ETV Bharat / state

ಹಿಜಾಬ್ ತೀರ್ಪು ಸಂಬಂಧ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ: ಇಬ್ಬರ ಬಂಧನ

author img

By

Published : Mar 20, 2022, 8:48 AM IST

ಶಾಲಾ ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್‌ ವಿಶೇಷ ಪೀಠದ ನ್ಯಾಯಾಧೀಶರಿಗೆ ದುಷ್ಕರ್ಮಿಗಳು ವಿಡಿಯೋ ಮೂಲಕ ಕೊಲೆ ಬೆದರಿಕೆ ಹಾಕಿದ್ದರು. ಇದೀಗ ಪ್ರಕರಣ ಸಂಬಂಧ ತಮಿಳುನಾಡಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

arrest
arrest

ಬೆಂಗಳೂರು/ಚೆನ್ನೈ: ಹಿಜಾಬ್ ತೀರ್ಪು ಪ್ರಕಟಿಸಿದ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪದಡಿ ಇಬ್ಬರು ಕಿಡಿಗೇಡಿಗಳನ್ನು ತಮಿಳುನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ತಮಿಳುನಾಡಿನ ತಿರುನೆಲ್‌ವೇಲಿ ಎಂಬಲ್ಲಿ ಕೊವಾಯಿ ರಹಮುತುಲ್ಲಾ ಹಾಗು ತಂಜಾವೂರಿನಲ್ಲಿ ಎಸ್.ಜಮಾಲ್ ಮೊಹಮ್ಮದ್ ಉಸ್ಮಾನಿ ಎಂಬಾತನನ್ನು ಶನಿವಾರ ರಾತ್ರಿ ಸೆರೆ ಹಿಡಿಯಲಾಗಿದೆ. ಈ ಇಬ್ಬರು ದುಷ್ಕರ್ಮಿಗಳು ತಮಿಳುನಾಡು ತೌಹೀದ್ ಜಮಾತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವು ದೂರುಗಳು ದಾಖಲಾದ ಬೆನ್ನಲ್ಲೇ ಈ ಆರೋಪಿಗಳಿಗೆ ಪೊಲೀಸರು ಕೈಕೋಳ ತೊಡಿಸಿದ್ದಾರೆ. ಇದೇ ವೇಳೆ ಈ ಇಬ್ಬರ ಹೊರತಾಗಿ ಹಲವರ ವಿರುದ್ಧ ದೂರುಗಳು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

ಮಹತ್ವದ ತೀರ್ಪು: 'ಹಿಜಾಬ್‌ ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ' ಎಂದು ಕಳೆದವಾರ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ಥಿ ನೇತೃತ್ವದ ನ್ಯಾ.ಕೃಷ್ಣ ಎಸ್.ದೀಕ್ಷಿತ್‌ ಹಾಗು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ವಿಶೇಷ ನ್ಯಾಯಪೀಠ ರಿಟ್‌ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿತ್ತು.

ಹೈಕೋರ್ಟ್ ಈ ತೀರ್ಪು ನೀಡಿದ ಬಳಿಕ ತಮಿಳುನಾಡಿನ ಕೆಲವು ಸಂಘಟನೆಗಳು ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಇದಾದ ಬಳಿಕ ಪ್ರಕರಣದಲ್ಲಿ ಸದ್ಯ ಬಂಧಿತನಾಗಿರುವ ಕೋವಿ ರಹಮತುಲ್ಲಾ ಎಂಬಾತ ವಿಡಿಯೋ ಮಾಡಿ, ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಏಕವಚನದಲ್ಲೇ ನಿಂದಿಸಿ, ಜೀವ ಬೆದರಿಕೆಯನ್ನೂ ಹಾಕಿದ್ದ. ಈ ಸಂಬಂಧ ಬೆಂಗಳೂರಿನ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿತ್ತು.

ಆರೋಪಿ ಹೇಳಿದ್ದೇನು?: ಜಾರ್ಖಂಡ್‌ನಲ್ಲಿ ಬೆಳಗಿನ ವಾಕಿಂಗ್‌ ವೇಳೆ ಜಿಲ್ಲಾ ನ್ಯಾಯಾಧೀಶರೊಬ್ಬರ ಮೇಲೆ ವಾಹನ ಹರಿಸಿ ಕೊಂದು ಹಾಕಲಾಗಿತ್ತು. ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಕೂಡಾ ಎಲ್ಲಿಗೆ ಬೆಳಗಿನ ವಾಕ್‌ ಹೋಗುತ್ತಾರೆ ಅನ್ನೋದು ಜನರಿಗೆ ಗೊತ್ತಿದೆ ಎಂದು ಹೇಳುವ ಮೂಲಕ ಕೊಲೆ ಬೆದರಿಕೆ ಹಾಕಿದ್ದಾನೆ.

ಅಣ್ಣಾಮಲೈ ದೂರು: ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಮಾಜಿ ಐಪಿಎಸ್‌ ಅಧಿಕಾರಿ/ ತಮಿಳುನಾಡು ಹಾಲಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ತಮಿಳುನಾಡು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದರು.

ವಕೀಲರ ಸಂಘ ಆಗ್ರಹ: ಪ್ರಕರಣದ ಗಂಭೀರತೆ ಅರಿತ ಬೆಂಗಳೂರು ವಕೀಲರ ಸಂಘ, ಪ್ರಕರಣವನ್ನು ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

ಭದ್ರತೆ ಹೆಚ್ಚಳ: ಇದೇ ವೇಳೆ, ಬೆಂಗಳೂರು ಪೊಲೀಸರು ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರುಗಳಿಗೆ ಭದ್ರತೆ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕವಾಗಿ ಶ್ರೀಲಂಕಾ ದಿವಾಳಿ: ಪೇಪರ್​ ಕೊರತೆಯಿಂದ ಶಾಲಾ ಮಕ್ಕಳ ಪರೀಕ್ಷೆಗಳೇ ರದ್ದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.