ಕರ್ನಾಟಕ

karnataka

ED Raid: 10 ಸಾವಿರ ಕೋಟಿ ಹವಾಲ ವ್ಯವಹಾರದ ಶಂಕೆ.. 20ಕ್ಕೂ ಹೆಚ್ಚು ಕಡೆ ಇಡಿ ದಾಳಿ

By

Published : Jun 20, 2023, 12:23 PM IST

ಕೊಚ್ಚಿ ಸೇರಿದಂತೆ ಕೇರಳದ 20ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಇಡಿ ತಪಾಸಣೆ ನಡೆಯುತ್ತಿದೆ. ಹತ್ತು ಸಾವಿರ ಕೋಟಿ ಹವಾಲಾ ವಹಿವಾಟು ನಡೆದಿದೆ ಎಂಬ ಮಾಹಿತಿ ಮೇರೆಗೆ 150 ಜನರ ತಂಡ ಪರಿಶೀಲನೆ ನಡೆಸುತ್ತಿದೆ.

ED Raid
ಇಡಿ ದಾಳಿ

ಎರ್ನಾಕುಲಂ (ಕೇರಳ):ಕೇರಳದಲ್ಲಿ 10,000 ಕೋಟಿ ರೂಪಾಯಿ ಹವಾಲ ವಹಿವಾಟು ನಡೆದಿದೆ ಎಂಬ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಮುಂದುವರಿಸಿದೆ. ಕೊಚ್ಚಿ ಸೇರಿದಂತೆ ಕೇರಳ ರಾಜ್ಯದ 20ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಇಡಿ ತಪಾಸಣೆ ನಡೆಸಿದೆ.

ಕೊಚ್ಚಿಯ ಪ್ರಮುಖ ಶಾಪಿಂಗ್ ಕೇಂದ್ರವಾದ ಪೆನ್ರಾ ಮೇನಕಾ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಮೊಬೈಲ್ ಆಕ್ಸೆಸರೀಸ್ ಹೋಲ್‌ಸೇಲ್ ಔಟ್‌ಲೆಟ್‌ಗಳು, ಬ್ರಾಡ್‌ವೇನಲ್ಲಿರುವ ಬ್ಯೂಟಿ ಶಾಪ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಸಗಟು ಮಾರಾಟ ಮಳಿಗೆಗಳಲ್ಲಿ ತಪಾಸಣೆ ನಡೆಸಲಾಯಿತು.

ಕೊಚ್ಚಿಯ ವ್ಯಾಪಾರ ಸಂಸ್ಥೆಗಳ ನೆಪದಲ್ಲಿ ಪ್ರತಿದಿನ ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಹವಾಲಾ ವಹಿವಾಟು ನಡೆಯುತ್ತಿದೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ. ಹೊರ ರಾಜ್ಯಗಳ ಅಧಿಕಾರಿಗಳು ಸೇರಿದಂತೆ ಇಡಿ 150 ಸದಸ್ಯರ ತಂಡ ದಾಳಿ ನಡೆಸಿದೆ. ಸಶಸ್ತ್ರ ಪಡೆಗಳ ಭದ್ರತೆಯಲ್ಲಿ ತಪಾಸಣೆ ನಡೆದಿದೆ. ನಿನ್ನೆ ಸಂಜೆ ಕೇರಳದ ವಿವಿಧೆಡೆ ಏಕಕಾಲಕ್ಕೆ ದಾಳಿ ಆರಂಭವಾಗಿದೆ.

ಕೇರಳದಲ್ಲಿ ವಿವಿಧ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಹವಾಲ ಆಪರೇಟರ್‌ಗಳ ಮೂಲಕ 10,000 ಕೋಟಿಗೂ ಹೆಚ್ಚು ಹವಾಲ ವಹಿವಾಟು ನಡೆಸಲಾಗಿದೆ ಎಂದು ಇಡಿ ಆರೋಪಿಸಿದೆ. ತಿಂಗಳುಗಟ್ಟಲೆ ರಹಸ್ಯ ತನಿಖೆ ನಡೆಸಿದ ಬಳಿಕ ವ್ಯಾಪಾರ ಸಂಸ್ಥೆಗಳ ನೆಪದಲ್ಲಿ ವ್ಯಾಪಕ ಹವಾಲ ವಹಿವಾಟು ನಡೆಯುತ್ತಿರುವುದು ಪತ್ತೆಯಾಗಿದೆ.

ಕಪ್ಪುಹಣ ಪತ್ತೆಗಾಗಿ ಕೇರಳದಲ್ಲಿ ಇಡಿ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ. ಇಡಿ ಪ್ರಕಾರ, "ಕೊಚ್ಚಿ ರಾಜ್ಯದ ಹವಾಲ ವಹಿವಾಟಿನ ಪ್ರಮುಖ ಕೇಂದ್ರವಾಗಿದೆ". ಕೊಚ್ಚಿಯಲ್ಲಿ ನಡೆಸಿದ ತಪಾಸಣೆ ವೇಳೆ ಕಪ್ಪುಹಣ ವಶಪಡಿಸಿಕೊಳ್ಳಲಾಗಿದೆ ಎಂಬ ಸುಳಿವನ್ನು ಇಡಿ ಅಧಿಕಾರಿಗಳು ನೀಡುತ್ತಿದ್ದಾರೆ. ತಪಾಸಣೆ ಪೂರ್ಣಗೊಂಡ ನಂತರವೇ ಇಡಿಯಿಂದ ಈ ಬಗ್ಗೆ ದೃಢೀಕರಣವನ್ನು ಪಡೆಯಲಾಗುವುದು.

ಇದನ್ನೂ ಓದಿ:ಇಡಿ ಕಸ್ಟಡಿಯಲ್ಲಿರುವ ಸೆಂಥಿಲ್ ಖಾತೆ ಇಲ್ಲದೇ​ ಸಚಿವರಾಗಿ ಮುಂದುವರಿಯುತ್ತಾರೆ: ತಮಿಳುನಾಡು ಸರ್ಕಾರ

ಕಳೆದವಾರ ಚೆನ್ನೈನಲ್ಲಿ ದಾಳಿ: ಕಳೆದ ವಾರ ಜಾರಿ ನಿರ್ದೇಶನಾಲಯ ಚೆನ್ನೈನಲ್ಲಿ ದಾಳಿ ನಡೆಸಿತ್ತು. ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ ಅವರ ಕೊಠಡಿಯಲ್ಲಿ ಶೋಧ ನಡೆಸಿತ್ತು. ಸಚಿವ ಸೆಂಥಿಲ್ ಬಾಲಾಜಿ ಅವರು ಸ್ಟಾಲಿನ್​ ಸರ್ಕಾರದಲ್ಲಿ ವಿದ್ಯುತ್, ಇಂಧನ ಮತ್ತು ಅಬಕಾರಿ ಖಾತೆಗಳನ್ನು ಹೊಂದಿದ್ದರು. ಉದ್ಯೋಗ ಕೊಡಿಸಲು ಹಣ ಪಡೆದಿರುವ ಹಗರಣಕ್ಕೆ ಸಂಬಂಧಿದಂತೆ ಶೋಧ ಕಾರ್ಯವನ್ನು ಇಡಿ ಮಾಡಿದೆ. ಈ ಸಂಬಂಧ ಪ್ರಕರಣದ ತನಿಖೆಯನ್ನು ಪುನರಾರಂಭಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಇಡಿಗೆ ಆದೇಶ ನೀಡಿತ್ತು.

ಕೋರ್ಟ್​ ಆದೇಶದಂತೆ ರಾಜ್ಯದ ಶಕ್ತಿ ಕೇಂದ್ರವಾಗಿರುವ ಸೆಕ್ರೆಟರಿಯೇಟ್‌ನಲ್ಲಿರುವ ಸಚಿವರ ಕೊಠಡಿಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳು ಸೆಕ್ರೆಟರಿಯೇಟ್ ಪ್ರವೇಶಿಸಿ ತನಿಖೆ ಮಾಡಿದ್ದಾರೆ. ಇಡಿ ಮತ್ತು ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ಕೂಡ ದಾಳಿಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ED Raid: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಕಚೇರಿ, ಮನೆಗಳ ಮೇಲೆ ಇಡಿ ಶೋಧ; ಕೇಂದ್ರದ ವಿರುದ್ಧ ಸಿಎಂ ಸ್ಟಾಲಿನ್ ಆಕ್ರೋಶ

ABOUT THE AUTHOR

...view details