ಕರ್ನಾಟಕ

karnataka

ಆನ್​ಲೈನ್​ ಗೇಮಿಂಗ್ ರದ್ಧತಿ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ: ವಿವಿಧ ಕಂಪನಿಗಳಿಗೆ ಸುಪ್ರೀಂ ನೋಟಿಸ್​

By

Published : Sep 16, 2022, 5:40 PM IST

supreme-court-issued-notices-based-gaming-companies
ಆನ್​ಲೈನ್​ ಗೇಮಿಂಗ್ ರದ್ಧತಿ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ: ವಿವಿಧ ಕಂಪನಿಗಳಿಗೆ ಸುಪ್ರೀಂ ನೋಟಿಸ್​ ()

ಆನ್​ಲೈನ್​ ಗೇಮಿಂಗ್​ ಮೇಲೆ ನಿಷೇಧ ಆದೇಶ ರದ್ಧತಿ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿದೆ.

ನವದೆಹಲಿ: ಆನ್​ಲೈನ್​ ಗೇಮಿಂಗ್​ ಮೇಲೆ ನಿಷೇಧವನ್ನು ರದ್ದುಗೊಳಿಸುವ ಹೈಕೋರ್ಟ್​ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿರುವ ಅರ್ಜಿ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್​ ನಡೆಸಿತು. ಈ ಅರ್ಜಿ ವಿಚಾರಣೆ ವೇಳೆ ಕೌಶಲ್ಯ ಆಧಾರಿತ ಗೇಮಿಂಗ್ ಕಂಪನಿಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ಸರ್ವೋಚ್ಛ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.

ಆನ್​ಲೈನ್​ ಗೇಮಿಂಗ್ ಹಾಗೂ ಗ್ಯಾಮ್ಲಿಂಗ್ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು. ಆದರೆ, ಆನ್​ಲೈನ್​ ಗೇಮಿಂಗ್ ಮೇಲೆ ನಿಷೇಧ ಕುರಿತಾದ ಕರ್ನಾಟಕ ಪೊಲೀಸ್ ಕಾಯಿದೆಯ ವಿವಾದಾತ್ಮಕ ನಿಬಂಧನೆಗಳನ್ನು ಫೆಬ್ರವರಿ 14ರಂದು ಕರ್ನಾಟಕ ಹೈಕೋರ್ಟ್ ಅಸಾಂವಿಧಾನಿಕ ಎಂದು ಪರಿಗಣಿಸಿ ರದ್ದು ಮಾಡಿ ಆದೇಶಿಸಿತ್ತು. ಹೈಕೋರ್ಟ್​ನ ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದೇ ರೀತಿಯ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರ ಕೂಡ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಹೀಗಾಗಿ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ವಿ. ರಾಮ ಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯ ಪೀಠವು ಎರಡೂ ವಿಷಯಗಳನ್ನು ಒಟ್ಟಾಗಿ ವಿಚಾರಣೆ ನಡೆಸಿ ಈ ನೋಟಿಸ್​ ಜಾರಿ ಮಾಡಿದೆ.

ಇದರಲ್ಲಿ ಕೌಶಲ್ಯ ಗೇಮಿಂಗ್ ಉದ್ಯಮ ಸಂಸ್ಥೆಯಾದ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (ಎಐಜಿಎಫ್​), ಸ್ವಯಂ ನಿಯಂತ್ರಿತ ಫ್ಯಾಂಟಸಿ ಕ್ರೀಡಾ ಉದ್ಯಮ ಸಂಸ್ಥೆಯಾದ ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ (ಎಫ್​ಐಎಫ್​ಎಸ್​), ಗೇಮಿಂಗ್ ಸಂಸ್ಥೆಗಳಾದ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್​), ಗೇಮ್ಸ್​ 24x7, ಹೆಡ್ ಡಿಜಿಟಲ್ ವರ್ಕ್ಸ್, ಜಂಗ್ಲೀ ಗೇಮ್ಸ್ ಮತ್ತು ಗೇಮ್ಸ್​​ಕ್ರಾಫ್ಟ್ ಸಂಸ್ಥೆಗಳಿಗೆ ನೋಟಿಸ್​ ಜಾರಿಗೊಳಿಸಲಾಗಿದೆ.

ಇನ್ನೆರಡು ರಾಜ್ಯಗಳ ಅರ್ಜಿಗಳನ್ನು ಇದರೊಂದಿಗೆ ವಿಚಾರಣೆ ನಡೆಸಲು ನಿರ್ಧಾರ;ಇನ್ನು, ಸೆಪ್ಟೆಂಬರ್ 9ರಂದು ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಪ್ರತ್ಯೇಕ ನ್ಯಾಯ ಪೀಠವು 10 ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಿತ್ತು. ಈಗ ಗೇಮಿಂಗ್ ಕಂಪನಿಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ತಮ್ಮ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಮರು ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಬಯಸಿದರೆ ಅದಕ್ಕೆ ಇನ್ನೂ ಎರಡು ವಾರಗಳ ಕಾಲಾವಕಾಶ ಸಿಗಲಿದೆ.

ಕಳೆದ ವರ್ಷ ಕೇರಳ ಮತ್ತು ಮದ್ರಾಸ್ ಹೈಕೋರ್ಟ್‌ಗಳು ಆನ್​ಲೈನ್​ ಗೇಮಿಂಗ್​ ನಿಷೇಧ ರದ್ದುಗೊಳಿಸಿದ್ದವು. ಅಲ್ಲದೇ, 2021ರ ಜುಲೈನಲ್ಲಿ ಸುಪ್ರೀಂಕೋರ್ಟ್ ಫ್ಯಾಂಟಸಿ ಕ್ರೀಡೆಗಳನ್ನು ಕೌಶಲ್ಯದ ಆಟವೆಂದು ಈ ಆದೇಶಗಳನ್ನು ಎತ್ತಿಹಿಡಿದಿತ್ತು. ಈಗ ಆನ್‌ಲೈನ್ ಗೇಮಿಂಗ್ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಯಂತ್ರಣ ನಿಯಮಗಳನ್ನು ರೂಪಿಸುತ್ತಿರುವಾಗಲೇ ಈ ಬೆಳವಣಿಗೆಗಳು ನಡೆಯುತ್ತಿವೆ ಎಂಬುವುದೂ ಮತ್ತೊಂದು ಗಮನಾರ್ಹ ವಿಷಯ.

ಇನ್ನು, ಇದೇ ಮೇ ತಿಂಗಳಲ್ಲಿ ಆನ್‌ಲೈನ್ ಗೇಮಿಂಗ್ ಸಂಬಂಧಿಸಿದ ನಿಯಮಗಳು ಹಾಗೂ ನೋಡಲ್ ಸಚಿವಾಲಯವನ್ನು ಗುರುತಿಸಲು ಮಾಹಿತಿ ತಂತ್ರಜ್ಞಾನದ ಇಲಾಖೆಯ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸರ್ಕಾರವು ಏಳು ಸದಸ್ಯರ ಅಂತರ ಸಚಿವಾಲಯ ಕಾರ್ಯಪಡೆಯನ್ನು ಸ್ಥಾಪಿಸಿದೆ. ಕೌಶಲ್ಯ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ಉದ್ಯಮ ಸಂಘಗಳು, ವಕೀಲರು ಮತ್ತು ಗೇಮರುಗಳೊಂದಿಗೆ ಈಗಾಗಲೇ ಹಲವಾರು ಸುತ್ತಿನ ಸಭೆ ಮತ್ತು ಚರ್ಚೆಗಳನ್ನು ಸಚಿವರು ನಡೆಸಿದ್ದಾರೆ.

ಇದನ್ನೂ ಓದಿ:ಭಾರತೀಯ ಸೈಬರ್‌ಸ್ಪೇಸ್​ಗೆ ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಎಂಟ್ರಿ.. ಗ್ರಾಹಕರೇ ಎಚ್ಚರ

ABOUT THE AUTHOR

...view details