ಕರ್ನಾಟಕ

karnataka

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಇಂಡಿಯಾ ಮೈತ್ರಿಕೂಟದ ಅಧ್ಯಕ್ಷ ಪಟ್ಟ

By ETV Bharat Karnataka Team

Published : Jan 13, 2024, 3:20 PM IST

Updated : Jan 13, 2024, 5:42 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

INDIA alliance  Mallikarjun Kharge  ಖರ್ಗೆಗೆ ಮೈತ್ರಿಕೂಟದ ಅಧ್ಯಕ್ಷ ಪಟ್ಟ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಇಂಡಿಯಾ ಮೈತ್ರಿಕೂಟದ ಅಧ್ಯಕ್ಷ ಪಟ್ಟ

ನವದೆಹಲಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂಡಿಯಾ ಮೈತ್ರಿಕೂಟದ ಅಧ್ಯಕ್ಷ ಪಟ್ಟ ನೀಡಲಾಗಿದೆ. ಶನಿವಾರ ಮಧ್ಯಾಹ್ನ ಇಂಡಿಯಾ ಮೈತ್ರಿಕೂಟದ ನಾಯಕರ ವರ್ಚುಯಲ್ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಇದಲ್ಲದೇ, ಜೆಡಿಯು ನಾಯಕ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂಡಿಯಾ ಅಥವಾ 'ಇಂಡಿಯಾ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ' ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಒಕ್ಕೂಟ ಆಗಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವಿಕೆ, ಸೀಟು ಹಂಚಿಕೆ ಕಾರ್ಯಸೂಚಿಗಳು ಮತ್ತು ಇತರ ವಿಷಯಗಳು ಸೇರಿದಂತೆ ಒಕ್ಕೂಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಇಂಡಿಯಾ ಒಕ್ಕೂಟದ ನಾಯಕರು ಶನಿವಾರ ಮಧ್ಯಾಹ್ನ ವರ್ಚುಯಲ್​ ಸಭೆ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಮಾತು:ಸಭೆ ನಂತರ ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ ಅವರು, ''ಇಂಡಿಯಾ ಒಕ್ಕೂಟದ ನಾಯಕರು ಇಂದು ಆನ್‌ಲೈನ್‌ನಲ್ಲಿ ಭೇಟಿಯಾಗಿ ಮೈತ್ರಿ ಕುರಿತು ಫಲಪ್ರದ ಚರ್ಚೆ ನಡೆಸಿದರು. ಸೀಟು ಹಂಚಿಕೆಯ ಕುರಿತು ಸಕಾರಾತ್ಮಕವಾಗಿ ಮಾತುಕತೆ ನಡೆದಿರುವುದು ಎಲ್ಲರಿಗೂ ಸಂತಸ ತಂದಿದೆ. ವಿಚಾರದಿಂದ ಎಲ್ಲರಿಗೂ ತೃಪ್ತಿ ತಂದಿದೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

''ಮುಂದಿನ ದಿನಗಳಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಜಂಟಿ ಕಾರ್ಯಕ್ರಮಗಳ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ದೇಶದ ಜನರ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲು ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಮೈತ್ರಿಕೂಟದ ಪಕ್ಷಗಳನ್ನು ಆಹ್ವಾನಿಸಿದ್ದಾರೆ. ಜೊತೆಗೆ ಈ ದೇಶದ ಸಾಮಾನ್ಯ ಜನರನ್ನು ಕಾಡುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಎತ್ತಲು ಅವಕಾಶವಾಗಿ ಬಳಸಿಕೊಳ್ಳಲು ಸಹಕಾರಿಯಾಗಲಿದೆ'' ಎಂದು ಖರ್ಗೆ ತಿಳಿಸಿದ್ದಾರೆ.

ಸಭೆಗೆ 14 ಪಕ್ಷಗಳ ನಾಯಕರು ಹಾಜರು, ಮಮತಾ ಮತ್ತು ಉದ್ಧವ್ ಗೈರು:ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಉದ್ಧವ್ ಠಾಕ್ರೆ ಅವರು ಸಭೆಯಲ್ಲಿ ಭಾಗವಹಿಸಲಿಲ್ಲ. ಎನ್‌ಸಿಪಿಯ ನಾಯಕ ಶರದ್ ಪವಾರ್ ಮುಂಬೈನಿಂದ ಹಾಗೂ ಡಿಎಂಕೆ ನಾಯಕಿ ಕನಿಮೊಳಿ ಕರುಣಾನಿಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಚೆನ್ನೈನಿಂದ ವರ್ಚುಯಲ್​ ಸಭೆಯಲ್ಲಿ ಪಾಲ್ಗೊಂಡಿದ್ದರು. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಾಯಕರು ಶುಕ್ರವಾರ ಸಭೆ ಸೇರಿ ಸೀಟು ಹಂಚಿಕೆ ಕುರಿತು ಚರ್ಚಿಸಿದ್ದರು. ಎರಡೂ ಪಕ್ಷಗಳ ನಾಯಕರು ಮುಕುಲ್ ವಾಸ್ನಿಕ್ ಅವರ ಮನೆಯಲ್ಲಿ ವರ್ಚುಯಲ್​ ಸಭೆಯಲ್ಲಿ ಪಾಲ್ಗೊಂಡು "ಸಕಾರಾತ್ಮಕ ನಡೆ" ಎಂದು ಕರೆದಿದ್ದಾರೆ. ಒಟ್ಟಾರೆಯಾಗಿ ಇಂದಿನ ವರ್ಚುಯಲ್ ಸಭೆಯಲ್ಲಿ 14 ಪಕ್ಷಗಳ ನಾಯಕರು ಭಾಗವಹಿಸಿದ್ದರು.

ಸಂಜಯ್ ಝಾ ಹೇಳಿದ್ದು ಹೀಗೆ:''ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸೀಟು ಹಂಚಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ಮಾಡುವ ಪ್ರಸ್ತಾವನೆ ಭಾರತ ಒಕ್ಕೂಟದಲ್ಲಿ ಇತ್ತು. ಆದರೆ, ಸಿಎಂ ನಿತೀಶ್ ಕುಮಾರ್ ನಿರಾಕರಿಸಿದ್ದಾರೆ. ಮೈತ್ರಿಕೂಟವನ್ನು ಕಾಂಗ್ರೆಸ್ ಮುನ್ನಡೆಸಲಿ ಎಂದು ನಿತೀಶ್ ಕುಮಾರ್ ಅವರು ಹೇಳಿದ್ದಾರೆ. ಜೊತೆಗೆ ಎಲ್ಲಾ ವಿಚಾರಗಳ ಚರ್ಚೆ ನಡೆಯಬೇಕಿದೆ'' ಎಂದು ಜೆಡಿಯು ನಾಯಕ ಸಂಜಯ್ ಝಾ ತಿಳಿಸಿದರು.

ಇಂಡಿಯಾ ಮೈತ್ರಿಕೂಟದ ಈವರೆಗೆ ನಡೆದ ಸಭೆಗಳ ಮಾಹಿತಿ: ಭಾರತ ಮೈತ್ರಿಕೂಟದ ನಾಲ್ಕು ಸಭೆಗಳು ಇಲ್ಲಿಯವರೆಗೆ ನಡೆದಿವೆ. ಮೊದಲ ಸಭೆ ಜೂನ್ 23 ರಂದು ಪಾಟ್ನಾದಲ್ಲಿ ನಡೆಯಿತು. ಅದರ ನಂತರ ಬೆಂಗಳೂರಿನಲ್ಲಿ, ಮುಂಬೈನಲ್ಲಿ ಮತ್ತು ದೆಹಲಿಯಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ಸಭೆಗಳನ್ನು ನಡೆಸಲಾಯಿತು. ಇದೀಗ ವರ್ಚುಯಲ್ ಸಭೆಯು ಜನವರಿ 13 ರಂದು ಅಂದರೆ, ಶನಿವಾರದಂದು ನಡೆಯಿತು.

ಇದನ್ನೂ ಓದಿ:ವಿಪಕ್ಷಗಳ I.N.D.I.A ಕೂಟಕ್ಕೆ ಬಿಎಸ್​ಪಿ ಸೇರ್ಪಡೆ ಸಾಧ್ಯತೆ: 15 ರಂದು ಅಧಿಕೃತ ಘೋಷಣೆ?

Last Updated : Jan 13, 2024, 5:42 PM IST

ABOUT THE AUTHOR

...view details