ಕರ್ನಾಟಕ

karnataka

ರಾಜ್ಯದ ಮುಂದಿನ ಮುಖ್ಯಮಂತ್ರಿ ಬಗ್ಗೆ ಅರುಣ್​ ಸಿಂಗ್​ ಹೇಳಿದ್ದೇನು?

By

Published : Jul 26, 2021, 10:10 PM IST

ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎಂಬ ಕುತೂಹಲಕ್ಕೆ ಮುಂದಿನ 2-3 ದಿನಗಳಲ್ಲಿ ತೆರೆ ಬೀಳಲಿದ್ದು, ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್ ಮಾತನಾಡಿದರು.

Arun Singh
Arun Singh

ನವದೆಹಲಿ:ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಬಿಜೆಪಿ ಹೈಕಮಾಂಡ್​ ಯಾರಿಗೆ ಮಣೆ ಹಾಕಲಿದ್ದಾರೆಂಬ ಕುತೂಹಲ ಮೂಡಿದ್ದು, ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಇದೇ ವಿಚಾರವಾಗಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿರುವ ಅರುಣ್​ ಸಿಂಗ್​, ಸದ್ಯದ ಸ್ಥಿತಿಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ನೂತನ ಮುಖ್ಯಮಂತ್ರಿಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೀಯ ಮತ್ತು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದ ನೂತನ ಮುಖ್ಯಮಂತ್ರಿ ಬಗ್ಗೆ ಇಲ್ಲಿ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.

ಸಭೆ ಯಾವಾಗ ನಿರ್ಧಾರಗೊಂಡಿದೆ ಎಂಬ ಪ್ರಶ್ನೆಗೂ ಕೂಡ ಉತ್ತರ ನೀಡದ ಅರುಣ್ ಸಿಂಗ್​, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣ ಏನು ಎಂಬುದನ್ನು ಅವರೇ ಖುದ್ದಾಗಿ ತಿಳಿಸಿದ್ದಾರೆ ಎಂದರು. ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗೋಸ್ಕರ ನಾಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ: 2 ವರ್ಷ ಅಧಿಕಾರ ಸಿಕ್ಕರೂ ಅಡಿಗಡಿಗೂ ಅಡ್ಡಿಗಳು.. ಅಗ್ನಿ'ಪಥ'ದೊಳಗೂ ಅರಳಿದ ಆಶಾವಾದಿ 'ಶಿಕಾರಿ'ಯೂರಪ್ವ..

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ಬಿಎಸ್​ವೈ, ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸ್ಥಾನ ಮಾನ ಇಲ್ಲ. ಆದರೂ ನಾನು ಎರಡು ವರ್ಷ ಹೆಚ್ಚಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಅದಕ್ಕೆ ಅವಕಾಶ ನೀಡಿದ ಬಿಜೆಪಿ ಹೈಕಮಾಂಡ್​ಗೆ ಧನ್ಯವಾದಗಳು ಎಂದಿದ್ದರು.ಸದ್ಯ ಪ್ರಹ್ಲಾದ್​ ಜೋಶಿ, ಸಿಟಿ ರವಿ, ಅರವಿಂದ್​ ಬೆಲ್ಲದ್​, ಮುರಗೇಶ್ ನಿರಾಣಿ, ನಳಿನ್ ಕುಮಾರ್ ಕಟೀಲ್​​ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನ ಕಾಯ್ದು ನೋಡಬೇಕಿದೆ.

ABOUT THE AUTHOR

...view details