ಕರ್ನಾಟಕ

karnataka

ಹುಟ್ಟೂರು, ಆಸ್ತಿಪಾಸ್ತಿ ಬಿಟ್ಟು ಬೆಂಗಳೂರಿಗೆ ಭಾರವಾದ ಹೆಜ್ಜೆ..: ಕಾಶ್ಮೀರ ಪಂಡಿತ ಮಹಿಳೆಯರ ಮನದಾಳದ ನೋವು..

By

Published : Mar 20, 2022, 10:21 AM IST

ಕಾಶ್ಮೀರ ಕಣಿವೆಯಿಂದ ಬಂದು ಸಿಲಿಕಾನ್​ ಸಿಟಿ ಖ್ಯಾತಿಯ ಕರ್ನಾಟಕದ ಬೆಂಗಳೂರಿನಲ್ಲಿ ನೆಲೆ ಕಂಡುಕಂಡಿರುವ ಕಾಶ್ಮೀರ ಪಂಡಿತ ಮಹಿಳೆ ಸುನೀತಾ ತಮ್ಮ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು. ಭಯೋತ್ಪಾದಕರು ಅಂದು ನಡೆಸಿದ ಹೇಯ ಕ್ರೌರ್ಯ, ಭೀಭತ್ಸ್ಯ ರೀತಿಯ ದೌರ್ಜನ್ಯಗಳು ಅವರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದಂತೆ ಉಳಿದುಕೊಂಡಿವೆ.

Journey of a resilient Pandit
Journey of a resilient Pandit

ಬೆಂಗಳೂರು:'ನಾವು ಕಾಶ್ಮೀರಕ್ಕೆ ಪ್ರವಾಸಿಗರಾಗಿ ಹೋಗುತ್ತೇವೆಯೇ ಹೊರತು ಅಲ್ಲಿ ವಾಸಿಸಲು ಅಲ್ಲ. ಈಗಲೂ ನಾವು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಭದ್ರತೆಯಲ್ಲಿ ಜೀವನ ಸಾಗಿಸುವುದು ಜೈಲಿಗಿಂತ ಮಿಗಿಲು. ನಮಗೆ ಸ್ವಾತಂತ್ರ್ಯ ಅಗತ್ಯ....'

ಇದು ಕಾಶ್ಮೀರದಿಂದ ವಲಸೆ ಬಂದು ಬೆಂಗಳೂರಲ್ಲಿ ಸಂತೋಷದಿಂದ ನೆಲೆ ಕಂಡುಕೊಂಡಿರುವ ಪಂಡಿತ ಮಹಿಳೆ ಸುನೀತಾ ಅವರ ಮಾತುಗಳು. ಸುನೀತಾ ಖುಷಿಯಿಂದ ಬೆಂಗಳೂರಲ್ಲಿ ಜೀವಿಸುತ್ತಿದ್ದರೂ ಅಂದು ಕಾಶ್ಮೀರದಲ್ಲಿ ತಾವು ಎದುರಿಸಿದ, ಅನುಭವಿಸಿದ ಯಾತನಾಮಯ ದಿನಗಳು ಇಂದಿಗೂ ಅವರು ಆತಂಕಪಡುವಂತೆ ಮಾಡಿದೆ ಅನ್ನೋದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ.

ಇದನ್ನೂ ಓದಿ:ಕಾಶ್ಮೀರ ಫೈಲ್ಸ್​ಗೆ 9 ರಾಜ್ಯಗಳಲ್ಲಿ ತೆರಿಗೆ ಮುಕ್ತ; ಆದರೆ, ನಮ್ಮ ಚಿತ್ರಕ್ಕೆ ಯಾಕಿಲ್ಲ?

'ನಮ್ಮ ಆಸ್ತಿಗಳನ್ನು ಸ್ಥಳೀಯ ಮುಸ್ಲಿಮರು ಬಿಟ್ಟುಕೊಡಲ್ಲ': ಆಗಿನ್ನೂ ಪುಟ್ಟ ಬಾಲಕಿ. ಕುಟುಂಬದೊಂದಿಗೆ ಕಾಶ್ಮೀರದಿಂದ ಜಮ್ಮುಗೆ ಬರುತ್ತಿದ್ದಾಗ ನಡೆದ ಉಗ್ರರ ದಾಳಿಯ ನೋವಿನ ನೆನಪು ಅವರ ಮನಸ್ಸಿನಲ್ಲಿ ಹಾಗೆಯೇ ಹೆಪ್ಪುಗಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲೂ ಅಲ್ಲಿನ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ನಾವು ಅಲ್ಲಿಗೆ ಹೋಗಬೇಕೇ? ಎಂಬ ಪ್ರಶ್ನೆಗಳು ಅವರನ್ನು ದಿನನಿತ್ಯ ಕಾಡುತ್ತಿವೆ. ಅಂದು ನಮ್ಮೊಂದಿಗೆ ಏನು ಆಗಿದೆಯೋ, ಅದು ಮತ್ತೊಬ್ಬರಿಗೂ ಆಗಬಹುದು. ಇದು ಮುಂದಿನ ಭವಿಷ್ಯಕ್ಕೆ ಮತ್ತಷ್ಟು ಅಪಾಯ ಎಂಬುದೇ ಅವರ ಆತಂಕ. ನಮ್ಮ ಆಸ್ತಿಗಳನ್ನು ಸ್ಥಳೀಯ ಮುಸ್ಲಿಮರು ಬಿಟ್ಟುಕೊಡಲು ಇನ್ನೂ ಒಪ್ಪುತ್ತಿಲ್ಲ ಎಂಬ ಕೊರಗು ಅವರಲ್ಲಿದೆ.

ಕಣ್ಣಿಗೆ ಕಟ್ಟುವಂತಿರುವ ಭಯಾನಕ ದೃಶ್ಯಗಳು: 1990ರಲ್ಲಿ ನಡೆದ ಕಾಶ್ಮೀರ ಪಂಡಿತರ ಮೇಲಿನ ಅಮಾನುಷ ಆಕ್ರಮಣದ ಸಂತ್ರಸ್ತರಲ್ಲಿ ಸುನೀತಾ ಕೂಡ ಒಬ್ಬರು. ಸದ್ಯ ಬೆಂಗಳೂರಲ್ಲಿ ವಾಸವಾಗಿರುವ ಇವರು, ಅಂದು ಕಾಶ್ಮೀರದಲ್ಲಿ ನಡೆದ ಅಂದಿನ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಇಂದಿಗೂ ವಿವರಿಸುತ್ತಾರೆ. 1986-88ರ ನಡುವೆ ಯಾವುದೇ ಕಾರಣವಿಲ್ಲದೇ ನಮ್ಮ ಗುಡಿಗಳು, ಮಂದಿರಗಳಿಗೆ ಬೆಂಕಿ ಹಚ್ಚಿದರು. ಚಿತ್ರಮಂದಿರಗಳನ್ನು ಮುಚ್ಚಿಸಿದರು. ಯಾವುದೇ ಛಾಯಾಚಿತ್ರಗಳು, ವಿಡಿಯೋ ಕೂಡ ತೆಗೆಯುವಂತೆಯೂ ಇರಲಿಲ್ಲ. ಕೇಂದ್ರ ಸರ್ಕಾರ ಆಗಲೇ ಏನಾದರೂ ಮಾಡಬೇಕಿತ್ತು ಎನ್ನುವುದು ಸುನೀತಾರ ಅಸಹಾಯಕ ನುಡಿ.

ಇದನ್ನೂ ಓದಿ:ವಿಚಾರವಾದಿ ದಾಭೋಲ್ಕರ್‌ ಹತ್ಯೆ: ಇಬ್ಬರು ಆರೋಪಿಗಳನ್ನು ಗುರುತಿಸಿದ ಪೌರ ಕಾರ್ಮಿಕ

'ಇಸ್ಲಾಂ ಒಪ್ಪಿಕೊಳ್ಳಿ ಇಲ್ಲವೇ..': ಗುಡಿ-ಗುಂಡಾರಗಳ ಬಳಿಕ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡರು. ಹಸಿರು-ಬಿಳಿ ಬಣ್ಣದ ನಾಮಫಲಕಗಳು ಇರದೇ ಹೋದರೆ ಅಂತಹ ಇಡೀ ಕಟ್ಟಡಗಳಿಗೆ ಬೆಂಕಿ ಇಡಲಾಗುತ್ತಿತ್ತು. ಅಲ್ಲಿಂದ ಪ್ರಮುಖ ಹಿಂದೂ ಮುಖಂಡರ ಕೊಲೆ ಮಾಡಲು ಆರಂಭಿಸಿದರು. ಅವರ ಶವಗಳ ಮೇಲೆ 'ಭಾರತೀಯರು ಸಾಯುತ್ತಾರೆ' ಎಂಬ ಬರಹ ಬರೆಯಲಾಗುತ್ತಿತ್ತು. ಬುರ್ಕಾಗಳನ್ನು ಎಲ್ಲರಿಗೂ ಕಡ್ಡಾಯಗೊಳಿಸಿದರು. ಕಾಶ್ಮೀರದಲ್ಲಿ ಬದುಕಲು ಇಚ್ಛಿಸುವವರು ಇಸ್ಲಾಂ ಒಪ್ಪಿಕೊಳ್ಳಬೇಕು. ಅಲ್ಲದೇ, ಭಾರತದ ನಾಯಿಗಳು ಬಿಟ್ಟು ಹೋಗಬಹುದು ಎಂಬೆಲ್ಲ ಘೋಷಣೆಗಳು ಮಸೀದಿಗಳ ಧ್ವನಿವರ್ಧಕಗಳ ಮೂಲಕ ಕೂಗಲಾಗುತ್ತಿತ್ತು ಎಂದು ಸುನೀತಾ ಅಂದಿನ ಘಟನೆಗಳನ್ನು ಬಿಚ್ಚಿಡುತ್ತಾರೆ.

'ಟ್ರಕ್​ಗಳಲ್ಲಿ ಹೋಗಲೂ ಬಿಡುತ್ತಿರಲಿಲ್ಲ': ಜೀವ ಭಯದಿಂದ ಟ್ರಕ್​ಗಳಲ್ಲಿ ಅವಿತು ಆಶ್ರಯ ಪಡೆಯುತ್ತಿದ್ದರೂ ಬಿಡುತ್ತಿರಲಿಲ್ಲ. ಉಗ್ರರೊಂದಿಗೆ ಪೊಲೀಸರು ಸಹ ಶಾಮೀಲಾಗಿರುತ್ತಿದ್ದರು. ನಮ್ಮ ನೆರೆಯ ನಾಲ್ಕು ಪಂಡಿತ ಕುಟುಂಬಗಳು ಕಾಶ್ಮೀರ ಬಿಟ್ಟು ಟ್ರಕ್​ನಲ್ಲಿ ಬರುತ್ತಿದ್ದರು. ತುಂಬಾ ಹೊದಿಕೆಯಿಂದ ಕೂಡಿದ್ದ ಟ್ರಕ್​ನಲ್ಲಿ ನಾವು ಮೇಣದ ಬತ್ತಿ ಹಿಡಿದುಕೊಳ್ಳುತ್ತಿದ್ದೆವು. ಕೆಲ-ಕೆಲವೇ ಪ್ರಮುಖ ವಸ್ತುಗಳನ್ನು ನಮ್ಮೊಂದಿಗೆ ತರಲು ಸಾಧ್ಯವಾಗಿತ್ತು. ನಮ್ಮ ಮೂರು ಮಹಡಿಯ ಮನೆ, ಹೊಲ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಬಂದೆವು.

'ನಮಗೆ ಸಹಾಯ ಮಾಡಿದವರೇ ನೀವು ಇಲ್ಲಿಂದ ಹೋಗಿ ಎನ್ನುತ್ತಿದ್ದರು': ಅಲ್ಲದೇ, ನಾವು 20 ದಿನಗಳ ಕಾಲ ದೇವಸ್ಥಾನವೊಂದರಲ್ಲೇ ಆಶ್ರಯ ಪಡೆದೆವು. ಕೆಲವರು ಶಾಲೆಗಳು, ಗುರುದ್ವಾರಗಳಲ್ಲಿ ಉಳಿದುಕೊಂಡಿದ್ದರು. ನಮ್ಮ ತಂದೆಯ ಪಿಂಚಣಿ ಹಣದಿಂದ ಹೇಗೋ ಬಾಡಿಗೆ ಮನೆ ಮಾಡಿದೆವು. ಇನ್ನು, ನಮಗೆ ಸಹಾಯ ಮಾಡುತ್ತಿದ್ದ ಮುಸ್ಲಿಮರು ಕೂಡ ನೀವು ಇಲ್ಲಿಂದ ಹೋಗಿ ಎನ್ನುತ್ತಿದ್ದರು. ಆಗ ಬೇಸಿಗೆ ದಿನಗಳಲ್ಲಿ ಕಾಶ್ಮೀರಕ್ಕೆ ಯುರೋಪ್​, ಅಮೆರಿಕ ಸೇರಿದಂತೆ ಸಾಕಷ್ಟು ಜನ ಪ್ರವಾಸಿಗರು ಬರುತ್ತಿದ್ದರು. ಈಗ ಯಾರೂ ಅಲ್ಲಿಗೆ ಹೋಗುತ್ತಿಲ್ಲ. 370 ಕಲಂ ರದ್ದು ಮಾಡಿದ್ದರೂ ನಾವು ಅಲ್ಲಿಗೆ ಹೋಗಲಾರೆವು ಎನ್ನುತ್ತಾರೆ ಸುನೀತಾ.

ಇದನ್ನೂ ಓದಿ:ಹಿಜಾಬ್ ತೀರ್ಪು ಸಂಬಂಧ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ: ಇಬ್ಬರ ಬಂಧನ

ABOUT THE AUTHOR

...view details