ಕರ್ನಾಟಕ

karnataka

ಮಹಾರಾಷ್ಟ್ರದಲ್ಲಿ ಜೋರಾದ ಮರಾಠಾ ಮೀಸಲಾತಿ ಹೋರಾಟ: ಯುವಕ ಆತ್ಮಹತ್ಯೆ

By ETV Bharat Karnataka Team

Published : Oct 19, 2023, 4:11 PM IST

ಮಹಾರಾಷ್ಟ್ರದ ಮುಂಬೈನಲ್ಲಿ ಮರಾಠಾ ಮೀಸಲಾತಿ ಬೇಡಿಕೆ ಸಂಬಂಧ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

maharashtra youths tragic suicide in Mumbai demanding Maratha reservation
ಮಹಾರಾಷ್ಟ್ರದಲ್ಲಿ ಜೋರಾದ ಮರಾಠಾ ಮೀಸಲಾತಿ ಹೋರಾಟ: ಯುವಕ ಆತ್ಮಹತ್ಯೆ

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಬೇಡಿಕೆ ಜೋರಾಗಿದೆ. ಇದರ ನಡುವೆ ಮುಂಬೈನಲ್ಲಿ ಮೀಸಲಾತಿಗೆ ಒತ್ತಾಯಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ. ಜಲ್ನಾ ಜಿಲ್ಲೆಯ ಚಿಕಂಗಾವ್ ಮೂಲದ ಸುನೀಲ್​ ಬಾಬುರಾವ್ ಕಾವ್ಲೆ ಮೃತ ಎಂದು ಗುರುತಿಸಲಾಗಿದೆ.

ಮರಾಠಾ ಮೀಸಲಾತಿಗಾಗಿ ಕೆಲ ದಿನಗಳ ಹಿಂದೆ 150 ಎಕರೆ ಜಾಗದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶಗೊಂಡಿದ್ದ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಬುಧವಾರದಿಂದ ಮುಂಬೈ ಪ್ರವಾಸದಲ್ಲಿದ್ದಾರೆ. ಇಂದು ನವಿ ಮುಂಬೈ ಸೇರಿದಂತೆ ಹಲವು ನಗರಗಳಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಅನೇಕ ಜನರು ಶಾಂತಿಯುತ ಮೆರವಣಿಗೆಯಲ್ಲಿ ತೊಡಗಿದ್ದಾರೆ.

ಮತ್ತೊಂದೆಡೆ, ಮೀಸಲಾತಿಗಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಅಹಿತರ ಘಟನೆ ವರದಿಯಾಗಿದೆ. ಇಂದು ಬೆಳಗ್ಗೆ ಸುನಿಲ್ ಕಾವ್ಲೆ ಮೃತದೇಹವನ್ನು ಸಯಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆತ್ಮಹತ್ಯೆ ಪತ್ರ ಪತ್ತೆ: ಸುನೀಲ್​ ಕಾವ್ಲೆ ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟಗಳ ಪತ್ರ ಬರೆದಿರುವುದು ಪತ್ತೆಯಾಗಿದೆ. ''ಮಹಾರಾಷ್ಟ್ರದ ಕುಲದೇವತೆ ತುಳಜಾ ಭವಾನಿ ಮಾತೆ, ಹಿಂದೂ ಧರ್ಮದ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಾಷ್ಟಾಂಗ ನಮನಗಳು... ಮೀಸಲಾತಿ ರೈತರ ಪುತ್ರ - ಪುತ್ರಿಯರ ಭವಿಷ್ಯ ಪ್ರಶ್ನೆಯಾಗಿದೆ. ಮರಾಠಿ ರೈತರು, ಯುವಕ-ಯುವತಿಯರ ಶಿಕ್ಷಣಕ್ಕೆ ಮೀಸಲಾತಿ ಅಗತ್ಯವಿದೆ. ಈ ಯುದ್ಧವನ್ನು ಗೆಲ್ಲಬೇಕಿದೆ. ಅಕ್ಟೋಬರ್​ 24ರಂದು ಮಹಾರಾಷ್ಟ್ರದ ಎಲ್ಲ ಮಠಾರರು ಮುಂಬೈಗೆ ಬಂದು ಸೇರಬೇಕು. ಎಲ್ಲರೂ ಕ್ಷಮಿಸಿ'' ಎಂದು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಸರಿಯಾದ ಮಾರ್ಗವಲ್ಲ - ಮರಾಠಾ ಕ್ರಾಂತಿ ಮೋರ್ಚಾ:ಯುವಕನ ಆತ್ಮಹತ್ಯೆ ಸಂಬಂಧ ಮರಾಠಾ ಕ್ರಾಂತಿ ಮೋರ್ಚಾ ಸಂಯೋಜಕ ವಿನೋದ್ ಪಾಟೀಲ್ ಸಂತಾಪ ಸೂಚಿಸಿದ್ದಾರೆ. ''ಸುನಿಲ್ ಬಾಬುರಾವ್ ಕಾವ್ಲೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಈ ಯುವಕ ಜಲ್ನಾ ಜಿಲ್ಲೆಯಲ್ಲಿ ಮರಾಠಾ ಆಂದೋಲನದಲ್ಲಿ ಸಕ್ರಿಯನಾಗಿದ್ದ. ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಗ್ಯೂ, ನಿಮ್ಮ ಬೇಡಿಕೆಗಳನ್ನು ಪಾತಿಪಾದಿಸಲು ಇದು ಸರಿಯಾದ ಮಾರ್ಗವಲ್ಲ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಅವರು ಪೋಸ್ಟ್​ ಮಾಡಿದ್ದಾರೆ.

ಮುಂದುವರೆದು, ''ನನ್ನ ಮರಾಠಾ ಸಹೋದರರೇ, ಇತಿಹಾಸದಲ್ಲಿ ನಮ್ಮ ಈ ಸಮುದಾಯ ಅನೇಕ ಯುದ್ಧಗಳನ್ನು ಗೆದ್ದಿದೆ. ಆಯಾಸಗೊಳ್ಳಬೇಡಿ, ನೀವು ಯುದ್ಧವನ್ನು ಅರ್ಧದಾರಿಯಲ್ಲೇ ಬಿಟ್ಟರೆ, ಅದು ಇನ್ಮುಂದೆ ಗಂಭೀರ ಸ್ವರೂಪ ಪಡೆಯಲಿದೆ. ಮರಾಠಾ ಮೀಸಲಾತಿ ವಿಚಾರ, ನಮ್ಮ ಉಳಿವಿಗೆ ಸಂಬಂಧಿಸಿದ್ದು, ಎಂಬುದನ್ನು ಒಪ್ಪಿಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇಷ್ಟೆಲ್ಲ ಆದ ನಂತರವೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಮೀಸಲಾತಿ ಹೋರಾಟ: ಕರ್ನಾಟಕದ 2 ಬಸ್ ಸೇರಿ 6 ಬಸ್​ಗಳಿಗೆ ಬೆಂಕಿ, 85 ಮಂದಿಗೆ ಗಾಯ

ABOUT THE AUTHOR

...view details