ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋವಿಡ್ ಹೊಸ ರೂಪಾಂತರಿ ತಳಿ ಒಮಿಕ್ರೋನ್ ಆತಂಕ ಶುರುವಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ಸೂಚನೆ ನೀಡಿದೆ. RT-PCR ಮತ್ತು RAT ಟೆಸ್ಟ್ನಲ್ಲಿ ಈ ಸೋಂಕು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆ ನಡೆಸುವಂತೆ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಐಸಿಎಂಆರ್ನ ಡಾ. ಬಲರಾಮ್ ಭಾರ್ಗವ್, ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದು, ರಾಜ್ಯ ಸರ್ಕಾರಗಳು ವಿದೇಶದಿಂದ ಬರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕು ಎಂದಿದ್ದಾರೆ. ವಿದೇಶಗಳಿಂದ ವಿವಿಧ ರಾಜ್ಯಗಳಿಗೆ ಆಗಮಿಸುವ ಎಲ್ಲರಿಗೂ ಕಡ್ಡಾಯವಾಗಿ ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸುವಂತೆಯೂ ಸೂಚನೆ ನೀಡಲಾಗಿದ್ದು, ಅವರ ಮೇಲೆ ನಿಗಾ ಇಡುವಂತೆ ತಿಳಿಸಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಸಹ ರಿಲೀಸ್ ಆಗಿದ್ದು, ಪ್ರಬಲವಾಗಿ ಹೋರಾಡಲು ವ್ಯಾಕ್ಸಿನೇಷನ್ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ ಎಂದಿದ್ದಾರೆ.
ನೀತಿ ಆಯೋಗದ(ಆರೋಗ್ಯ) ಸದಸ್ಯ ಡಾ.ವಿ.ಕೆ.ಪಾಲ್ ಮಾತನಾಡಿ, ಡಿಸೆಂಬರ್ 31ರವರೆಗೆ ಶೇ. 100ರಷ್ಟು ವ್ಯಾಕ್ಸಿನೇಷನ್ ನೀಡಲು ಕೇಂದ್ರ ಸರ್ಕಾರ ಲಸಿಕೆ ಅಭಿಯಾನ ಆರಂಭಿಸುತ್ತಿದ್ದು, ಈ ವೇಳೆ ಎರಡನೇ ಡೋಸ್ ವ್ಯಾಕ್ಸಿನೇಷನ್ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದೆ ಎಂದು ಹೇಳಿದರು.