ಕರ್ನಾಟಕ

karnataka

ಜಿ20 ನಾಯಕರ ಭೋಜನಕ್ಕೆ ಚಿನ್ನ,ಬೆಳ್ಳಿ ಲೇಪಿತ ತಟ್ಟೆಗಳ ಬಳಕೆ: ಶರದ್ ಪವಾರ್ ಆಕ್ಷೇಪ

By PTI

Published : Sep 11, 2023, 8:09 AM IST

ವಿಶ್ವ ನಾಯಕರ ಭೋಜನಕ್ಕೆ ಬೆಳ್ಳಿ ಲೇಪಿತ ಪಾತ್ರೆಗಳ ಬಳಕೆಯ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

NCP chief Sharad Pawar
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್

ಮುಂಬೈ (ಮಹಾರಾಷ್ಟ್ರ):ಸೆಪ್ಟೆಂಬರ್ 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಏರ್ಪಡಿಸಲಾದ ಔತಣಕೂಟದಲ್ಲಿ ಬೆಳ್ಳಿ ಮತ್ತು ಚಿನ್ನಲೇಪಿತ ಪಾತ್ರೆಗಳ ಬಳಕೆಯ ಬಗ್ಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾನುವಾರ ದಕ್ಷಿಣ ಮುಂಬೈನಲ್ಲಿ ನಡೆದ ತಮ್ಮ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, "ಇಂತಹ ಕಾರ್ಯಕ್ರಮಗಳು (ಜಿ20) ಈ ಹಿಂದೆ ಭಾರತದಲ್ಲಿ ಎರಡು ಬಾರಿ ನಡೆದಿದ್ದವು. ಒಮ್ಮೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ವಿಶ್ವ ನಾಯಕರು ಭಾಗವಹಿಸಲು ಬಂದಿದ್ದರು. ಆದರೆ ಬೆಳ್ಳಿ ಮತ್ತು ಚಿನ್ನದ ಲೇಪಿತ ಪಾತ್ರೆಗಳನ್ನು ಬಳಸಿದ ಬಗ್ಗೆ ನಾನು ಎಂದಿಗೂ ಕೇಳಿಲ್ಲ" ಎಂದು ಹೇಳಿದರು.

"ಭಾರತಕ್ಕೆ ಬರುವ ವಿಶ್ವ ನಾಯಕರಿಗೆ ಗೌರವ ತೋರಿಸುವುದು ದೇಶಕ್ಕೆ ಮುಖ್ಯ. ಅದನ್ನು ನಾನು ಒಪ್ಪುತ್ತೇನೆ. ಆದರೆ ಪ್ರಮುಖ ಸಮಸ್ಯೆಗಳನ್ನು ಬದಿಗೊತ್ತಲು ಮತ್ತು ಕೆಲವು ಜನರ ಸ್ಥಾನಮಾನವನ್ನು ಹೆಚ್ಚಿಸಲು ಇಂತಹ ಸಂದರ್ಭಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಒಬ್ಬರ ಇಮೇಜ್ ಹೆಚ್ಚಿಸಲು ಇಂತಹ ಸಂದರ್ಭಗಳನ್ನು ಬಳಸುವುದು ಸರಿಯೇ? ಎಂಬ ಬಗ್ಗೆ ದೇಶದ ಜನರು ಚರ್ಚಿಸುತ್ತಾರೆ ಮತ್ತು ಅಭಿಪ್ರಾಯಗಳನ್ನು ರೂಪಿಸುತ್ತಾರೆ" ಎಂದು ಪವಾರ್ ತಿಳಿಸಿದರು.

ಇದನ್ನೂ ಓದಿ:ವಿಶ್ವ ನಾಯಕರಿಗೆ ರಾಷ್ಟ್ರಪತಿಗಳಿಂದ ಔತಣಕೂಟ: ಮೆನುವಿನಲ್ಲಿ ದೇಶೀಯ ಭಕ್ಷ್ಯ ಭೋಜನ.. ಏನೇನೆಲ್ಲ ಇದೆ ಗೊತ್ತಾ?

15 ಸಾವಿರ ಬೆಳ್ಳಿ ವಸ್ತುಗಳ ಬಳಕೆ:ಜಿ20 ರಾಷ್ಟ್ರಗಳ ನಾಯಕರಿಗೆ ದೆಹಲಿಯ 'ಭಾರತ್​ ಮಂಟಪಂ'ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ ಏರ್ಪಡಿಸಿದ್ದರು. ವೆಲ್​ಕಮ್ ಡ್ರಿಂಕ್ಸ್ ನೀಡಲು ಸ್ವರ್ಣಲೇಪಿತ ವಸ್ತುಗಳನ್ನು ಬಳಕೆ ಮಾಡಲಾಗಿತ್ತು. ಭಾರತದ ಪಾಕಶಾಲೆಯ ವೈವಿಧ್ಯತೆ ಪ್ರತಿಬಿಂಬಿಸುವ ಔತಣಕೂಟದಲ್ಲಿ 200 ಕುಶಲಕರ್ಮಿಗಳು ಸಿದ್ಧಪಡಿಸಿರುವ 15 ಸಾವಿರ ಬೆಳ್ಳಿ ವಸ್ತುಗಳನ್ನು ಬಳಕೆ ಮಾಡಲಾಗಿತ್ತು. ಜೈಪುರ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ ಸೇರಿ ಇನ್ನೂ ಕೆಲವು ರಾಜ್ಯಗಳಲ್ಲಿನ ಕಲಾಕಾರರು ಇವುಗಳನ್ನು ತಯಾರಿಸಿದ್ದರು.

ಜಿ20 ಶೃಂಗದ ಊಟೋಪಚಾರದಲ್ಲಿ ಬಳಸಲಾಗುತ್ತಿರುವ ಪಾತ್ರೆಗಳ ಮೇಲಿನ ಕೆತ್ತನೆ ಸೂಕ್ಷ್ಮ ವಿವರಗಳನ್ನು ಹೊಂದಿದ್ದವು. ಮಣಿಗಳ ಅಂಚು, ಕೈ ಹಾಗೂ ಯಂತ್ರಗಳಿಂದ ಸಿದ್ಧಗೊಂಡಿರುವ ಈ ವಿನ್ಯಾಸಗಳಲ್ಲಿ ಸಮಕಾಲೀನ ಎರಕದ ತಂತ್ರಜ್ಞಾನ ಬಳಸಲಾಗಿದೆ ಎಂದು ರಾಜೀವ್‌ ಪಬುವಾಲ್‌ ಎಂಬವರು ಮಾಹಿತಿ ನೀಡಿದ್ದರು.

ಜಿ20 ಶೃಂಗಸಭೆಯ ಪ್ರಮುಖಾಂಶಗಳು:ವಿಶ್ವದ 20 ಶಕ್ತಿಶಾಲಿ ರಾಷ್ಟ್ರಗಳ ಗುಂಪಾದ ಜಿ20ಗೆ ಈ ಬಾರಿ ಭಾರತ ಆತಿಥ್ಯ ವಹಿಸಿತ್ತು. ಸೆ.9 ಮತ್ತು 10ರಂದು ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅವುಗಳು ಹೀಗಿವೆ..

  • ಮೊದಲ ದಿನದ ಸಭೆಯು 'ಒಂದು ಭೂಮಿ' ವಿಷಯವನ್ನು ಆಧರಿಸಿತ್ತು.
  • 2ನೇ ದಿನದ ಶೃಂಗಸಭೆ 'ಒಂದು ಕುಟುಂಬ' ಎಂಬ ವಿಷಯದ ಕುರಿತಾಗಿತ್ತು.
  • 'ನವದೆಹಲಿ ಘೋಷಣೆ'ಗೆ ಒಮ್ಮತದ ಮುದ್ರೆ.
  • ಭಾರತ-ಯುಎಇ-ಯುರೋಪ್‌ ಆರ್ಥಿಕ ಕಾರಿಡಾರ್
  • ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚನೆ.
  • ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆಗೆ ಸಮ್ಮತಿ.
  • ಜಿ20 ಸಭೆಯ ಸಮಾರೋಪ ಭಾಷಣ ಮಾಡಿಬ್ರೆಜಿಲ್​ಗೆ ಅಧ್ಯಕ್ಷತೆ ಹಸ್ತಾಂತರಿಸಿದ ಪ್ರಧಾನಿ ಮೋದಿ.

ಇದನ್ನೂ ಓದಿ:G 20 presidency: ಬ್ರೆಜಿಲ್​ನಲ್ಲಿ ಮುಂದಿನ ಜಿ20 ಸಭೆ.. ಅಧ್ಯಕ್ಷ ಲುಲಾ ಸಿಲ್ವಾಗೆ ದಂಡ ಹಸ್ತಾಂತರಿಸಿದ ಪ್ರಧಾನಿ ಮೋದಿ

ABOUT THE AUTHOR

...view details