ಕರ್ನಾಟಕ

karnataka

ಮಹದಾಯಿ ವಿವಾದ: ಕರ್ನಾಟಕ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಅನುಮತಿ ನೀಡಲು ಸಾಧ್ಯವಿಲ್ಲ - ಗೋವಾ ಸಿಎಂ

By

Published : Jul 10, 2023, 3:53 PM IST

Updated : Jul 10, 2023, 4:08 PM IST

ಪ್ರವಾಹ್ ಪ್ರಾಧಿಕಾರ ರಚನೆಯಾದ ನಂತರ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

mahadei-diversion-ecnter-cant-permit-karnataka-directly-says-goa-cm-pramod-sawant
ಮಹದಾಯಿ ವಿವಾದ: ಕರ್ನಾಟಕ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಅನುಮತಿ ನೀಡಲು ಸಾಧ್ಯವಿಲ್ಲ - ಗೋವಾ ಸಿಎಂ

ಪಣಜಿ(ಗೋವಾ): ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಶೀಲ ನದಿ ಪ್ರಾಧಿಕಾರ (ಪ್ರವಾಹ್) ರಚನೆಯಾದ ನಂತರ ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ.

"ಮಹದಾಯಿ ವಿಷಯವಾಗಿ ಗೋವಾದ ಕಾನೂನು ತಂಡವು ದೆಹಲಿಯಲ್ಲಿದೆ. ನಾವು ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸುತ್ತೇವೆ ಎಂಬುದು ನನಗೆ ಖಾತ್ರಿಯಿದೆ. ಸರ್ವೋಚ್ಛ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆ ನನಗೆ ಇದೆ. ಕರ್ನಾಟಕ ಏನೇ ವಾದ ಮಂಡಿಸಲಿ, ನಾವು ನ್ಯಾಯಾಲಯದಲ್ಲಿ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತೇವೆ. ಪ್ರವಾಹ್ ರಚನೆಯಾಗಿರುವ ಕಾರಣ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಕರ್ನಾಟಕಕ್ಕೆ ಯಾವುದೇ ಅನುಮತಿ ನೀಡಲು ಸಾಧ್ಯವಿಲ್ಲ" ಎಂದು ಸಾವಂತ್ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನವೇ ವಿವಾದಿತ ಕಳಸಾ-ಬಂಡೂರಿ ಅಣೆಕಟ್ಟು ಯೋಜನೆಗೆ ಕೇಂದ್ರ ಸರ್ಕಾರ ಕರ್ನಾಟಕದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ನೀಡಿತ್ತು. ಜನವರಿಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಇಂದು ಕೇಂದ್ರ ಬಿಜೆಪಿ ಮಹದಾಯಿ ಕುರಿತು ಗೋವಾ ಮತ್ತು ಕರ್ನಾಟಕದ ನಡುವಿನ ದೀರ್ಘಕಾಲದ ವಿವಾದವನ್ನು ಪರಿಹರಿಸಿದೆ ಮತ್ತು ಅನೇಕ ಜಿಲ್ಲೆಗಳ ಜನರ ಬಾಯಾರಿಕೆಯನ್ನು ನೀಗಿಸಲು ಕರ್ನಾಟಕಕ್ಕೆ ಅವಕಾಶ ಮಾಡಿಕೊಟ್ಟಿದೆ" ಎಂದು ಹೇಳಿದ್ದರು.

ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, "ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ, ಮಹಾರಾಷ್ಟ್ರ ಮತ್ತು ಗೋವಾ, ಕರ್ನಾಟಕದ ವಿರುದ್ಧ ಮಹದಾಯಿ ಸಮಸ್ಯೆ ಕುರಿತು ಒಟ್ಟಾಗಿ ಹೋರಾಡುತ್ತವೆ" ಎಂದು ಹೇಳಿದ್ದರು.

ಇದನ್ನೂ ಓದಿ:ಆನೇಕಲ್​ನಲ್ಲಿ ಕಾಡಾನೆಗಳ ಹಾವಳಿ.. ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಗಜಪಡೆ

ಮಹದಾಯಿ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಬಗೆಹರಿಸಲಿ ಎಂದಿದ್ದ ಸಿಎಂ: ಮಹದಾಯಿ ಕುರಿತು ಜೂ.17 ರಂದು ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಮಹದಾಯಿ ವಿಷಯದಲ್ಲಿ ಗೋವಾ ಹಾಗೂ ಮಹಾರಾಷ್ಟ್ರ ಅಡ್ಡಿ ವಿಚಾರವಾಗಿ ಎಲ್ಲರನ್ನು ಕೂರಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ ಸಮಸ್ಯೆ ಬಗೆಹರಿಸಲಿ ಎಂದು ಸಲಹೆ ನೀಡಿದ್ದರು.

ಈ ವೇಳೆ ಮಾತನಾಡಿದ್ದ ಕೃಷಿ ಸಚಿವ ಚೆಲುವರಾಯಸ್ವಾಮಿ, ಮಹಾರಾಷ್ಟ್ರ ಸಿಎಂ ಜೊತೆ ನಮ್ಮ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ಮಹದಾಯಿಗೆ ಗೋವಾ, ಮಹಾರಾಷ್ಟ್ರ ಅಡ್ಡಿ ವಿಚಾರವಾಗಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಮೂರು ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮಾತನಾಡಬೇಕು. ರಾಜ್ಯಗಳ ನಡುವಿನ ನೀರಿನ ಸಮಸ್ಯೆ ಬಗೆಹರಿಸಿಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ನಾವೆಲ್ಲರೂ ಭಾರತ ದೇಶದಲ್ಲಿ ಇದ್ದೇವೆ. ನೀರು ಎಲ್ಲ ರಾಜ್ಯಗಳಿಗೂ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದರು.

ಇದನ್ನೂ ಓದಿ:Amarnath Yatra: ಸ್ವಂತ ಹಣದಲ್ಲಿ ಹೆಲಿಕ್ಯಾಪ್ಟರ್​ ಮೂಲಕ ಶ್ರೀನಗರ ತಲುಪಿದ ಧಾರವಾಡದ ಯಾತ್ರಿಗಳು!

Last Updated :Jul 10, 2023, 4:08 PM IST

ABOUT THE AUTHOR

...view details