ಕರ್ನಾಟಕ

karnataka

ಯಾರು 'ಪವರ್‌'ಫುಲ್‌?: ಮುಂಬೈನಲ್ಲಿಂದು ಎನ್‌ಸಿಪಿ ಬಣಗಳ ಪ್ರತ್ಯೇಕ ಸಭೆ; ಬೆಂಬಲಿಗರ ಸಂಖ್ಯಾಬಲ ಪ್ರದರ್ಶನ

By

Published : Jul 5, 2023, 8:49 AM IST

ಬೆಂಬಲಿಗರ ಸಂಖ್ಯಾಬಲ ಪ್ರದರ್ಶನಕ್ಕಾಗಿ ​ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅಜಿತ್ ಪವಾರ್ ಬಣ ಇಂದು ಮುಂಬೈನಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದು ಮಹಾರಾಷ್ಟ್ರ ರಾಜಕೀಯ ದೇಶದ ಕುತೂಹಲ ಕೆರಳಿಸಿದೆ.

ಎನ್‌ಸಿಪಿ ಬಣಗಳ ಪ್ರತ್ಯೇಕ ಸಭೆ
ಎನ್‌ಸಿಪಿ ಬಣಗಳ ಪ್ರತ್ಯೇಕ ಸಭೆ

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷದ (ಎನ್​ಸಿಪಿ) ಹಿರಿಯ ಮುಖಂಡ ಶರದ್​​ ಪವಾರ್​ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರದ ಶಿವಸೇನೆ- ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸಿಕೊಂಡಿರುವ ಅಜಿತ್​ ಪವಾರ್​, ತಮಗೆ ಎನ್​ಸಿ​ಪಿಯ ಎಲ್ಲ 53 ಶಾಸಕರ ಬೆಂಬಲ ಇದೆ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶರದ್​ ಪವಾರ್ ಮತ್ತು ಅಜಿ​ತ್​ ಪವಾರ್ ತಮ್ಮ ಬೆಂಬಲಿಗ​ರ ಸಂಖ್ಯಾಬಲ ಪ್ರದರ್ಶಿಸಲು ಇಂದು ಮುಂಬೈನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

ಉಭಯ ಬಣಗಳು ಒಂದೇ ದಿನ ತಮ್ಮ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳ ಸಭೆ ಕರೆದಿವೆ. ಎರಡು ಸಭೆಗಳಲ್ಲಿ ಪಾಲ್ಗೊಳ್ಳುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಯಾರ ಬಣ ಮೇಲುಗೈ ಸಾಧಿಸಲಿದೆ ಎಂಬುದು ನಿರ್ಧಾರವಾಗಲಿದೆ. ಅಜಿತ್ ಪವಾರ್ ಅವರೊಂದಿಗೆ ಇದ್ದಾರೆ ಎನ್ನಲಾಗುತ್ತಿರುವ 53 ಶಾಸಕರ ಬೆಂಬಲದ ಸತ್ಯ ಈ ಸಭೆಯಿಂದ ಬಹಿರಂಗವಾಗಲಿದೆ. ಹಾಗಾಗಿ, ಸಭೆ ದೇಶದ ಕುತೂಹಲಕ್ಕೆ ಕಾರಣವಾಗಿದೆ.

ಶಿವಸೇನೆ- ಬಿಜೆಪಿ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭಾನುವಾರ ಅಜಿತ್ ಪವಾರ್, ಇದು ಎನ್‌ಸಿಪಿಯ ಸಾಮೂಹಿಕ ನಿರ್ಧಾರ. ತಮಗೆ ಪಕ್ಷದ ಎಲ್ಲ 53 ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು. ಇದಾದ ನಂತರ, 36 ಶಾಸಕರು ಬೆಂಬಲ ಪತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ಅಜಿತ್ ಪವಾರ್ ಬಣ ಹೇಳಿಕೊಂಡಿತ್ತು. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಬಿಜೆಪಿ ಅಜಿತ್ ಪವಾರ್ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆ 40ಕ್ಕೂ ಹೆಚ್ಚಿದೆ ಎಂದು ಹೇಳಿತ್ತು.

ಆದರೆ, ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಅವರು ಅಜಿತ್ ಪವಾರ್ ಅವರಿಗೆ ಕೇವಲ 13 ಶಾಸಕರ ಬೆಂಬಲ ಮಾತ್ರ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಅಜಿತ್ ಪವಾರ್​ ಸೇರಿದಂತೆ ಒಂಬತ್ತು ಶಾಸಕರನ್ನು ಹೊರತುಪಡಿಸಿ ಉಳಿದ ಶಾಸಕರು ಶರದ್​ ಪವಾರ್‌ಗೆ ನಿಷ್ಠರಾಗಿದ್ದಾರೆ ಎಂದು ಶರದ್ ಪವಾರ್ ಪಾಳಯ ಹೇಳಿಕೊಂಡಿದೆ. ಹಾಗಾಗಿ ಯಾರಿಗೆ ಹೆಚ್ಚು ಬೆಂಬಲ ಇದೆ? ಎಂದು ಸಾಬೀತು ಮಾಡಲು ಇಂದು ಎರಡು ಬಣಗಳು ತಮ್ಮ ಬೆಂಬಲಿಗರ ಸಭೆ ಕರೆದಿವೆ.

ಶರದ್ ಪವಾರ್ ಅವರು ದಕ್ಷಿಣ ಮುಂಬೈನ ವೈ.ಬಿ. ಚವಾಣ್ ಸೆಂಟರ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ ಶಾಸಕರು, ಸಂಸದರು ಮತ್ತು ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಮತ್ತೊಂದೆಡೆ, ಅಜಿತ್ ಪವಾರ್ ಬಣ ಬಾಂದ್ರಾ ಉಪನಗರದಲ್ಲಿರುವ ಮುಂಬೈ ಎಜುಕೇಶನ್ ಟ್ರಸ್ಟ್ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಸೇರಲಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿ ಬಲ : 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) 53 ಶಾಸಕರನ್ನು ಹೊಂದಿದೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಹಾಗೂ ಎನ್​ಸಿಪಿ ಪಕ್ಷದ ಹೆಸರು ಚಿಹ್ನೆ ಪಡೆದುಕೊಳ್ಳಲು ಅಜಿತ್ ಪವಾರ್ ಅವರಿಗೆ ಕನಿಷ್ಠ 36 ಶಾಸಕರ ಬೆಂಬಲ ಅವಶ್ಯಕ.

ಶರದ್ ಪವಾರ್ ನೇತೃತ್ವದ ಎನ್‌ಸಿಪಿ, ಅಜಿತ್ ಪವಾರ್ ಮತ್ತು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂಟು ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷದ ನಾಯಕರಾಗಿ ನಾಮನಿರ್ದೇಶನಗೊಂಡ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಅನರ್ಹಗೊಳಿಸುವಂತೆ ಅಜಿತ್ ಪವಾರ್ ಬಣವೂ ಕೋರಿದ್ದು ಇಲ್ಲಿ ಗಮನಾರ್ಹ.

ಇದನ್ನೂ ಓದಿ:ಮಹಾರಾಷ್ಟ್ರ ರಾಜಕೀಯ: ಬಂಡಾಯ ಶಾಸಕರ ಅನರ್ಹತೆ ಬೇಗ ನಿರ್ಧರಿಸುವಂತೆ ಸುಪ್ರೀಂ ಮೊರೆ ಹೋದ ಉದ್ಧವ್​ ​ ಬಣ

ABOUT THE AUTHOR

...view details