ಕರ್ನಾಟಕ

karnataka

Assembly elections 2023: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟಣೆ ಸಾಧ್ಯತೆ

By ETV Bharat Karnataka Team

Published : Oct 9, 2023, 8:38 AM IST

Updated : Oct 9, 2023, 9:39 AM IST

ಚುನಾವಣಾ ಆಯೋಗವು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕವನ್ನು ಇಂದು ಪ್ರಕಟಿಸುವ ಸಾಧ್ಯತೆ ಇದೆ.

Assembly elections
ಚುನಾವಣಾ ಆಯೋಗ

ನವದೆಹಲಿ : ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ 2023ರ ದಿನಾಂಕಗಳನ್ನು ಚುನಾವಣಾ ಆಯೋಗವು ಇಂದು ಪ್ರಕಟಿಸಲಿದೆ. ಈ ಸಂಬಂಧ ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ ಚುನಾವಣಾ ಆಯೋಗವು ಸುಮಾರು 300 ವೀಕ್ಷಕರ ಸಭೆ ನಡೆಸಿತ್ತು. ಭಾನುವಾರದ ನಂತರ ಯಾವುದೇ ಸಮಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಬಹುದು ಎಂದು ಹೇಳಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ, ತೆಲಂಗಾಣ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

ಕೇಂದ್ರ ಚುನಾವಣಾ ಆಯೋಗ ಇಂದು ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಮತದಾನದ ದಿನಾಂಕಗಳು, ಎಷ್ಟು ಹಂತಗಳಲ್ಲಿ ಚುನಾವಣೆ, ನಾಮಪತ್ರ ಸಲ್ಲಿಸುವ ಮತ್ತು ಹಿಂತೆಗೆದುಕೊಳ್ಳುವ ದಿನಾಂಕಗಳನ್ನು ಪ್ರಕಟಿಸಲಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ಐದು ರಾಜ್ಯಗಳಲ್ಲಿನ ಶಾಸಕಾಂಗ ಸಭೆಗಳ ಅವಧಿಯು ಡಿಸೆಂಬರ್ 2023 ಮತ್ತು ಜನವರಿ 2024 ರ ನಡುವೆ ಮುಕ್ತಾಯಗೊಳ್ಳಲಿದೆ. ECI ಸಾಮಾನ್ಯವಾಗಿ ಶಾಸಕಾಂಗದ ಅಧಿಕಾರ ಅವಧಿ ಮುಗಿಯುವ ಆರರಿಂದ ಎಂಟು ವಾರಗಳ ಮೊದಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ.

ಮುಂಬರುವ ವಿಧಾನಸಭಾ ಚುನಾವಣೆಯು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಮುಂಬರುವ ಲೋಕಸಭಾ ಚುನವಾನೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸಬೇಕು ಎಂಬ ಪಣತೊಟ್ಟಿರುವ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದ ಚುನಾವಣೆ ಆಗಿದೆ. ಮುಂಬರುವ ಐದು ರಾಜ್ಯಗಳ ಚುನಾವಣೆಯನ್ನು ಸೆಮಿಫೈನಲ್​ ಎಂದೇ ಕರೆಯಲಾಗುತ್ತಿದೆ.

ಮಾಹಿತಿ ಪ್ರಕಾರ, ಚುನಾವಣಾ ಆಯೋಗವು ಆಕಾಶವಾಣಿಯ ರಂಗಭವನ ಆಡಿಟೋರಿಯಂನಲ್ಲಿ ಸುದ್ದಿಗೋಷ್ಠಿ ನಡೆಸಲಿದೆ. ಈ ಸಮಾವೇಶದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಚುನಾವಣಾ ಆಯೋಗವು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಮತ್ತು ಛತ್ತೀಸ್‌ಗಢದಲ್ಲಿ ನವೆಂಬರ್ ಎರಡನೇ ವಾರದಲ್ಲಿ ಅಂದರೆ ದೀಪಾವಳಿ ನಂತರ ಮತ್ತು ಡಿಸೆಂಬರ್ ಮೊದಲ ವಾರದ ನಡುವೆ ಮತದಾನವನ್ನು ನಡೆಸಬಹುದು.

ಛತ್ತೀಸ್‌ಗಢ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸುವ ಸಾಧ್ಯತೆ ಇದೆ. ಆದರೆ ಒಂದೇ ದಿನ ಎಲ್ಲಾ ರಾಜ್ಯಗಳ ಮತ ಎಣಿಕೆ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ.

ಮಧ್ಯಪ್ರದೇಶ ಚುನಾವಣೆ: ಮಧ್ಯಪ್ರದೇಶ ವಿಧಾನಸಭೆಯಲ್ಲಿ 230 ಸ್ಥಾನಗಳಿವೆ. ರಾಜ್ಯ ವಿಧಾನಸಭೆಯ ಅಧಿಕಾರಾವಧಿಯು ಮುಂದಿನ ವರ್ಷ ಜನವರಿ 6, 2024 ರಂದು ಕೊನೆಗೊಳ್ಳಲಿದೆ. ಇದಕ್ಕೂ ಮುನ್ನ ಹೊಸ ಸರ್ಕಾರ ರಚನೆಯಾಗಬೇಕು. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನಗಳನ್ನು ಗೆದ್ದಿತ್ತು.

ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಆದರೆ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಮಾರ್ಚ್ 2020 ರಲ್ಲಿ ಕಾಂಗ್ರೆಸ್ ಸರ್ಕಾರದ ಸುಮಾರು 22 ಶಾಸಕರು ರಾಜೀನಾಮೆ ನೀಡಿ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಇದಾದ ನಂತರ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಬೇಕಾಯಿತು ಮತ್ತು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಯಿತು.

ರಾಜಸ್ಥಾನ ವಿಧಾನಸಭೆಯ ಬಗ್ಗೆ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ಅಧಿಕಾರಾವಧಿಯು 14 ಜನವರಿ 2023 ರಂದು ಕೊನೆಗೊಳ್ಳಲಿದೆ. ರಾಜ್ಯದಲ್ಲಿ 200 ವಿಧಾನಸಭಾ ಸ್ಥಾನಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 2018ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು.

ತೆಲಂಗಾಣದಲ್ಲೂ ವಿಧಾನಸಭೆ ಚುನಾವಣೆ: ಈ ವರ್ಷದ ಕೊನೆಯಲ್ಲಿ ಭಾರತದ ದಕ್ಷಿಣ ರಾಜ್ಯ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ 119 ವಿಧಾನಸಭಾ ಸ್ಥಾನಗಳಿವೆ, ಅಧಿಕಾರಾವಧಿಯು ಮುಂದಿನ ವರ್ಷ 16 ಜನವರಿ 2024 ರಂದು ಕೊನೆಗೊಳ್ಳಲಿದೆ. ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯು ಸರ್ಕಾರವನ್ನು ರಚಿಸಿತ್ತು, ಅದು ಈಗ ಭಾರತ ರಾಷ್ಟ್ರ ಸಮಿತಿಯ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ್​ ರಾವ್ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಛತ್ತೀಸ್‌ಗಢದಲ್ಲಿ 90 ವಿಧಾನಸಭಾ ಸ್ಥಾನಗಳು: ಛತ್ತೀಸ್‌ಗಢದ 90 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಇಲ್ಲಿನ ವಿಧಾನಸಭೆಯ ಅಧಿಕಾರಾವಧಿಯು ಜನವರಿ 3, 2024 ರಂದು ಕೊನೆಗೊಳ್ಳುತ್ತಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಭೂಪೇಶ್ ಬಘೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿತ್ತು.

ಮಿಜೋರಾಂ:ಭಾರತದ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ 40 ವಿಧಾನಸಭಾ ಸ್ಥಾನಗಳಿವೆ. ಈ ರಾಜ್ಯದ ವಿಧಾನಸಭೆಯ ಅಧಿಕಾರಾವಧಿಯು 17 ಡಿಸೆಂಬರ್ 2023 ರಂದು ಕೊನೆಗೊಳ್ಳಲಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಸರ್ಕಾರ ರಚಿಸಿತ್ತು.

ಇದನ್ನೂ ಓದಿ :ವಿಧಾನಸಭಾ ಚುನಾವಣೆ : ತೆಲಂಗಾಣಕ್ಕೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರ ಭೇಟಿ, ಮಾಹಿತಿ ಸಂಗ್ರಹ

Last Updated : Oct 9, 2023, 9:39 AM IST

ABOUT THE AUTHOR

...view details