ಕರ್ನಾಟಕ

karnataka

Rain: ಗುಜರಾತ್‌ನಲ್ಲಿ ತಣ್ಣಗಾಗದ ವರುಣನ ಆರ್ಭಟ; ಹಿಮಾಚಲ ಪ್ರದೇಶದಲ್ಲಿ 24 ಮಂದಿ, 353 ಪ್ರಾಣಿಗಳು ಬಲಿ

By

Published : Jul 2, 2023, 1:37 PM IST

ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈವರೆಗೆ 24 ಜನರು ಪ್ರಾಣ ಕಳೆದುಕೊಂಡಿದ್ದಾರೆ.

rain
ಮಳೆ

ನವದೆಹಲಿ/ಅಹಮದಾಬಾದ್‌/ಶಿಮ್ಲಾ: ಗುಜರಾತ್‌ನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ದೇಶದ ಪಶ್ಚಿಮ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ವಿವಿಧೆಡೆ ಸುರಿದ ಭಾರಿ ಮಳೆಯಿಂದಾಗಿ ನಗರ, ಗ್ರಾಮಗಳ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಜೊತೆಗೆ, ಹಿಮಾಚಲ ಪ್ರದೇಶದಲ್ಲಿಯೂ ವರುಣದ ಆರ್ಭಟ ಮುಂದುವರೆದಿದ್ದು, ಜೀವ ಹಾನಿ ಸೇರಿದಂತೆ ವ್ಯಾಪಕ ಆಸ್ತಿ ನೀರುಪಾಲಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ನೀಡಿದ ಮಾಹಿತಿ ಪ್ರಕಾರ, ಜುನಾಗರ್ ಜಿಲ್ಲೆಯಲ್ಲಿ 398 ಮಿಮೀ ಮಳೆಯಾಗಿದೆ. ಜಾಮ್‌ನಗರ (269 ಮಿಮೀ), ಕಚ್ (239 ಮಿಮೀ), ವಲ್ಸಾದ್ (247 ಮಿಮೀ) ಮತ್ತು ನವಸಾರಿ (222 ಮಿಮೀ) ಭಾರಿ ಮಳೆಯಾಗಿದೆ. ಹಾಗೆಯೇ, ಮೆಹ್ಸಾನಾ (172 ಮಿಮೀ), ಅಮ್ರೇಲಿ (197 ಮಿಮೀ), ರಾಜ್‌ಕೋಟ್ (136 ಮಿಮೀ), ಬೋಟಾಡ್ (135 ಮಿಮೀ), ಡ್ಯಾಂಗ್ (155 ಮಿಮೀ), ಸೂರತ್ (123 ಮಿಮೀ) ಮತ್ತು ತಾಪಿ (123 ಮಿಮೀ) ಭಾರಿ ಮಳೆ ಸುರಿದಿದೆ.

ಅಮಿತ್​ ಶಾ ಭರವಸೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸರ್ಕಾರ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ಕಚ್, ಜಾಮ್‌ನಗರ, ಜುನಾಗಢ ಮತ್ತು ನವಸಾರಿಯಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮಳೆ ಅನಾಹುತ : ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆಗೆ ಈ ಬಾರಿ ಅಪಾರ ಪ್ರಮಾಣದ ಪ್ರಾಣ ಮತ್ತು ಆಸ್ತಿಪಾಸ್ತಿ ಹಾನಿಯಾಗಿದೆ. ಅನೇಕ ರಸ್ತೆಗಳು, ನೀರಿನ ಯೋಜನೆಗಳು ಮತ್ತು ಜಮೀನು ಜಲಾವೃತವಾಗಿದೆ. ಮಳೆಯಿಂದಾಗಿ ರಾಜ್ಯದಲ್ಲಿ 113 ಕೋಟಿ ರೂ. ಮೌಲ್ಯದ ರಸ್ತೆಗಳು ಕೊಚ್ಚಿ ಹೋಗಿವೆ. ರಾಜ್ಯದಲ್ಲಿ ಇನ್ನೂ 60 ರಸ್ತೆಗಳು ಬಂದ್ ಆಗಿದ್ದು, ಅನೇಕ ಪ್ರದೇಶಗಳಲ್ಲಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಜಲ ಯೋಜನೆಗಳಿಗೆ ಹಾನಿ: ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು 1,318 ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಜಲಶಕ್ತಿ ಇಲಾಖೆ ವ್ಯಾಪ್ತಿಯ 1,635 ಯೋಜನೆಗಳು ಹಾನಿಗೀಡಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 284 ನೀರಾವರಿ ಯೋಜನೆಗಳೂ ಹಾನಿಗೀಡಾಗಿದ್ದು, 23 ಒಳಚರಂಡಿ ಹಾಗೂ 10 ಇತರೆ ಯೋಜನೆಗಳಿಗೆ ಭಾರಿ ಹಾನಿಯಾಗಿದೆ. ಮಳೆಯಿಂದಾಗಿ ಜಲಶಕ್ತಿ ಇಲಾಖೆಗೆ 100.97 ಕೋಟಿ ನಷ್ಟವಾಗಿದೆ.

24 ಜನರು, 353 ಪ್ರಾಣಿಗಳು ಸಾವು: ಮಳೆ ಸಂಬಂಧಿತ ಘಟನೆಗಳಲ್ಲಿ ಇದುವರೆಗೆ 24 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಶಿಮ್ಲಾ ಜಿಲ್ಲೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಚಂಬಾ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಹಮೀರ್‌ಪುರ ಮತ್ತು ಕುಲು ಜಿಲ್ಲೆಗಳಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ. ಮಂಡಿ, ಸೋಲನ್, ಕಾಂಗ್ರಾ, ಕಿನ್ನೌರ್ ಮತ್ತು ಉನಾ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಸಾವುಗಳು ವರದಿಯಾಗಿವೆ. ಭಾರಿ ಮಳೆಗೆ 43 ಮಂದಿ ಗಾಯಗೊಂಡಿದ್ದಾರೆ. ಕುರಿ, ಮೇಕೆ ಸೇರಿದಂತೆ 353 ಪ್ರಾಣಿಗಳು ಬಲಿಯಾಗಿವೆ. ಭೂಕುಸಿತದಿಂದಾಗಿ ಹಲವು ರಸ್ತೆಗಳು ಬಂದ್ ಆಗಿವೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ 60 ರಸ್ತೆಗಳನ್ನು ಇನ್ನೂ ಮುಚ್ಚಲಾಗಿದೆ.

48 ಮನೆಗಳು, 22 ದನದ ಕೊಟ್ಟಿಗೆಗಳಿಗೆ ಹಾನಿ: ಮಳೆರಾಯನ ಆರ್ಭಟಕ್ಕೆ ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 48 ಮನೆಗಳಿಗೆ ಹಾನಿಯಾಗಿದೆ, ಅದರಲ್ಲಿ ಆರು ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ 42 ಭಾಗಶಃ ಹಾನಿಗೊಳಗಾಗಿವೆ. ಭಾರಿ ಮಳೆಯಿಂದಾಗಿ ರಾಜ್ಯದ ವಿವಿಧೆಡೆ 22 ಗೋಶಾಲೆಗಳು ಕುಸಿದಿವೆ. 2 ಅಂಗಡಿಗಳು ಸಂಪೂರ್ಣ ಜಖಂಗೊಂಡಿವೆ.

ABOUT THE AUTHOR

...view details