ಕರ್ನಾಟಕ

karnataka

'ಡೀಪ್​ಫೇಕ್​' ಹಾವಳಿ: ಪ್ರಧಾನಿ ಮೋದಿ ಎಚ್ಚರಿಕೆಯೇನು?

By ETV Bharat Karnataka Team

Published : Nov 17, 2023, 5:26 PM IST

PM Modi statement on deepfake: 'ಡೀಪ್​ಫೇಕ್'​ ಬಗ್ಗೆ ಜನರಿಗೆ ಶಿಕ್ಷಣ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ.

PM Narendra Modi talks about Deepfake
'ಡೀಪ್​ಫೇಕ್​' ಹಾವಳಿ: ಪ್ರಧಾನಿ ಮೋದಿ ಎಚ್ಚರಿಕೆಯೇನು?

ನವದೆಹಲಿ: 'ಡೀಪ್​ಫೇಕ್​' ಸೃಷ್ಟಿಸಲು ಕೃತಕ ಬುದ್ಧಿಮತ್ತೆ ಬಳಕೆಯನ್ನು 'ಸಮಸ್ಯೆ' ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ಜನರಿಗೆ ಶಿಕ್ಷಣ ನೀಡುವಂತೆ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ. ಶುಕ್ರವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ನಡೆದ ದೀಪಾವಳಿ ಮಿಲನ್​ ಕಾರ್ಯಕ್ರಮದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ (ಎಐ) ಬಳಸಿಕೊಂಡು ರೂಪಿಸುವ ನಕಲಿ ವಿಡಿಯೋಗಳ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ.

"ಡೀಪ್​ಫೇಕ್​ ಅನ್ನು ರಚಿಸಲು ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಜನರಿಗೆ ಶಿಕ್ಷಣ ನೀಡುವಂತೆ ನಾನು ಮಾಧ್ಯಮಗಳಿಗೆ ಒತ್ತಾಯಿಸುತ್ತೇನೆ. ಡೀಪ್​ಫೇಕ್​ಗಳು ಪ್ರಸ್ತುತ ಭಾರತೀಯ ವ್ಯವಸ್ಥೆ ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ. ಇದು ಸಮಾಜದಲ್ಲಿ ಅವ್ಯವಸ್ಥೆ ಉಂಟು ಮಾಡಬಹುದು" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಬಾಲಿವುಡ್​ ನಟಿಯರಾದ ಕತ್ರಿನಾ ಕೈಫ್​ ಮತ್ತು ಕಾಜೋಲ್​ ಅವರ ಡೀಪ್​ಫೇಕ್​ ವಿಡಿಯೋಗಳು ವೈರಲ್​ ಆಗುತ್ತಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಅನೇಕ ಸೆಲೆಬ್ರಿಟಿಗಳು ಒತ್ತಾಯಿಸಿದ್ದಾರೆ. ಇದನ್ನು ಮನಗಂಡು, ನಕಲಿ ವಿಷಯಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳಿಗೆ ಸಮನ್ಸ್‌ ಜಾರಿ ಮಾಡಿದ್ದು, ಮಹತ್ವದ ಸಭೆಗೆ ಕರೆದಿದೆ.

ಇದೀಗ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ (ಈ ಹಿಂದಿನ ಟ್ವಿಟರ್), ಯೂಟ್ಯೂಬ್‌ಗೆ ಸಭೆಗೆ ಹಾಜರಾಗಲು ಮತ್ತು ಈ ವಿಷಯದ ಬಗ್ಗೆ ತಮ್ಮ ದೃಷ್ಟಿಕೋನ, ಸಂಭಾವ್ಯ ಸಮಸ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂಬೆಲ್ಲ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ವಿನಂತಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ: ಆರೋಪಿಗಳ ವಿರುದ್ಧ ಎಫ್ಐಆರ್​

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಂಬಂಧಿತ ಸಚಿವಾಲಯಗಳೊಂದಿಗೆ ಈ ಪ್ರಕರಣದ ಕುರಿತು ಕೂಲಂಕಷವಾಗಿ ಪರಿಶೀಲಿಸಲಿದೆ. ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು ಮುಂದಿನ ವರ್ಷಗಳ ರಾಷ್ಟ್ರೀಯ ಚುನಾವಣೆಗಳನ್ನು ಗಮನದಲ್ಲಿರಿಸಿ, ಡೀಪ್‌ಫೇಕ್‌ ಕಂಟೆಂಟ್​ಗಳು ಉಲ್ಬಣಗೊಳ್ಳುವುದರ ಪರಿಣಾಮಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋದಿಂದ ಸಾಕಷ್ಟು ವಿವಾದಗಳು ಉಂಟಾಗಿರುವುದರಿಂದ ಡೀಪ್‌ಫೇಕ್‌ ಕಂಟೆಂಟ್ ಸಮಸ್ಯೆಗಳನ್ನು ಪರಿಹರಿಸುವುದು ಇಂದಿನ ತುರ್ತು ಎಂಬುದು ಸರ್ಕಾರಕ್ಕೆ ಮನದಟ್ಟಾಗಿದೆ ಎಂದು ಮೂಲಗಳು ಹೇಳಿವೆ.

ಮತ್ತೊಂದೆಡೆ, ಉತ್ತರ ಭಾರತದ ಜನರು ಅತ್ಯಂತ ಅದ್ಧೂರಿಯಾಗಿ ಆಚರಿಸುವ ಛತ್​ ಪೂಜೆ ಇಂದಿನಿಂದ ಆರಂಭವಾಗಿದೆ. ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ನಾಲ್ಕು ದಿನಗಳ ಕಾಲ ನಡೆಯುವ ಈ ಹಬ್ಬವು 'ರಾಷ್ಟ್ರೀಯ ಪರ್ವ'ವಾಗಿ ಮಾರ್ಪಟ್ಟಿದ್ದು, ಇದು ಅತ್ಯಂತ ಸಂತಸದ ವಿಚಾರ" ಎಂದು ಹೇಳಿದರು. ಆಡಳಿತ ಪಕ್ಷ ಆಯೋಜಿಸಿದ್ದ ದೀಪಾವಳಿ ಮಿಲನ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆಗೆ ಗೃಹ ಸಚಿವ ಅಮಿತ್​ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ:ರಶ್ಮಿಕಾ, ಕತ್ರಿನಾ ಆಯ್ತು; ಇದೀಗ ಬಾಲಿವುಡ್​ ನಟಿ ಕಾಜೋಲ್​ ಡೀಪ್​ಫೇಕ್​ ವಿಡಿಯೋ ವೈರಲ್​

ABOUT THE AUTHOR

...view details