ಕರ್ನಾಟಕ

karnataka

ಒಡಿಶಾದಲ್ಲಿ ರಾಷ್ಟ್ರಪತಿ ಭಾಷಣದ ವೇಳೆ ವಿದ್ಯುತ್​ ಕಡಿತ: ಸಿಎಂ ಕ್ಷಮೆಗೆ ಬಿಜೆಪಿ ಆಗ್ರಹ

By

Published : May 7, 2023, 1:32 PM IST

ಒಡಿಶಾದಲ್ಲಿ ರಾಷ್ಟ್ರಪತಿ ಘಟಿಕೋತ್ಸವ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಪವರ್ ಕಟ್​ ಆಗಿದ್ದು, ಒಡಿಶಾದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

president
ರಾಷ್ಟ್ರಪತಿ ದ್ರೌಪದಿ ಮುರ್ಮು

ಮಯೂರ್​ ಭಂಜ್​ (ಒಡಿಶಾ):ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಘಟಿಕೋತ್ಸವದ ಭಾಷಣದ ಸಂದರ್ಭದಲ್ಲಿ ಪವರ್ ಕಟ್​ಗೆ ಸಂಬಂಧಿಸಿ ಬಿಜೆಪಿ ನಾಯಕರು ಒಡಿಶಾ ಮುಖ್ಯಮಂತ್ರಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ್ ಸಮಾಲ್ ಈ ಕುರಿತು ಮಾತನಾಡಿ, ಇದೊಂದು ದೊಡ್ಡ ಲೋಪ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ಇಡೀ ರಾಜ್ಯಕ್ಕೆ ನಾಚಿಕೆಗೇಡಿನ ಸಂಗತಿ. ಒಡಿಶಾ ವಿದ್ಯುತ್ ಹೆಚ್ಚುವರಿ ರಾಜ್ಯ ಎಂದು ರಾಜ್ಯ ಸರ್ಕಾರ ಹೇಳಿಕೊಂಡರೂ ದೇಶದ ಪ್ರಥಮ ಪ್ರಜೆ ಇರುವ ಸ್ಥಳದಲ್ಲಿ ಸರಿಯಾಗಿ ವಿದ್ಯುತ್​ ದೀಪದ ವ್ಯವಸ್ಥೆ ನೀಡುವಲ್ಲಿ ವಿಫಲವಾಗಿದೆ. ರಾಷ್ಟ್ರಪತಿಯವರಲ್ಲಿ ಸಿಎಂ ಕ್ಷಮೆ ಕೇಳಲೇ ಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಡಿ ಉಪಾಧ್ಯಕ್ಷ ದೇಬಿ ಪ್ರಸಾದ್ ಮಿಶ್ರಾ ಪ್ರತಿಕ್ರಿಯಿಸಿ, ಈ ಲೋಪಕ್ಕೆ ಕಾರಣರಾದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಪಂಚಣ್ಣ ಕನುಂಗೋ, ಇದು ಇಡೀ ರಾಜ್ಯಕ್ಕಾದ ದೊಡ್ಡ ಅವಮಾನ ಎಂದಿದ್ದಾರೆ.

ಕಂದಾಯ ವಿಭಾಗೀಯ ಆಯುಕ್ತ (ಆರ್‌ಡಿಸಿ) ಸುರೇಶ್ ದಲೈ ಘಟನೆಯ ಕುರಿತು ಸಭೆ ನಡೆಸಿದ್ದು, ಸರಕಾರ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ. ಟಾಟಾ ಪವರ್ ನಾರ್ತ್ ಒಡಿಶಾ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಸಿಇಒ ಭಾಸ್ಕರ್ ಸರ್ಕಾರ್ ಮಾತನಾಡಿ, ವಿದ್ಯುತ್​ ವಿತರಣೆಯಲ್ಲಿ ಅಡಚಣೆಯಾಗಿಲ್ಲ. ವೈರಿಂಗ್‌ನಲ್ಲಿನ ಕೆಲವು ದೋಷಗಳಿಂದಾಗಿ ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಉಪಕುಲಪತಿ ಸಂತೋಷ್ ಕುಮಾರ್ ತ್ರಿಪಾಠಿ ಘಟನೆಗೆ ಕ್ಷಮೆ ಯಾಚಿಸಿದ್ದು, "ನಾನು ಅತ್ಯಂತ ವಿಷಾದಿಸುತ್ತೇನೆ. ದುರದೃಷ್ಟಕರ ಘಟನೆಗೆ ನನ್ನನ್ನೇ ದೂಷಿಸುತ್ತೇನೆ. ವಿದ್ಯುತ್ ವೈಫಲ್ಯಕ್ಕಾಗಿ ನಾವು ನಾಚಿಕೆಪಡುತ್ತೇವೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.

ಘಟನೆಯ ಹಿನ್ನೆಲೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಘಟಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಇದ್ದಕ್ಕಿಂದಂತೆಯೇ ಕರೆಂಟ್​ ಕೈ ಕೊಟ್ಟಿದೆ. ಪರಿಣಾಮ ವಿದ್ಯುತ್​ ದೀಪಗಳೆಲ್ಲವೂ ಆರಿ ವಿಶ್ವವಿದ್ಯಾನಿಲಯದ ಇಡೀ ಸಭಾಂಗಣವೇ ಕತ್ತಲೆಯಲ್ಲಿ ಮುಳುಗಿ ಹೋಯಿತು. ರಾಷ್ಟ್ರಪತಿಗಳು ಮಾತ್ರ ಕತ್ತಲಲ್ಲೇ ಭಾಷಣ ಮುಂದುವರೆಸಿ ಅಸಮಾಧಾನವನ್ನು ಬೇರೆಯೇ ರೀತಿಯಲ್ಲಿ ವ್ಯಕ್ತಪಡಿಸಿರುವುದು ಕಂಡುಬಂತು.

ಇದನ್ನೂ ಓದಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಘಟಿಕೋತ್ಸವದ ಭಾಷಣದ ವೇಳೆ ಪವರ್​ ಕಟ್​..!

ABOUT THE AUTHOR

...view details