ಕರ್ನಾಟಕ

karnataka

ಬಾಲಾ ಹತ್ಯೆ ಪ್ರಕರಣ: ಮಾಜಿ ಜಿ.ಪಂ ಅಧ್ಯಕ್ಷೆ ನೀತು ಬಾಟಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ

By ETV Bharat Karnataka Team

Published : Dec 16, 2023, 4:01 PM IST

life-imprisonment-to-four-people-including-former-district-panchayat-president-of-hapur-neetu-bata
ಬಾಲಾ ಹತ್ಯೆ ಪ್ರಕರಣ: ಮಾಜಿ ಜಿ.ಪಂ ಅಧ್ಯಕ್ಷೆ ನೀತು ಬಾಟಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಬಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀತು ಸಿಂಗ್​ ಬಾಟಾ ಸೇರಿದಂತೆ ನಾಲ್ವರನ್ನು ದೋಷಿ ಎಂದು ಘೋಷಿಸಿರುವ ಬುಲಂದ್​ಶಹರ್​ನ ಎಡಿಜೆ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಬುಲಂದ್‌ಶಹರ್ (ಉತ್ತರ ಪ್ರದೇಶ):ರಾಜ್ಯದಬುಲಂದ್​ಶಹರ್​ನ ಎಡಿಜೆ ನ್ಯಾಯಾಲಯವು ಹಾಪುರ್​ನ ಮಾಜಿ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ನೀತು ಸಿಂಗ್​ ಬಾಟಾ ಸೇರಿದಂತೆ ನಾಲ್ವರನ್ನು ಬಾಲ ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಖ್ಯಾತ ರೌಡಿ ಶೀಟರ್​ ಯದ್ವೀರ್​ ಬಾಟಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು, ಬಾಲಾ ಅವರನ್ನು ಹತ್ಯೆ ಮಾಡಿರುವ ಆರೋಪದ ಮೇಲೆ ನೀತು ಬಾಟಾ ಸೇರಿದಂತೆ ನಾಲ್ವರ ವಿರುದ್ಧ 2012ರಲ್ಲಿ ಅಗುಟಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

'ಪತಿ ಯದ್ವೀರ್​ ಬಾಟಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ನೀತು ಸಿಂಗ್​ ಬಾಟಾ, ಬಾಲಾ ಅವರ ಹತ್ಯೆ ಮಾಡಿದ್ದಾರೆ' ಎಂದು ಬುಲಂದ್​ಶಹರ್​ನ ಎಡಿಜಿಸಿ ಐ.ವಿಜಯ್​ ಶರ್ಮಾ ತಿಳಿಸಿದ್ದಾರೆ.

ಘಟನೆಯ ವಿವರ:2012ರ ಫೆಬ್ರವರಿ 5ರಂದು ಅಗೌಟಾ ಪೊಲೀಸ್​ ಠಾಣೆಯ ಪಾವ್ಸಾರಾ ಗ್ರಾಮದಲ್ಲಿ ಬಾಲಾ ದೇವಿ ಅವರ ಮನೆಗೆ ನುಗ್ಗಿದ ಅಪರಾಧಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು. ಅಂದು ರಾತ್ರಿ ಪಪ್ಪು (ಬಾಲಾ ಪತಿ) ಎಂಬವರು ತಮ್ಮ ಮನೆಯಲ್ಲಿ ಮಲಗಿದ್ದರು. ಮತ್ತೊಂದು ಕೋಣೆಯಲ್ಲಿ ಅವರ ಪತ್ನಿ ಬಾಲಾ ಮಕ್ಕಳೊಂದಿಗೆ ಮಲಗಿದ್ದರು. ಸುಮಾರು 10.30ರ ಸುಮಾರಿಗೆ ಯಾರೋ ಬಾಗಿಲು ತಟ್ಟಿದ ಶಬ್ಧ ಕೇಳಿ ಎಚ್ಚರಿಗೊಂಡ ಬಾಲಾ ಬಾಗಿಲು ತೆರೆದು ನೋಡಿದಾಗ ಅಪರಾಧಿಗಳು ಪೊಲೀಸ್​ ಸಮವಸ್ತ್ರದಲ್ಲಿ ಬಂದಿದ್ದರು.

ಅವರು, ಪಪ್ಪು ಎಲ್ಲಿ ಎಂದು ಪ್ರಶ್ನಿಸಿದಾಗ ಮನೆಯಲ್ಲಿ ಇಲ್ಲ ಎಂದು ಉತ್ತರಿಸಿದರು. ಈ ವೇಳೆ, ದುಷ್ಕರ್ಮಿಗಳು ಅವ್ಯಾಚ ಶಬ್ಧಗಳಿಂದ ಆಕೆಗೆ ಬೈದಿದ್ದಾರೆ. ಇದನ್ನು ಮನೆಯ ಒಳಗಡೆ ಇದ್ದ ಪಪ್ಪು ಕೇಳಿಸಿಕೊಂಡು, ಬಾಲಾ ಅವರನ್ನು ಒಳಗೆ ಬರುವಂತೆ ಕೂಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಆರೋಪಿಗಳು ಬಾಲಾ ದೇವಿ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಪ್ಪು ಹೇಗಾದರೂ ಮಾಡಿ ಅವರಿಂದ ತಪ್ಪಿಸಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಅಲ್ಲಿ ಘೋಷಿಸಿದರು.

ಮೃತ ರೌಡಿಶೀಟರ್​ ಯದ್ವೀರ್​ ಸಿಂಗ್​ ಬಾಟಾ ಅವರ ಪತ್ನಿ ನೀತು ಸಿಂಗ್​​ ಅವರು ನನ್ನ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂದು ಬಾಲಾ ಪತಿ ಪಪ್ಪು ಆರೋಪಿಸಿದ್ದರು. ಈ ಹಿನ್ನೆಲೆ ಕೃಷ್ಣಪಾಲ್, ನರೇಶ್​, ಯೋಗೇಶ್ ವಿರುದ್ಧ ಕೂಡ ದೂರು ದಾಖಲಾಗಿತ್ತು. ​ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಡಿಸೆಂಬರ್​ 12ರಂದು ನ್ಯಾಯಾಲಯವು ಎರಡೂ ಕಡೆಯ ಸಾಕ್ಷಿಗಳ ಹೇಳಿಕೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿ ನೀತು ಸಿಂಗ್​ ಬಾಟಾ ಸೇರಿದಂತೆ ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು.

ಇಂದು ಎಡಿಜೆ ಐ ಮನು ಕಾಲಿಯಾ ಅವರು ಬಾಲಾ ಹತ್ಯೆ ಪ್ರಕರಣದ ಅಪರಾಧಿಗಳಾದ ನೀತು ಸಿಂಗ್​ ಬಾಟಾ, ಕೃಷ್ಣಪಾಲ್​, ನರೇಶ್​ ಮತ್ತು ಯೋಗೇಶ್​ಗೆ ತಲಾ 20 ಸಾವಿರ ರೂಪಾಯಿ ದಂಡಸಹಿತ ಜೀವಾವಧಿ ಶಿಕ್ಷೆ ವಿಧಿಸಿದೆ. ಎಡಿಜಿಸಿ ವಿಜಯ್​ ಶರ್ಮಾ ಹೇಳುವಂತೆ, ಯದ್ವೀರ್​ ಸಿಂಗ್​ ಬಾಟಾ ಹತ್ಯೆಯ ನಂತರ ಪತ್ನಿ ನೀತು ಸಿಂಗ್​ ಬಾಟಾ ತನ್ನ ಪತಿಯ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ಪ್ರಮಾಣ ಮಾಡಿದ್ದರು. ಅಲ್ಲದೇ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡ ನಂತರವೇ ನೀರು ಕುಡಿಯುವುದಾಗಿ ಪ್ರತಿಜ್ಞೆ ಮಾಡಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಜಿಲ್ಲಾಧಿಕಾರಿಯ ಗನ್ ಮ್ಯಾನ್ ಆತ್ಮಹತ್ಯೆ

ABOUT THE AUTHOR

...view details