ಕರ್ನಾಟಕ

karnataka

ಒಂದು ದಿನ ಕೂಲಿ ಕೆಲಸ.. ಇನ್ನೊಂದು ದಿನ ಕಾಲೇಜು.. ಕೆಮಿಸ್ಟ್ರಿಯಲ್ಲಿ ಪಿಎಚ್​ಡಿ.. ಬಡತನದಲ್ಲಿ ಅರಳಿದ ಭಾರತಿ ಈಗ ​ಡಾಕ್ಟರ್!

By

Published : Jul 20, 2023, 8:19 PM IST

Updated : Jul 21, 2023, 7:47 PM IST

ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಸಾಕೆ ಭಾರತಿ ಏಳು ವರ್ಷಗಳ ಕಾಲ ಒಂದು ದಿನ ಕೂಲಿ ಕೆಲಸಕ್ಕೆ ಹೋಗಿ, ಇನ್ನೊಂದು ದಿನ ಕಾಲೇಜಿಗೆ ಹೋಗುವ ಮೂಲಕವೇ ಉನ್ನತ ಶಿಕ್ಷಣ ಪಡೆದಿದ್ದಾರೆ. ಇತ್ತೀಚೆಗೆ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ 'ಬೈನರಿ ಲಿಕ್ವಿಡ್ ಮಿಕ್ಚರ್ಸ್' ಎಂಬ ಸಂಶೋಧನಾ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

Etv Bharat
Etv Bharat

ಬಡತನದಲ್ಲಿ ಅರಳಿದ ಭಾರತಿ ಈಗ ​ಡಾಕ್ಟರ್

ಅನಂತಪುರ (ಆಂಧ್ರಪ್ರದೇಶ): ವಿವಾಹಿತ ಮಹಿಳೆಯೊಬ್ಬರು ದಿನಗೂಲಿ ಕೆಲಸ ಮಾಡುತ್ತಲೇ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಬಡತನ, ಮದುವೆ, ಮಕ್ಕಳು, ಕೌಟುಂಬಿಕ ಜವಾಬ್ದಾರಿಗಳು ಓದಲು ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಸಾಧಕಿ ನಿರೂಪಿಸಿದ್ದಾರೆ. ಪಿಎಚ್​ಡಿ ಪದವಿ ಮುಗಿಸಿರುವ ಈಕೆ ಪ್ರೊಫೆಸರ್ ಆಗಬೇಕೆಂಬ ಮಹಾದಾಸೆಯನ್ನೂ ಹೊಂದಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಾಕೆ ಭಾರತಿ ಎಂಬುವವರೇ ಈ ವಿಶಿಷ್ಟ ಸಾಧಕಿ. ಇವರದ್ದು ತೀರಾ ಬಡ ಕುಟುಂಬ. ದಿನವೂ ದುಡಿಯಲು ಹೋಗದಿದ್ದರೆ ಜೀವನ ನಿರ್ವಹಣೆಯೇ ಕಷ್ಟ ಸಾಧ್ಯ. ದಿನಗೂಲಿ ಕೆಲಸವೇ ಅನಿವಾರ್ಯ. ಮತ್ತೊಂದೆಡೆ, ಕುಟುಂಬದ ಜವಾಬ್ದಾರಿಗಳು. ಇದರ ಜೊತೆಗೆ ಓದುವ ಆಸೆ. ಈ ನಡುವೆ ಮದುವೆಯಾಗಿ ಕೈಯಲ್ಲಿ ಮಗು... ಆದರೆ, ಇದ್ಯಾವುದೂ ದೊಡ್ಡದಲ್ಲ ಎಂದು ಭಾವಿಸಿದ್ದ ಭಾರತಿ ತನ್ನ ಕನಸನ್ನು ನನಸಾಗಿಸುವ ಚಿತ್ತ ಮಾತ್ರ ಬದಲಿಸಲಿಲ್ಲ.

ಅನೇಕ ಅಡೆತಡೆಗಳ ನಡುವೆಯೂ ಭಾರತಿ ತನ್ನ ಓದಿಗೆ ನೀರೆಯುವ ಪ್ರಯತ್ನಕ್ಕೆ ಹಗಲಿರುಳು ಶ್ರಮಿಸಿದರು. ಇದು ಈಗ ಫಲಕೊಟ್ಟಿದೆ. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ 'ಬೈನರಿ ಲಿಕ್ವಿಡ್ ಮಿಕ್ಚರ್ಸ್' ಎಂಬ ಸಂಶೋಧನಾ ಮಹಾಪ್ರಬಂಧ ಮಂಡಿಸಿ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸುವ ಮೂಲಕ ಎಲ್ಲರಿಂದ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

ಬಾಲ್ಯದಲ್ಲಿ ಓದಿನೊಂದಿಗೆ ಕೂಲಿ ಕೆಲಸ:ಅನಂತಪುರ ಜಿಲ್ಲೆಯ ಸಿಂಗನಮಲ ಮಂಡಲದ ನಾಗುಲಗುಡ್ಡೆಂ ಗ್ರಾಮದ ಕಡು ಬಡ ಕುಟುಂಬಕ್ಕೆ ಸಾಕೆ ಭಾರತಿ ಸೇರಿದವರು. ಇವರ ತಂದೆ-ತಾಯಿಗೆ ಮೂವರು ಮಕ್ಕಳಿದ್ದು, ಅವರಲ್ಲಿ ಭಾರತಿಯೇ ಹಿರಿಯರು. ಚಿಕ್ಕಂದಿನಿಂದಲೂ ಅಮ್ಮನ ಜೊತೆ ಕೆಲಸಕ್ಕೆ ಹೋಗುವ ಮೂಲಕ ಕುಟುಂಬದ ಹೊರೆಯನ್ನು ಹಂಚಿಕೊಂಡರು. ಕೂಲಿ ಕೆಲಸಕ್ಕೆ ಹೋಗುತ್ತಲೇ ಸರ್ಕಾರಿ ಶಾಲೆಗೆ ಹೋಗಿ ಓದುತ್ತಿದ್ದರು.

ಹತ್ತನೇ ತರಗತಿಯಲ್ಲಿ ಭಾರತಿ ಅತ್ಯಧಿಕ ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು. ನಂತರ ಸಹೋದರ ಮಾವ ಶಿವಪ್ರಸಾದ್ ಜೊತೆ ಭಾರತಿಗೆ ವಿವಾಹ ಮಾಡಿಕೊಡಲಾಯಿತು. ಆದರೆ, ಭಾರತಿಗೆ ಓದಿನ ಬಗ್ಗೆ ತುಂಬಾ ಆಸಕ್ತಿ ಹಾಗೂ ಆಸೆ ಇತ್ತು. ಉನ್ನತ ವ್ಯಾಸಂಗ ಮಾಡಿ ನೆಲೆ ನಿಲ್ಲಬೇಕೆಂಬ ಹಂಬಲವನ್ನು ಚಿಕ್ಕ ವಯಸ್ಸಿನಿಂದಲೂ ಹೊಂದಿದ್ದರು.

ಮತ್ತೊಂದೆಡೆ, ಭಾರತಿಯ ಅತ್ತೆ - ಮಾವನ ಕುಟುಂಬವೂ ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ತವರು ಮನೆಯಿಂದ ಇಲ್ಲಿ ಕೂಡ ಕೂಲಿ ಕೆಲಸಕ್ಕೆ ಹೋಗದಿದ್ದರೆ ಜೀವನ ನಿರ್ವಹಣೆ ಮಾಡುವುದೇ ಕಷ್ಟ ಎಂಬ ಸ್ಥಿತಿ. ಇದರಿಂದ ಭಾರತಿಗೆ ತನ್ನ ಪತಿ ಅಥವಾ ಪತಿಯ ಮನೆಯವರಿಗೆ ತನ್ನ ಅಧ್ಯಯನವನ್ನು ಮುಂದುವರಿಸುವ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಭಾರತಿ ಎಂದಿಗೂ ಪುಸ್ತಕಗಳನ್ನು ಓದುವುದನ್ನು ಬಿಡಲಿಲ್ಲ. ಪತ್ನಿಯ ಆಸಕ್ತಿಯನ್ನು ಗಮನಿಸಿದ ಪತಿ ಶಿವಪ್ರಸಾದ್ ಕೂಲಿ ಹಣದಲ್ಲಿ ಓದಿಸುವ ಅಭಯ ನೀಡಿದರು. ಆ ಭರವಸೆಯಿಂದ ಭಾರತಿಗೆ ಬೆಟ್ಟದಷ್ಟು ಧೈರ್ಯ ಬಂತು.

ಕೂಲಿ ಹಣದಲ್ಲೇ ಉನ್ನತ ಓದು: ಓದಿಸುವ ಬಗ್ಗೆ ಗಂಡ ಭರವಸೆ ನೀಡಿದ ನಂತರ ಭಾರತಿ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ತೊಡಗಿಸಿಕೊಂಡರು. ಇಬ್ಬರ ಕೂಲಿ ಹಣದಿಂದ ಕುಟುಂಬದ ನಿರ್ವಹಣೆ ಹಾಗೂ ತನ್ನ ವಿದ್ಯಾಭ್ಯಾಸದ ಖರ್ಚನ್ನು ಸಮಾನಾಗಿ ಹಂಚಿಕೊಂಡರು. ಇದೇ ಕೂಲಿ ಹಣದಲ್ಲಿ ಅಧ್ಯಯನ ಮುಂದುವರೆಸಿ ಪಿಎಚ್‌ಡಿ ಹಂತಕ್ಕೆ ತಲುಪಿದರು.

ಆರಂಭದಲ್ಲಿ ಭಾರತಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದರು. ನಂತರ ಅನಂತಪುರದ ಎಸ್​​ಎಸ್​ಬಿಎನ್​ ಕಾಲೇಜಿನಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿ ಪೂರ್ಣಗೊಳಿಸಿದರು. ಈ ಏಳು ವರ್ಷಗಳ ಕಾಲವೂ ಭಾರತಿ ಒಂದು ದಿನ ಕೆಲಸಕ್ಕೆ ಹೋದರೆ ಇನ್ನೊಂದು ದಿನ ಕಾಲೇಜಿಗೆ ಓದುತ್ತಿದ್ದರು. ಇಷ್ಟೇ ಅಲ್ಲ, ಹಸುಗಳನ್ನು ಸಾಕುವುದರ ಜೊತೆಗೆ ಮನೆಕೆಲಸಗಳನ್ನೂ ನೋಡಿಕೊಳ್ಳುತ್ತಿದ್ದರು. ಹೀಗೆ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಭಾರತಿ ಕಷ್ಟಪಟ್ಟು ಸಂಪಾದಿಸಿದರು.

ಸಗಣಿ ರಾಶಿಯಲ್ಲಿ ಸಿಕ್ತು ಪಿಎಚ್‌ಡಿ ಅಧಿಸೂಚನೆ ಪ್ರತಿ:ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮುಗಿಸಿದ ಭಾರತಿ ಪ್ರತಿಭೆಯನ್ನು ಗುರುತಿಸಿದ ಕಾಲೇಜಿನ ಪ್ರಾಧ್ಯಾಪಕರು ಪಿಎಚ್‌ಡಿ ಮಾಡಲು ಸಲಹೆ ನೀಡಿದರು. ಆದರೆ, ತನಗೆ ಅಷ್ಟೊಂದು ಆರ್ಥಿಕ ಶಕ್ತಿ ಇಲ್ಲ. ಕೂಲಿಗೆ ಹೋಗದಿದ್ದರೆ ಕುಟುಂಬ ಸಾಗಿಸುವುದು ಕಷ್ಟ ಎಂದು ತನ್ನ ಪ್ರಾಧ್ಯಾಪಕರಿಗೆ ತಿಳಿಸಿ, ಕುಟುಂಬವನ್ನು ಪೋಷಿಸಲು ಮನೆಗೆಲಸದಲ್ಲಿ ನಿರತರಾದರು.

ಆದರೆ, ಒಂದು ದಿನ ಭಾರತಿಯ ಪತಿ ಶಿವಪ್ರಸಾದ್ ವಿಶ್ವವಿದ್ಯಾಲಯವು ಪಿಎಚ್‌ಡಿ ಬಗ್ಗೆ ಅಧಿಸೂಚನೆ ಹೊರಡಿಸಿದ್ದ ಪತ್ರಿಯೊಂದು ಹಸುವಿನ ಸಗಣಿ ರಾಶಿಯಲ್ಲಿ ಬಿದ್ದಿರುವುದು ಗಮನಿಸಿದರು. ಇದನ್ನು ಓದಿದ ಶಿವಪ್ರಸಾದ್ ಪತ್ನಿಗೆ ಪಿಎಚ್​ಡಿಗೆ ಅರ್ಜಿ ಸಲ್ಲಿಸುವಂತೆ ಮತ್ತೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಇದರಿಂದ ಅರ್ಜಿ ಸಲ್ಲಿಸಿದ ಭಾರತಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಸೀಟು ಪಡೆದರು. ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದ ಭಾರತಿ ಕುಟುಂಬದ ಬಡನತದ ಪರಿಸ್ಥಿತಿಯಲ್ಲೂ ಪತಿ ಮತ್ತು ಕುಟುಂಬದ ಸಹಕಾರದಿಂದ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.

'ನಾವು ನಾಗುಲಗುಡ್ಡೆಂ ಗ್ರಾಮದಲ್ಲಿ ಪುಟ್ಟ ಶೆಡ್‌ನಲ್ಲಿ ವಾಸಿಸುತ್ತಿದ್ದೇವೆ. ನಾನು ಬಾಲ್ಯದಿಂದಲೂ ಕೂಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಪೂರೈಸಿದ್ದೇನೆ. ನನ್ನ ಪತಿ ಮತ್ತು ಕುಟುಂಬ ಸದಸ್ಯರ ಬೆಂಬಲದೊಂದಿಗೆ ನಾನು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯನಲ್ಲಿ ನನ್ನ ಪಿಎಚ್‌ಡಿ ಪೂರ್ಣಗೊಳಿಸಿದ್ದೇನೆ. ಸೋಮವಾರ ರಾಜ್ಯಪಾಲರ ಕೈಯಿಂದ ಪಿಎಚ್‌ಡಿ ಪದವಿ ಜತೆಗೆ 'ಡಾಕ್ಟರ್' ಎಂಬ ಬಿರುದು ಪಡೆದಿದ್ದೇನೆ. ಮುಂದೆ ಪ್ರಾಧ್ಯಾಪಕಿ ಆಗಬೇಕೆಂಬುದು ನನ್ನ ಆಸೆ. ಈಗ ಕನಸು ಸಹ ನನಸಾಗುವ ವಿಶ್ವಾಸ ಇದೆ' ಎಂದು ಡಾ.ಭಾರತಿ ತಿಳಿಸಿದ್ದಾರೆ.

ಇದನ್ನೂ ಓದಿ:ಮಧ್ಯಪ್ರದೇಶದ ಬಸ್​ ಚಾಲಕನ ಮಗಳಿಗೆ ಇಸ್ರೋದಲ್ಲಿ ಹುದ್ದೆ: ಇದು ಸಾಧಕಿ ಸನಾಳ ಯಶೋಗಾಥೆ!

Last Updated : Jul 21, 2023, 7:47 PM IST

ABOUT THE AUTHOR

...view details