ಕರ್ನಾಟಕ

karnataka

ಲೋಕಸಭೆ ಬಳಿಕ ರಾಜ್ಯಸಭೆಯ ವಿಪಕ್ಷಗಳ 45 ಸಂಸದರು ಅಮಾನತು

By ETV Bharat Karnataka Team

Published : Dec 18, 2023, 6:04 PM IST

Updated : Dec 19, 2023, 10:48 AM IST

ಲೋಕಸಭೆಯಲ್ಲಿ ಸಂಸದರನ್ನು ಅಮಾನತು ಮಾಡಿದ ಬೆನ್ನಲ್ಲೇ, ರಾಜ್ಯಸಭೆಯ 45 ಮಂದಿಯನ್ನು ಅಧಿವೇಶನದ ಕೊನೆಯವರೆಗೂ ಸಸ್ಪೆಂಡ್​ ಮಾಡಿ ಆದೇಶಿಸಲಾಗಿದೆ.

ರಾಜ್ಯಸಭೆಯ ವಿಪಕ್ಷಗಳ 45 ಸಂಸದರು ಅಮಾನತು
ರಾಜ್ಯಸಭೆಯ ವಿಪಕ್ಷಗಳ 45 ಸಂಸದರು ಅಮಾನತು

ನವದೆಹಲಿ:ಲೋಕಸಭೆಯಲ್ಲಿ ವಿಪಕ್ಷಗಳ 33 ಸಂಸದರನ್ನು ಸೋಮವಾರ ಮುಂಜಾನೆ ಅಮಾನತು ಮಾಡಿದ ಬೆನ್ನಲ್ಲೇ, ರಾಜ್ಯಸಭೆಯ ಕಲಾಪಕ್ಕೆ ಅಡ್ಡಿ ಮಾಡಿ, ಸದನಕ್ಕೆ ಚ್ಯುತಿ ತಂದ ಆರೋಪದ ಮೇಲೆ 45 ರಾಜ್ಯಸಭಾ ಸಂಸದರನ್ನೂ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಿ ಸಭಾಪತಿ ಮತ್ತು ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ಸೋಮವಾರ ಆದೇಶಿಸಿದರು. ಇದಕ್ಕೂ ಮೊದಲು ಟಿಎಂಸಿಯ ಓರ್ವ ಸಂಸದರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಒಟ್ಟು 46 ಮಂದಿ ಶಿಕ್ಷೆಗೆ ಒಳಗಾದಂತಾಗಿದೆ.

ಕಾಂಗ್ರೆಸ್​ನ ರಣದೀಪ್ ಸುರ್ಜೇವಾಲಾ, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್​ ಸೇರಿದಂತೆ 45 ರಾಜ್ಯಸಭಾ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಇದರಲ್ಲಿ ಸದನದ ಗೌರವಕ್ಕೆ ಧಕ್ಕೆ ತಂದ 11 ಮಂದಿಯನ್ನು ವಿಶೇಷಾಧಿಕಾರ ಸಮಿತಿಯು ವರದಿ ನೀಡುವವರೆಗೆ ಅಮಾನತಿನಲ್ಲಿಡಲಾಗುವುದು ಎಂದು ಸಭಾಪತಿಗಳು ತಿಳಿಸಿದರು.

ಇಂದು ಬೆಳಗ್ಗೆ ಸದನ ಆರಂಭವಾದ ತಕ್ಷಣವೇ ಸಂಸತ್​ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್​ ಶಾ ಅವರ ರಾಜೀನಾಮೆ ಪಡೆಯಬೇಕು ಮತ್ತು ಸದನದಲ್ಲಿ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದು ಘೋಷಣೆ ಕೂಗಿದವು. ಗದ್ದಲದ ಕಾರಣ ಎರಡು ಬಾರಿ ಸದನವನ್ನು ಸಭಾಪತಿಗಳು ಮುಂದೂಡಿದರು. ರಾಜ್ಯಸಭೆಯು ಸಂಜೆ 4:30 ಕ್ಕೆ ಮರು ಆರಂಭವಾದಾಗ, ಕಾಂಗ್ರೆಸ್ ಸಂಸದರು ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗಿದರು.

ಸಭಾಪತಿ ಜಗದೀಪ್ ಧನಕರ್ ಅವರು ಎಲ್ಲಾ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಲು ಮತ್ತು ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ವಿನಂತಿಸಿದರು. ಆದರೆ, ಸಂಸದರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಚೇಂಬರ್‌ನಲ್ಲಿ ಭೇಟಿಯಾಗುವಂತೆ ಸಭಾಪತಿಗಳು ಮನವಿ ಮಾಡಿದರು. ಆದರೆ, ಇದನ್ನು ಖರ್ಗೆ ಅವರು ತಿರಸ್ಕರಿಸಿದರು.

ತೀವ್ರ ಗದ್ದಲ ಉಂಟು ಮಾಡಿದ್ದಲ್ಲದೇ, ಕಲಾಪಕ್ಕೆ ಧಕ್ಕೆ ತಂದ ಆರೋಪದಡಿ ಅಧಿವೇಶನದ ಉಳಿದ ಅವಧಿಯವರೆಗೆ 45 ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಿದರು. ಅದರಲ್ಲಿ 11 ಮಂದಿಯ ವಿರುದ್ಧ ತನಿಖೆ ನಡೆಸಲು ವಿಶೇಷಾಧಿಕಾರ ಸಮಿತಿಗೆ ನೀಡಿದರು.

ಯಾರೆಲ್ಲಾ ಅಮಾನತು?:ಡಿಎಂಕೆಯ 10, ತೃಣಮೂಲ ಕಾಂಗ್ರೆಸ್‌ನ 9, ಕಾಂಗ್ರೆಸ್‌ನ 8 ಮತ್ತು ಐಯುಎಂಎಲ್, ಜೆಡಿಯು ಮತ್ತು ಆರ್‌ಎಸ್‌ಪಿಯ ತಲಾ ಒಬ್ಬರು ಸೇರಿದಂತೆ 45 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇದಕ್ಕೂ ಮೊದಲು ಡಿಸೆಂಬರ್​ 14 ರಂದು ಟಿಎಂಸಿಯ ಒಬ್ಬ ಸಂಸದರವನ್ನು ಅಮಾನತು ಮಾಡಲಾಗಿತ್ತು. ಇದರಿಂದ ಒಟ್ಟಾರೆ 46 ಸಂಸದರು ಅಮಾನತು ಶಿಕ್ಷೆಗೆ ಒಳಪಟ್ಟಿದ್ದಾರೆ. ಲೋಕಸಭೆಯ 46 ಮತ್ತು ರಾಜ್ಯಸಭೆಯಲ್ಲಿ 46 ಸಂಸದರು ಅಮಾನತಾದ್ದರಿಂದ ವಿರೋಧ ಪಕ್ಷಗಳ ಒಟ್ಟು 92 ಸಂಸದರು ಅಮಾನತಾಗಿದ್ದಾರೆ.

ಗದ್ದಲದ ನಡುವೆಯೂ ರಾಜ್ಯಸಭೆಯು ಮಹಿಳಾ ಮೀಸಲಾತಿ ಕಾನೂನಿನ ನಿಬಂಧನೆಗಳನ್ನು ಪುದುಚೇರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಶಾಸಕಾಂಗ ಸಭೆಗಳಿಗೂ ವಿಸ್ತರಿಸಲು ಎರಡು ಮಸೂದೆಗಳನ್ನು ಅಂಗೀಕರಿಸಿತು.

ಇದನ್ನೂ ಓದಿ:ತೀವ್ರ ಗದ್ದಲ: ಅಧಿವೇಶನ ಮುಗಿಯುವವರೆಗೆ ಲೋಕಸಭೆಯ ವಿಪಕ್ಷಗಳ ಒಟ್ಟು 46 ಸಂಸದರು ಅಮಾನತು

Last Updated : Dec 19, 2023, 10:48 AM IST

ABOUT THE AUTHOR

...view details