ ಭಾವಚಿತ್ರಕ್ಕೆ ಗೌರವಾನ್ವಿತ ಒಸಾಮಾ ಬಿನ್​ ಲಾಡೆನ್​​, ವಿಶ್ವದ ಅತ್ಯುತ್ತಮ ಇಂಜಿನಿಯರ್​ ಎಂದು ಅಡಿಬರಹ ಬರೆದಿದ್ದ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆತನ ಸಹೊದ್ಯೋಗಿಗಳು, ಗೌತಮ್​​ ಇಂಜಿನಿಯರಿಂಗ್​ ಪದವಿ ಹೊಂದಿದ್ದರಿಂದ ಮೋಸ್ಟ್​ ವಾಂಟೆಡ್​​ ಉಗ್ರ ಒಸಾಮಾ ಬಿನ್​ ಲಾಡೆನ್‌​ನ್ನು ಆರಾಧಿಸುತ್ತಿದ್ದ ಎಂದು ಹೇಳಿದ್ದಾರೆ. ಅಲ್ಲದೇ ಗೌತಮ್ ಕೂಡ ಈ ವಿಡಿಯೋ ನಿಜವೆಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ :ಗುರುದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಅಮೃತ್​ಪಾಲ್​ ಬೆಂಬಲಿಗರು: ಪ್ರತಿಭಟನೆ ತೆರವುಗೊಳಿಸಿದ ಪಂಜಾಬ್​ ಪೊಲೀಸ್​

ಘಟನೆಯ ಬಗ್ಗೆ ದಕ್ಷಿಣಾಂಚಲ್ ವಿದ್ಯುತ್ ವಿತ್ರನ್ ನಿಗಮ್ ಲಿಮಿಟೆಡ್ (ಡಿವಿವಿಎನ್ ಎಲ್) ವ್ಯವಸ್ಥಾಪಕ ನಿರ್ದೇಶಕ ಅಮಿತ್ ಕಿಶೋರ್ ಪ್ರತಿಕ್ರಿಯಿಸಿ, "ಗೌತಮ್ ಅವರನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಲಾಗಿದೆ. ಅವರ ವಿರುದ್ಧದ ತನಿಖೆ ಚುರುಕುಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.

ಡಿವಿವಿಎನ್‌ಎಲ್‌ನ ತನಿಖಾ ಸಮಿತಿಯು ಆರೋಪಿ ಗೌತಮ್ ವಿರುದ್ಧ ಆದಾಯ ನಷ್ಟ, ಎಂಡಿಯೊಂದಿಗೆ ನೇರ ಪತ್ರ ವ್ಯವಹಾರ, ಹಿರಿಯ ಅಧಿಕಾರಿಗಳೊಂದಿಗೆ ಅಸಭ್ಯ ವರ್ತನೆ ಮತ್ತು ಇಲಾಖಾ ಕೆಲಸದಲ್ಲಿ ನಿರ್ಲಕ್ಷ್ಯ ಮುಂತಾದ ಹಲವು ಆರೋಪಗಳನ್ನು ಮಾಡಿದೆ. ಈ ಬಗ್ಗೆ ಉತ್ತರಿಸುವಂತೆ ಕೇಳಿದಾಗ ಗೌತಮ್​ ಅಸಮರ್ಪಕ ಉತ್ತರಗಳನ್ನು ನೀಡಿರುವುದಾಗಿ ವಿಚಾರಣಾ ಸಮಿತಿ ತಿಳಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೌತಮ್​​, "ದೇಶದ ಒಂದು ವರ್ಗದ ಜನರು ಗಾಂಧೀಜಿಯನ್ನು ಹತ್ಯೆಗೈದ ನಾಥೂರಾಮ್​​ ಗೋಡ್ಸೆಯನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸಬಹುದಾದರೆ, ನಾನೇಕೆ ಒಸಾಮಾ ಬಿನ್ ಲಾಡೆನ್ ಅವರನ್ನು ತನ್ನ ಆರಾಧ್ಯದೈವ ಎಂದು ಪರಿಗಣಿಸಬಾರದು" ಎಂದು ಪ್ರಶ್ನಿಸಿದ್ದಾನೆ.

ಇದನ್ನೂ ಓದಿ :ಪರಾರಿಯಾಗಲು ಮರ್ಸಿಡಿಸ್ ಬೆಂಜ್, ಎಸ್‌ಯುವಿ ಕಾರು, ಬೈಕ್‌ ಬಳಸಿದ ಅಮೃತ್‌ಪಾಲ್!

ABOUT THE AUTHOR

...view details