ಕರ್ನಾಟಕ

karnataka

ಡೀಸೆಲ್ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಜಿಎಸ್‌ಟಿ ವರದಿ: ಸ್ಪಷ್ಟನೆ ನೀಡಿದ ನಿತಿನ್ ಗಡ್ಕರಿ

By PTI

Published : Sep 12, 2023, 1:46 PM IST

Updated : Sep 12, 2023, 2:34 PM IST

ಡೀಸೆಲ್ ಚಾಲಿತ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಜಿಎಸ್‌ಟಿ ವಿಧಿಸುವ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ವರದಿ ಬೆನ್ನಲ್ಲೇ ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ.

Nitin Gadkari
ನಿತಿನ್ ಗಡ್ಕರಿ

ನವದೆಹಲಿ: ''ವಾಯು ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಡೀಸೆಲ್ ವಾಹನಗಳು ಮತ್ತು ಜೆನ್​ಸೆಟ್‌ಗಳ (ಡೀಸೆಲ್ ಜನರೇಟರ್) ಮೇಲೆ 'ಮಾಲಿನ್ಯ ತೆರಿಗೆ' ರೂಪದಲ್ಲಿ ಶೇ.10ರಷ್ಟು ಹೆಚ್ಚುವರಿ ಜಿಎಸ್‌ಟಿ ವಿಧಿಸಲು ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಲಾಗುತ್ತದೆ'' ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ಎಂಬುವುದು ವರದಿಯಾಗಿದೆ. ಈ ಕುರಿತು ಖುದ್ದು ಸಚಿವರೇ ಸ್ಪಷ್ಟನೆ ಕೊಟ್ಟಿದ್ದು, ಇಂತಹ ಯಾವುದೇ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ ಭಾರತೀಯ ಆಟೋಮೊಬೈಲ್ ತಯಾರಕರ ಸಂಘದ (ಎಸ್​ಐಎಎಂ) 63ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಸಚಿವರು, ''ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವು ನಾಗರಿಕರ ಆರೋಗ್ಯಕ್ಕೆ ಅಪಾಯವಾಗಿದೆ. ಡೀಸೆಲ್ ಚಾಲಿತ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಜಿಎಸ್‌ಟಿಯನ್ನು ಹಾಕಬೇಕೆಂದು ಕೋರಿ ನಾನು ಇಂದು ಸಂಜೆ ಹಣಕಾಸು ಸಚಿವರಿಗೆ ಪತ್ರವನ್ನು ಹಸ್ತಾಂತರಿಸಲಿದ್ದೇನೆ'' ಎಂಬುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿತ್ತು.

ಸಚಿವರ ಸ್ಪಷ್ಟನೆ ಹೀಗಿದೆ..ಈ ಕುರಿತು ವರದಿ ಬೆನ್ನಲ್ಲೇ ಸಚಿವ ನಿತಿನ್​ ಗಡ್ಕರಿ ಸಾಮಾಜಿಕ ಜಾಲತಾಣದ 'ಎಕ್ಸ್​'ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ''ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ ಶೇ.10ರಷ್ಟು ಜಿಎಸ್‌ಟಿಯನ್ನು ಸೂಚಿಸುವ ಮಾಧ್ಯಮ ವರದಿಗಳನ್ನು ಸ್ಪಷ್ಟಪಡಿಸುವ ತುರ್ತು ಅಗತ್ಯವಿದೆ. ಇಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ'' ಎಂದು ಗಡ್ಕರಿ ತಿಳಿಸಿದ್ದಾರೆ.

''2070ರ ವೇಳೆಗೆ ಕಾರ್ಬನ್ ನೆಟ್​ ಶೂನ್ಯವನ್ನು ಸಾಧಿಸಲು ಮತ್ತು ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ನಮ್ಮ ಬದ್ಧತೆಯಾಗಿದೆ. ಹಾಗೆಯೇ ಆಟೋಮೊಬೈಲ್ ಮಾರಾಟದಲ್ಲಿ ತ್ವರಿತ ಬೆಳವಣಿಗೆ, ಶುದ್ಧ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ'' ಎಂದು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

''ದೇಶದ ಬಹುತೇಕ ವಾಣಿಜ್ಯ ವಾಹನಗಳು ಪ್ರಸ್ತುತ ಡೀಸೆಲ್‌ನಿಂದ ನಡೆಯುತ್ತಿವೆ. ಪ್ರಯಾಣಿಕ ವಾಹನ ವಿಭಾಗದಲ್ಲಿ ಮಾರುತಿ ಸುಜುಕಿ ಇಂಡಿಯಾ ಮತ್ತು ಹೋಂಡಾ ಸೇರಿದಂತೆ ವಿವಿಧ ಕಾರು ತಯಾರಕರು ಈಗಾಗಲೇ ಡೀಸೆಲ್ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದ್ದಾರೆ. ದೇಶದಲ್ಲಿ ಈಗಾಗಲೇ ಡೀಸೆಲ್ ಕಾರುಗಳ ಕೊಡುಗೆ ತೀವ್ರವಾಗಿ ಕುಸಿದಿದೆ. ಆದರೂ, ತಯಾರಕರು ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕಾಗಿದೆ'' ಎಂದು 'ಎಕ್ಸ್'​​ನಲ್ಲಿ ಗಡ್ಕರಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ವಿಐಪಿಗಳ ವಾಹನದಲ್ಲಿ ಸೈರನ್​ಗೆ ಬ್ರೇಕ್​.. ಹಾರ್ನ್​ಗೆ ಬದಲಾಗಿ ಬರಲಿದೆ ಭಾರತೀಯ ಸಂಗೀತ

Last Updated : Sep 12, 2023, 2:34 PM IST

ABOUT THE AUTHOR

...view details