ಕರ್ನಾಟಕ

karnataka

ಕೇದಾರನಾಥದಲ್ಲಿ ರಾಹುಲ್​-ವರುಣ್ ಗಾಂಧಿ ಭೇಟಿ 'ಆಕಸ್ಮಿಕ', ರಾಜಕೀಯ ಚರ್ಚೆ ಇಲ್ಲ: ಕಾಂಗ್ರೆಸ್​

By ETV Bharat Karnataka Team

Published : Nov 8, 2023, 5:16 PM IST

Varun Gandhi- Rahul Gandhi meet; ಉತ್ತರಾಖಂಡದಲ್ಲಿ ವರುಣ್​- ರಾಹುಲ್​ ಗಾಂಧಿ ಭೇಟಿ ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಆದರೆ, ಇದೆಲ್ಲಾ ಆಕಸ್ಮಿಕ ಎಂಬುದು ಕಾಂಗ್ರೆಸ್​ನ ಹಿರಿಯ ನಾಯಕರ ಅಭಿಮತವಾಗಿದೆ.

ರಾಹುಲ್​ ಗಾಂಧಿ ವರುಣ್​ ಗಾಂಧಿ
ರಾಹುಲ್​ ಗಾಂಧಿ ವರುಣ್​ ಗಾಂಧಿ

ನವದೆಹಲಿ:ಉತ್ತರಾಖಂಡದ ಕೇದಾರನಾಥದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸೋದರ ಸಂಬಂಧಿ, ಬಿಜೆಪಿ ಸಂಸದರೂ ಆಗಿರುವ ವರುಣ್ ಗಾಂಧಿ ನಡುವಿನ ಭೇಟಿಯನ್ನು ಕಾಂಗ್ರೆಸ್ 'ಇದೊಂದು ಆಕಸ್ಮಿಕ' ಎಂದು ಹೇಳಿದೆ. ಕೇದಾರನಾಥದಲ್ಲಿ ಇಬ್ಬರು 'ಗಾಂಧಿ'ಗಳ ಮುಖಾಮುಖಿಯ ನಂತರ ರಾಜಕೀಯ ಚರ್ಚೆಗಳು ತೀವ್ರತೆ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರು ಹೇಳಿಕೆ ನೀಡಿದ್ದು, ಇಬ್ಬರ ಭೇಟಿ ಆಕಸ್ಮಿಕವಾಗಿದೆ. ಇದರ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಚರ್ಚೆ ಹುಟ್ಟುಹಾಕಿದ ಭೇಟಿ:ಬಿಜೆಪಿ ಸಂಸದರಾಗಿರುವ ವರುಣ್​ ಗಾಂಧಿ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಸಭೆಗಳಿಂದ ದೂರ ಉಳಿದು ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕುತ್ತಿರುತ್ತಾರೆ. ಅವರ ತಾಯಿ ಮನೇಕಾ ಗಾಂಧಿ ಅವರು ಕೂಡ ಪಕ್ಷದ ಸಭೆಗಳಿಂದ ವಿಮುಖರಾಗಿದ್ದಾರೆ. ವರುಣ್​ ಬಿಜೆಪಿ ತೊರೆದು ಬೇರೆ ಪಕ್ಷ ಸೇರಲಿದ್ದಾರೆ ಎಂಬ ಊಹಾಪೋಹ ಕೇಳಿಬಂದಿದೆ. ಇಂತಿಪ್ಪ, ನವೆಂಬರ್ 7 ರಂದು ಉತ್ತರಾಖಂಡದ ಕೇದಾರನಾಥದಲ್ಲಿ ರಾಹುಲ್ ಮತ್ತು ವರುಣ್ ನಡುವಿನ ಭೇಟಿಯು ವದಂತಿಗೆ ತುಪ್ಪ ಸುರಿದಂತಾಗಿದೆ.

ರಾಹುಲ್ ಗಾಂಧಿ ಅವರು ಕೇದಾರನಾಥಕ್ಕೆ ಮೂರು ದಿನಗಳ ಪ್ರವಾಸದಲ್ಲಿದ್ದು, ಇದೇ ವೇಳೆ ವರುಣ್ ಗಾಂಧಿ ಅವರು ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ಸೋದರಸಂಬಂಧಿಗಳು ಪರಸ್ಪರ ಮಾತುಕತೆ ನಡೆಸಿದ್ದರು. ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ.

ಸೂಕ್ತ ವೇದಿಕೆಯಲ್ಲಿ ಚರ್ಚೆ:ಕಾಂಗ್ರೆಸ್ ಹಿರಿಯ ನಾಯಕ ಪಿಎಲ್ ಪುನಿಯಾ ಈಟಿವಿ ಭಾರತ್‌ ಜೊತೆ ಮಾತನಾಡಿ, ಇಬ್ಬರ ಭೇಟಿ ಆಕಸ್ಮಿಕವಾಗಿದೆ ಎಂದು ಭಾವಿಸುತ್ತೇನೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ಏನಾದರೂ ಚರ್ಚಿಸಬೇಕಾದರೆ ಸೂಕ್ತವಾದ ಸ್ಥಳ, ವೇದಿಕೆಯಲ್ಲಿ ಮಾಡಬಹುದು. ಧಾರ್ಮಿಕ ಸ್ಥಳವನ್ನು ಆಯ್ಕೆ ಮಾಡುತ್ತಿರಲಿಲ್ಲ. ವರುಣ್​ ಅವರು ಸರ್ಕಾರದ ವಿರುದ್ಧ ಟೀಕಿಸುತ್ತಿರುವುದು ಪಕ್ಷ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಗಿದೆ. ಅವರ ಸೇರ್ಪಡೆ ಬಗ್ಗೆ ಗಾಂಧಿ ಕುಟುಂಬ ಮಾತ್ರ ನಿರ್ಧರಿಸಬಹುದು ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಮತ್ತು ಮನೇಕಾ ಗಾಂಧಿ ಅವರ ನಡುವಿನ ಸಂಬಂಧಗಳು ದೂರವಾಗಿದ್ದರೂ, ಸೋದರಸಂಬಂಧಿಗಳು ತಮ್ಮ ನಡುವೆ ಸೌಹಾರ್ದತೆಯನ್ನು ಕಾಯ್ದುಕೊಂಡಿದ್ದಾರೆ. ಈ ಹಿಂದೆಯೂ ವರುಣ್, ರಾಹುಲ್ ನಿವಾಸಕ್ಕೆ ಖುದ್ದು ಭೇಟಿ ನೀಡಿದ್ದರು.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ತೀರಾ ಕೆಟ್ಟ ಸ್ಥಿತಿಯಲ್ಲಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಓರ್ವ ಸಂಸದ ಆಯ್ಕೆಯಾಗಿದ್ದರೆ, 2022 ರ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಶಾಸಕರಿಗೆ ಮಾತ್ರ ಜನರು ಮಣೆ ಹಾಕಿದ್ದಾರೆ. ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಕಟ್ಟಲು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹೊಣೆ ನೀಡಲಾಗಿತ್ತು. ಆದರೆ, ಎಲ್ಲ ತಂತ್ರಗಳು ವಿಫಲವಾಗಿವೆ.

ಕಾಂಗ್ರೆಸ್​ನ ಹಿರಿಯರ ಪ್ರಕಾರ, ವರುಣ್​ ಗಾಂಧಿ ಕಾಂಗ್ರೆಸ್​ ಸೇರುವುದು ಅಸಂಭವ. ಇಲ್ಲಿನ ಅಧಿಕಾರ ರಚನೆ ವಿರುದ್ಧ ಅವರು ತೀವ್ರ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ಅವರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬುದು ಬರೀ ವದಂತಿ ಅಷ್ಟೇ. ಹಾಗೊಂದು ವೇಳೆ ನಡೆದಲ್ಲಿ ಉತ್ತರಪ್ರದೇಶ ಕಾಂಗ್ರೆಸ್​ಗೆ ಬಲ ಬರಲಿದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವದ 3ನೇ ಆರ್ಥಿಕ ಶಕ್ತಿ.. ಕಾಂಗ್ರೆಸ್​ ಬಂದ್ರೆ ಶೇ '85ರಷ್ಟು ಕಮಿಷನ್​' ಜಾರಿ: ಮೋದಿ

ABOUT THE AUTHOR

...view details