ETV Bharat / bharat

ತೀವ್ರ ಗದ್ದಲ: ಅಧಿವೇಶನ ಮುಗಿಯುವವರೆಗೆ ಲೋಕಸಭೆಯ ವಿಪಕ್ಷಗಳ ಒಟ್ಟು 46 ಸಂಸದರು ಅಮಾನತು

author img

By ETV Bharat Karnataka Team

Published : Dec 18, 2023, 5:00 PM IST

Updated : Dec 18, 2023, 5:36 PM IST

ಸದನದಲ್ಲಿ ಗದ್ದಲ ಮಾಡಿದ ವಿಪಕ್ಷಗಳ 33 ಸಂಸದರನ್ನು ಸೋಮವಾರ ಅಮಾನತು ಮಾಡಲಾಗಿದೆ. ಇಲ್ಲಿಯವರೆಗೂ ಒಟ್ಟು 46 ಸಂಸದರನ್ನು ಸಸ್ಪೆಂಡ್​ ಮಾಡಲಾಗಿದೆ.

ಸಂಸದರು ಅಮಾನತು
ಸಂಸದರು ಅಮಾನತು

ನವದೆಹಲಿ: ಸಂಸತ್​ ಭದ್ರತಾ ಲೋಪ ಪ್ರಕರಣದಲ್ಲಿ ಗೃಹ ಸಚಿವ ಅಮಿತ್​ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ತೀವ್ರ ಗದ್ದಲ ಎಬ್ಬಿಸಿದ ವಿಪಕ್ಷಗಳ 33 ಸಂಸದರನ್ನು ಅಧಿವೇಶನದ ಮುಂದಿನ ಅವಧಿಯವರೆಗೆ ಅಮಾನತು ಮಾಡಿ ಸ್ಪೀಕರ್​ ಸೋಮವಾರ ಆದೇಶಿಸಿದರು. ಇಲ್ಲಿಯವರೆಗೂ ಒಟ್ಟು 46 ಸಂಸದರನ್ನು ಅಮಾನತಿನಲ್ಲಿಡಲಾಗಿದೆ. ಇದರ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಸಂಸತ್ತನ್ನು ಪಕ್ಷದ ಕಚೇರಿಯನ್ನಾಗಿ ಮಾಡಲು ಹೊರಟಿದೆ ಎಂದು ಆರೋಪಿಸಿದವು.

ಕಾಂಗ್ರೆಸ್ ನಾಯಕ ಅಧೀರ್ ರಂಜನ್, ತೃಣಮೂಲ ಕಾಂಗ್ರೆಸ್​ನ ಸೌಗತ ರಾಯ್ ಮತ್ತು ಕಲ್ಯಾಣ್ ಬ್ಯಾನರ್ಜಿ, ಡಿಎಂಕೆಯ ಟಿಆರ್ ಬಾಲು, ಎ ರಾಜಾ ಮತ್ತು ದಯಾನಿಧಿ ಮಾರನ್ ಸೇರಿದಂತೆ 33 ವಿರೋಧ ಪಕ್ಷದ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಸದನದಲ್ಲಿ ದುರ್ನಡತೆ ಮತ್ತು ಸ್ಪೀಕರ್​ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್​ ಕಚೇರಿ ತಿಳಿಸಿದೆ.

  • Winter Session | A total of 33 Opposition MPs, including Leader of Congress in Lok Sabha Adhir Ranjan Chowdhury, suspended from the Parliament today for the remainder of the Session. pic.twitter.com/zbUpeMaHmU

    — ANI (@ANI) December 18, 2023 " class="align-text-top noRightClick twitterSection" data=" ">

ಇಂದು ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾದಾಗ ಅಮಿತ್​ ಶಾ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಸದಸ್ಯರು ಘೋಷಣಾ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ತೀವ್ರ ಗದ್ದಲ ಸೃಷ್ಟಿಸಿಯಾದ ಹಿನ್ನೆಲೆ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಸದನ ಮರು ಸೇರಿದಾಗ ಸಂಸದರ ಅಮಾನತು ಕುರಿತ ಪ್ರಸ್ತಾವನೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಂಡಿಸಿದರು. ಸ್ಪೀಕರ್ ಸ್ಥಾನದಲ್ಲಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರವಾಲ್ ಅವರು, ವಿಪಕ್ಷಗಳ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸದನಕ್ಕೆ ಫಲಕಗಳನ್ನು ತರಬೇಡಿ ಎಂದು ಪದೇ ಪದೇ ಮನವಿ ಮಾಡಿದರೂ, ಲೆಕ್ಕಿಸದೇ ನಿಯಮ ಮೀರಿದ್ದಾರೆ ಎಂದು ಸದನಕ್ಕೆ ತಿಳಿಸಿದರು.

ನಂತರ ಅಮಾನತು ಮಾಡಲಾದ ಸಂಸದರ ಹೆಸರನ್ನು ಓದುತ್ತಾ, ಇವರೆಲ್ಲರೂ ಡಿಸೆಂಬರ್ 22 ರಂದು ಕೊನೆಗೊಳ್ಳುವ ಚಳಿಗಾಲದ ಅಧಿವೇಶನದವರೆಗೂ ಅಮಾನತಿನಲ್ಲಿರುತ್ತಾರೆ ಎಂದು ಸಚಿವ ಪ್ರಹ್ಲಾದ್​ ಜೋಶಿ ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿತು.

ಒಟ್ಟು 46 ಸಂಸದರ ಅಮಾನತು: ಉಭಯ ಸದನಗಳಲ್ಲಿ ದುರ್ನಡತೆ, ನಿಯಮಗಳನ್ನು ಮೀರಿ ನಡೆದುಕೊಂಡ ಆರೋಪದ ಮೇಲೆ ಇಲ್ಲಿಯವರೆಗೂ ಒಟ್ಟು 46 ಸಂಸದರನ್ನು ಅಮಾನತು ಮಾಡಲಾಗಿದೆ. ಡಿಸೆಂಬರ್ 14 ರಂದು ನಡೆದ ಸಂಸತ್​​ ಭದ್ರತಾ ಲೋಪದ ಘಟನೆಯ ಮರುವಿನ ತೀವ್ರ ಗದ್ದಲ ಎಬ್ಬಿಸಿ ಸ್ಪೀಕರ್​ ಆದೇಶಗಳನ್ನು ಪಾಲಿಸದ 13 ಲೋಕಸಭಾ ಸಂಸದರನ್ನು ಅಶಿಸ್ತಿನ ವರ್ತನೆಗಾಗಿ ಅಮಾನತುಗೊಳಿಸಲಾಗಿತ್ತು. ಮಾಣಿಕಂ ಟ್ಯಾಗೋರ್, ಕನಿಮೋಳಿ, ಪಿಆರ್ ನಟರಾಜನ್, ವಿಕೆ ಶ್ರೀಕಂದನ್, ಬೆನ್ನಿ ಬಹನನ್, ಕೆ ಸುಬ್ರಮಣ್ಯಂ, ಎಸ್ ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್ ಅಮಾನತಾದವರು.

ಇಂದಿನ (ಡಿಸೆಂಬರ್​ 18) ಆದೇಶದಲ್ಲಿ ಕಲ್ಯಾಣ್ ಬ್ಯಾನರ್ಜಿ, ಎ ರಾಜಾ, ದಯಾನಿಧಿ ಮಾರನ್, ಅಫ್ರೂಕ್ ಪೊದ್ದಾರ್, ಪ್ರಸೂನ್ ಬ್ಯಾನರ್ಜಿ, ಮತ್ತು ಇಟಿ ಮೊಹಮ್ಮದ್ ಬಶೀರ್, ಜಿ ಸೆಲ್ವಂ, ಸಿಎನ್ ಅಣ್ಣಾದೊರೈ, ಅಧೀರ್ ರಂಜನ್ ಚೌಧರಿ, ಟಿ ಸುಮತಿ, ಕೆ ನವಸ್ಕಮಿ, ಕೆ ರವಿರಸಾಮಿ, ಎನ್‌ಕೆ ಪ್ರೇಮಚಂದ್ರನ್, ಸೌಗತ ರಾಯ್, ಆಶಿತ್ ಕುಮಾರ್, ಶತಾಬ್ದಿ ರಾಯ್, ಕೌಶೇಂದ್ರ ಕುಮಾರ್, ಆಂಟೊ ಆಂಟೋನಿ, ಎಸ್‌ಎಸ್ ಪಲ್ಲಿಮಾಣಿಕ್ಕಂ, ಪ್ರತಿಭಾ ಮಂಡಲ್, ಕಾಕೋಲಿ ಘೋಷ್, ಕೆ ಮುರಳೀಧರನ್, ಸುನಿಲ್ ಮಂಡಲ್, ರಾಮಲಿಂಗಂ, ಕೆ ಸುರೇಶ್, ಅಮರ್ ಸಿಂಗ್, ರಾಜಮೋಹನ್, ಗೌರವ್ ಗೊಗೈ ಮತ್ತು ಟಿ.ಆರ್.ಬಾಲು, ಕೆ ಜಯಕುಮಾರ್, ವಿಜಯ್ ವಸಂತ್ ಮತ್ತು ಅಬ್ದುಲ್ ಖಲೀಕ್ ಅವರನ್ನು ಅಮಾನತು ಮಾಡಲಾಗಿದೆ.

ಇದರಲ್ಲಿ ಕೆ ಜಯಕುಮಾರ್, ವಿಜಯ್ ವಸಂತ್ ಮತ್ತು ಅಬ್ದುಲ್ ಖಲೀಕ್ ಅವರು ಫಲಕಗಳನ್ನು ಹಿಡಿದು ಸ್ಪೀಕರ್​ ಪೀಠದ ವೇದಿಕೆಯನ್ನು ಹತ್ತಿ ಘೋಷಣೆ ಕೂಗಿದರು. ಸ್ಪೀಕರ್​ ಪೀಠಕ್ಕೆ ಅವಮಾನ ಮಾಡಿದ ಮೂವರ ವಿರುದ್ಧ ಕ್ರಮಕ್ಕೆ ವಿಶೇಷಾಧಿಕಾರ ಸಮಿತಿಗೆ ದೂರು ನೀಡಲಾಗಿದೆ. ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರ ನಿರಂತರ ಪ್ರತಿಭಟನೆಯ ನಡುವೆ ಲೋಕಸಭೆಯನ್ನು ನಾಳೆಗೆ ಮುಂದೂಡಲಾಯಿತು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಬೆಳಗಾವಿ ಮಹಿಳೆ ಮೇಲಿನ ಹಲ್ಲೆ ಕೇಸ್​: ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ

Last Updated : Dec 18, 2023, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.