ETV Bharat / bharat

ಮಹಾರಾಷ್ಟ್ರ ರಾಜಕೀಯ: ಬಂಡಾಯ ಶಾಸಕರ ಅನರ್ಹತೆ ಬೇಗ ನಿರ್ಧರಿಸುವಂತೆ ಸುಪ್ರೀಂ ಮೊರೆ ಹೋದ ಉದ್ಧವ್​ ​ ಬಣ

author img

By

Published : Jul 4, 2023, 5:30 PM IST

ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಶಿವಸೇನೆಯ ಉದ್ಧವ್​ ಠಾಕ್ರೆ ಬಣದ ಶಾಸಕ ಸುನೀಲ್ ಪ್ರಭು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

shiv-sena-ubt-files-petition-in-sc-to-expedite-disqualification-of-eknath-shinde-and-15-mlas
' ಸ್ಪೀಕರ್ ಅಸಮರ್ಥ...': ಬಂಡಾಯ ಶಾಸಕರ ಅನರ್ಹತೆ ಬೇಗ ನಿರ್ಧರಿಸುವಂತೆ ಸುಪ್ರೀಂ ಮೊರೆ ಹೋದ ಉಧ್ಧವ್​ ಬಣ

ನವದೆಹಲಿ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣದ 16 ಜನ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಅವರಿಗೆ ನಿರ್ದೇಶನ ನೀಡುವಂತೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಉದ್ಧವ್​ ಬಣದ ಶಾಸಕ ಸುನೀಲ್ ಪ್ರಭು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಮಂದಿ ಸೇರ್ಪಡೆಗೊಂಡ ಎರಡು ದಿನಗಳ ಬಳಿಕ ಉದ್ಧವ್​ ಬಣ ಈ ಕ್ರಮಕ್ಕೆ ಮುಂದಾಗಿದೆ. ಭಾನುವಾರ ಅಜಿತ್​ ಪವಾರ್ ಆಡಳಿತಾರೂಢ ಬಿಜೆಪಿ - ಶಿವಸೇನೆ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಬಳಿಕ ಅದೇ ದಿನ ಅಜಿತ್​ ಪವಾರ್​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಇತರ ಎಂಟು ಎನ್​ಸಿಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಪ್ರಕರಣ ಸಂಬಂಧ ಶಾಸಕ ಸುನೀಲ್​ ಪ್ರಭು ಸಲ್ಲಿಸಿರುವ ಅರ್ಜಿಯಲ್ಲಿ, ವಿಧಾನಸಭೆಯಲ್ಲಿ ಕರ್ತವ್ಯಲೋಪ ಎಸಗಿದ ಸದಸ್ಯರ ವಿರುದ್ಧ ಸಲ್ಲಿಸಿರುವ ಅನರ್ಹತೆ ಅರ್ಜಿಗಳನ್ನು ನಿರ್ಧರಿಸಲು ಸ್ಪೀಕರ್ ವಿಫಲರಾಗಿದ್ದಾರೆ. ಕಾನೂನಿನ ಪ್ರಕಾರ ಹತ್ತನೇ ಪರಿಚ್ಛೇದದ ಅಡಿ ನ್ಯಾಯಯುತ ಮತ್ತು ಪಕ್ಷಪಾತವಿಲ್ಲದೇ ನ್ಯಾಯಮಂಡಳಿಯಾಗಿ ಕಾರ್ಯನಿರ್ವಹಿಸಲು ಸ್ಪೀಕರ್​ ಅಸಮರ್ಥರಾಗಿದ್ದಾರೆ ಮತ್ತು ತಮ್ಮ ನಿಷ್ಕ್ರಿಯತೆಯನ್ನು ತೋರಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಸುಪ್ರೀಂಕೋರ್ಟ್ ಸೂಕ್ತ ನಿರ್ದೇಶನ ನೀಡುವಂತೆ ಮನವಿ: ಸ್ಪೀಕರ್ ಅವರು ಸಂವಿಧಾನದಲ್ಲಿರುವಂತೆ ನ್ಯಾಯಸಮ್ಮತವಾಗಿ ಮತ್ತು ಪಕ್ಷಪಾತವಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲವಾದಾಗ ಹತ್ತನೆಯ ನಿಬಂಧನೆಗಳನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಸೂಕ್ತ ನಿರ್ದೇಶನಗಳನ್ನು ನೀಡುವುದು ಸಾಂವಿಧಾನಿಕವಾಗಿ ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕಳೆದ ಮೇ 11ರಂದು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ಏಕನಾಥ್ ಶಿಂಧೆ ಸೇರಿದಂತೆ 16 ಶಿವಸೇನೆ ಶಾಸಕರ ಭವಿಷ್ಯವನ್ನು ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸೂಚಿಸಿತ್ತು. ನಂತರ ಮೂವರು ತಮ್ಮ ಪ್ರಾತಿನಿಧ್ಯಗಳನ್ನು ಕೋರಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದರು ಎಂದು ಪ್ರಭು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

“ನ್ಯಾಯಯುತ ಸಾಂವಿಧಾನಿಕ ಅವಶ್ಯಕತೆಯು ಸ್ಪೀಕರ್‌ಗೆ ಅನರ್ಹತೆಯ ಪ್ರಶ್ನೆಯನ್ನು ತ್ವರಿತ ರೀತಿಯಲ್ಲಿ ನಿರ್ಧರಿಸುವ ಜವಾಬ್ದಾರಿಯನ್ನು ವಿಧಿಸುತ್ತದೆ. ಅನರ್ಹತೆಯ ಅರ್ಜಿಗಳನ್ನು ನಿರ್ಧರಿಸುವಲ್ಲಿನ ಸಭಾಧ್ಯಕ್ಷರ ವಿಳಂಬ ನೀತಿಯು ಸಂವಿಧಾನಕ್ಕೆ ವಿರುದ್ಧವಾಗುತ್ತದೆ ”ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಪ್ರಕರಣದಲ್ಲಿ, ಅನರ್ಹತೆಯ ಅರ್ಜಿಗಳು ಬಾಕಿ ಉಳಿದಿರುವ ಶಾಸಕರು ಅಸಾಂವಿಧಾನಿಕ ಕೃತ್ಯಗಳನ್ನು ಎಸಗಿದ್ದಾರೆ. ಇದು ಸಂವಿಧಾನದ ಹತ್ತನೇ ಪರಿಚ್ಛೇದದ 2(1)(ಎ), 2(1)(ಬಿ), ಮತ್ತು 2(2) ಅಡಿಯಲ್ಲಿ ಅನರ್ಹತೆಗೆ ಅರ್ಹರಾಗುತ್ತಾರೆ. ಈ ಅನರ್ಹತೆಯ ಪ್ರಕ್ರಿಯೆಗಳನ್ನು ನಿರ್ಧರಿಸುವಲ್ಲಿ ಸ್ಪೀಕರ್ ಅವರ ನಿಷ್ಕ್ರಿಯತೆಯು ಸಾಂವಿಧಾನಿಕ ವಿರುದ್ಧವಾಗಿದೆ. ಇದು ಅನರ್ಹತೆಗೆ ಒಳಗಾಗಬೇಕಾದ ಶಾಸಕರು ವಿಧಾನಸಭೆಯಲ್ಲಿ ಮುಂದುವರಿಯಲು ಮತ್ತು ಮುಖ್ಯಮಂತ್ರಿ ಸೇರಿದಂತೆ ಮಹಾರಾಷ್ಟ್ರ ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಲು ಅನುವು ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ಈ ಸಂಬಂಧ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ವಿಧಾನಸಭೆಯ ಸ್ಪೀಕರ್‌ ಅವರಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಲಾಗಿದೆ. ಅಥವಾ ಅನರ್ಹತೆ ಅರ್ಜಿಗಳನ್ನು ಸ್ವತಃ ಪರಿಗಣಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಸಿಎಂ ಆಗಿದ್ದ ಉದ್ಧವ್​ ಠಾಕ್ರೆ ವಿರುದ್ಧ ಏಕನಾಥ್​ ಶಿಂಧೆ ಬಂಡಾಯವೆದ್ದಿದ್ದರು. ಇದರಿಂದಾಗಿ ಸರ್ಕಾರ ಪತನಗೊಂಡಿತ್ತು. ಅಲ್ಲದೆ ಶಿವಸೇನೆಯಲ್ಲಿ ವಿಭಜನೆಗೆ ಪ್ರಮುಖ ಕಾರಣವಾಗಿತ್ತು.

ಇದನ್ನೂ ಓದಿ :Maharashtra politics: ಸರ್ಕಾರ ರಚಿಸಲು ಶಿವಸೇನೆ ಜೊತೆ ಹೋಗಬಹುದಾದರೆ ಬಿಜೆಪಿಯೊಂದಿಗೆ ಏಕೆ ಬೇಡ: ಡಿಸಿಎಂ ಪವಾರ್ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.