ಕರ್ನಾಟಕ

karnataka

'ಏಕನಾಥ ಬಂಡಾಯ ಗುಂಪಿನಿಂದ ಅಪಹರಣ': ಮುಂಬೈಗೆ ಮರಳಿದ 'ಶಿವಸೈನಿಕರು' ಹೇಳಿದ್ದು ರೋಚಕ ಕಥೆ!

By

Published : Jun 22, 2022, 4:45 PM IST

Updated : Jun 22, 2022, 5:55 PM IST

How 2 Sena MLAs 'escaped' dramatically from rebels' camp!

ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಶಾಸಕರ ಗುಂಪಿನೊಂದಿಗೆ ಕಾಣೆಯಾಗಿದ್ದಾರೆ. ಈ ಗುಂಪಿನಿಂದ ಶಾಸಕರಾದ ಕೈಲಾಸ್​ ಪಾಟೀಲ್​ ಮತ್ತು ನಿತಿನ್​​ ದೇಶಮುಖ್​ ತಪ್ಪಿಸಿಕೊಂಡು ಬಂದಿದ್ದು, ಇನ್ನೂ ಕೆಲವು ಶಾಸಕರು ಕೂಡ ನಮ್ಮಂತೆ ಬಂಡಾಯದ ಗುಂಪು ಬಿಟ್ಟು ಬರಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂಬೈ (ಮಹಾರಾಷ್ಟ್ರ):ಶಾಸಕರ ಬಂಡಾಯದಿಂದ ಮಹಾರಾಷ್ಟ್ರದ ಶಿವಸೇನೆ, ಎನ್​​ಸಿಪಿ ಮತ್ತು ಕಾಂಗ್ರೆಸ್​​ ಮೈತ್ರಿಕೂಟದ ಮಹಾವಿಕಾಸ್​ ಆಘಾಡಿ ಸರ್ಕಾರದಲ್ಲಿ ಕಂಪನ ಉಂಟಾಗಿದೆ. ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಗುಂಪಿನಿಂದ ಇಬ್ಬರು ಶಾಸಕರು ತಪ್ಪಿಸಿಕೊಂಡು ಬಂದಿದ್ಧಾರೆ.!

ಮಂಗಳವಾರ ಏಕನಾಥ ಶಿಂಧೆ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಾಸಕರು ಬಿಜೆಪಿ ಆಡಳಿತವಿರುವ ಗುಜರಾತ್​ನ ಸೂರತ್‌ನಲ್ಲಿರುವ ಹೋಟೆಲ್​ನಲ್ಲಿ ಆಶ್ರಯ ಪಡೆದಿದ್ದರು. ಈ ಗುಂಪಿನಲ್ಲಿದ್ದ ಶಾಸಕರಾದ ಕೈಲಾಸ್​ ಪಾಟೀಲ್​ ಮತ್ತು ನಿತಿನ್​​ ದೇಶಮುಖ್​ 24 ಗಂಟೆಗೊಳಗೆ ಮುಂಬೈಗೆ ಮರಳಿ ಬಂದಿದ್ದಾರೆ.

'5 ಕಿಮೀ ನಡೆದುಕೊಂಡೇ ಬಂದೆ'- ಶಾಸಕಕೈಲಾಸ್​ ಪಾಟೀಲ್: ಮುಂಬೈಗೆ ಮರಳಿದ ಶಿವಸೇನೆಯ ಹಿರಿಯ ನಾಯಕರನ್ನು ಭೇಟಿ ಮಾಡಿದ ಕೈಲಾಸ್​ ಪಾಟೀಲ್​ ತಮ್ಮ ಕಥೆಯನ್ನು ವಿವರಿಸಿದರು. "ಥಾಣೆಗೆ ಶಾಸಕರ ಗುಂಪು ಹೋಗುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ, ನಾವಿದ್ದ ವಾಹನವು ಪಥ ಬದಲಿಸಿ ಮೀರಾ ರಸ್ತೆಯ ಘೋಡ್‌ಬಂದರ್ ರಸ್ತೆಯಿಂದ ಗುಜರಾತ್ ಕಡೆಗೆ ಹೋಗುವಾಗ ಏನೋ ಎಡವಟ್ಟಾಗುತ್ತಿದೆ ಎಂದೆನಿಸಿತು. ಇಷ್ಟರಲ್ಲೇ, ಬಿಜೆಪಿ ಆಡಳಿತದ ಪಕ್ಕದ ರಾಜ್ಯ ಗುಜರಾತ್​ಗೆ ಪ್ರವೇಶಿಸುವ ಮೊದಲೇ ನಾನು ಮಹಾರಾಷ್ಟ್ರ-ಗುಜರಾತ್ ಗಡಿಯ ಚೆಕ್ ಪೋಸ್ಟ್ ಬಳಿ ಇಳಿದೆ. ನಂತರ ಅಲ್ಲಿಂದ ಕತ್ತಲೆಯಲ್ಲಿ ಮುಂಬೈ ಕಡೆಗೆ ಐದು ಕಿಲೋ ಮೀಟರ್‌ಗಳಷ್ಟು ದೂರ ನಡೆದುಕೊಂಡೇ ಬಂದೆ. ನಂತರ ಬೈಕ್​ನಲ್ಲಿ ಮುಂಬೈ ಬಂದು ಸೇರಿದೆ" ಎಂದು ವಿವರಿಸಿದ್ದಾರೆ. ಮುಂಬೈಗೆ ಬಂದ ಬಳಿಕ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರನ್ನು ಬಿಗಿ ಭದ್ರತೆಯಲ್ಲಿ ತೆರಳಿ ಭೇಟಿ ಮಾಡಿದ್ದಾರೆ.

ಶಾಸಕ ಕೈಲಾಸ್​ ಪಾಟೀಲ್​

'ನನ್ನನ್ನು ಅಪಹರಿಸಿದರು'-ಶಾಸಕನಿತಿನ್​​ ದೇಶಮುಖ್: ಬಂಡಾಯದ ಗುಂಪಿನಿಂದ ತಪ್ಪಿಸಿಕೊಂಡು ಬಂದಿರುವ ಇನ್ನೋರ್ವ ಶಾಸಕ ನಿತಿನ್​​ ದೇಶಮುಖ್ ಕೂಡಾ​ ರೋಚಕ ಕಥೆ ಹೇಳಿದ್ದಾರೆ. "ನನ್ನನ್ನು ಸೋಮವಾರ-ಮಂಗಳವಾರ ರಾತ್ರಿ ಅಪಹರಣ ಮಾಡಿ ಸೂರತ್‌ನಲ್ಲಿರುವ ಬಂಡಾಯ ಶಾಸಕರ ಗುಂಪಿನ ಜೊತೆ ಸೇರಿಸಿದರು. ನಾನು ಹೋಟೆಲ್​ನಿಂದ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಪ್ಪಿಸಿಕೊಂಡು ಹೊರಬಂದೆ. ಅಲ್ಲಿಂದ ದಾರಿಯಲ್ಲಿ ಹೋಗುವ ವಾಹನಗಳನ್ನು ಹತ್ತಲು ಪ್ರಯತ್ನಿಸಿದೆ. ಆದರೆ, ನೂರಕ್ಕೂ ಹೆಚ್ಚು ಗುಜರಾತ್ ಪೊಲೀಸರು ನನ್ನನ್ನು ಹಿಂಬಾಲಿಸಿದರು ಮತ್ತು ಅವರು ನನ್ನನ್ನು ಯಾವುದೇ ವಾಹನ ಹತ್ತದಂತೆ ತಡೆದರು. ನಂತರ ನನ್ನನ್ನು ಬಲವಂತವಾಗಿ ಯಾವುದೋ ಆಸ್ಪತ್ರೆಗೆ ಕರೆದೊಯ್ದರು" ಎಂದು ನಾಗ್ಪುರದಲ್ಲಿ ಮಾಧ್ಯಮಗಳಿಗೆ ವಿವರಿಸಿದರು.

ಶಾಸಕ ನಿತಿನ್​​ ದೇಶಮುಖ್

"ಆಸ್ಪತ್ರೆಯಲ್ಲಿ ನನಗೆ ವೈದ್ಯಕೀಯ ತಪಾಸಣೆ ನಡೆಸಿದರು. ಅಲ್ಲದೇ, ನಾನು ಎದೆ ನೋವಿನಿಂದ ಬಳಲುತ್ತಿದ್ದೇನೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಸಂಪೂರ್ಣವಾಗಿ ಆರೋಗ್ಯವಾಗಿದ್ದರೂ ಕೆಲವು ಚುಚ್ಚುಮದ್ದುಗಳನ್ನು ನೀಡಿದರು. ನನ್ನನ್ನು ಒಬ್ಬ ಭಯೋತ್ಪಾದಕರಂತೆ ಗುಜರಾತ್​ ಪೊಲೀಸರು ನಡೆಸಿಕೊಂಡರು. ಈ ನಡುವೆ ಆಸ್ಪತ್ರೆಯಿಂದ ಹೇಗೋ ಓಡಿ ಬರಲು ಸಾಧ್ಯವಾಯಿತು. ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಯಾವುದೇ ಎದೆ ನೋವಿನ ಸಮಸ್ಯೆಗಳಿಲ್ಲ" ಎಂದು ತಿಳಿಸಿದ್ದಾರೆ.

ನಾಪತ್ತೆ ದೂರು ದಾಖಲಿಸಿದ್ದ ಪತ್ನಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳ ನಂತರ ನಿತಿನ್​​ ದೇಶಮುಖ್ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ಸಂಜೆ 7 ಗಂಟೆಯಿಂದ ಪತಿ ಫೋನ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಜೀವಕ್ಕೆ ಅಪಾಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಸರ್ಕಾರ ವಿಸರ್ಜಿಸುವ ಸುಳಿವು ನೀಡಿದ ರಾವುತ್​.. ಮಧ್ಯಾಹ್ನ ಸಂಪುಟ ಸಭೆ.. ಉದ್ದವ್​ ಠಾಕ್ರೆಗೂ ಕೋವಿಡ್​​​​+

Last Updated :Jun 22, 2022, 5:55 PM IST

ABOUT THE AUTHOR

...view details