ಕರ್ನಾಟಕ

karnataka

ಟಿಕ್..ಟಿಕ್..ಟಿಕ್...! ಜಸ್ಟ್ 36 ಗಂಟೆ ಮಾತ್ರ ಬಾಕಿ, ಐತಿಹಾಸಿಕ ಕ್ಷಣಕ್ಕೆ ಕೋಟ್ಯಂತರ ಕಣ್ಣುಗಳು ಕಾತರ!

By

Published : Sep 5, 2019, 1:19 PM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನಿರೀಕ್ಷಿತ ರೀತಿಯಲ್ಲಿ ತನ್ನ ಗುರಿಯತ್ತ ಸಾಗಿದ್ದು, ಸೆಪ್ಟಂಬರ್ 7ರ ಮುಂಜಾನೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲಿದೆ.

ಇಸ್ರೋ ಚಂದ್ರಯಾನ-2

ನವದೆಹಲಿ:ಇನ್ನು ಕೇವಲ 36 ಗಂಟೆ ಮಾತ್ರವೇ ಬಾಕಿ... ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹೋನ್ನತ ಕ್ಷಣಕ್ಕೆ ಬಾಕಿ ಉಳಿದಿರುವುದು ಕೇವಲ 36 ಗಂಟೆಗಳು ಮಾತ್ರ!

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ನಿರೀಕ್ಷಿತ ರೀತಿಯಲ್ಲಿ ತನ್ನ ಗುರಿಯತ್ತ ಸಾಗುತ್ತಿದ್ದು, ಸೆಪ್ಟಂಬರ್ 7ರ ಮುಂಜಾನೆ ನಿರ್ದಿಷ್ಟ ಜಾಗದಲ್ಲಿ ಸುರಕ್ಷಿತವಾಗಿ ಇಳಿಯಲಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸುವ ಪ್ರಯತ್ನಕ್ಕೆ ಕೈ ಹಾಕಿರುವ ಇಸ್ರೋ ಸೆಪ್ಟೆಂಬರ್ 7ರ ರಾತ್ರಿ 1.40ರಿಂದ 1.55ರ ಅವಧಿಯಲ್ಲಿ ಸುರಕ್ಷಿತವಾಗಿ ಈ ಪ್ರಕ್ರಿಯೆ ನಡೆಸಲಿದೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಹಾಗೂ ರೋವರ್ ಇಳಿಸುವ ಪ್ರಯತ್ನ ಅತ್ಯಂತ ಕಠಿಣವಾಗಿದ್ದು, ಇಸ್ರೋ ವಿಜ್ಞಾನಿ ಅಸಾಧ್ಯವನ್ನು ಸಾಧ್ಯವಾಗಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ದಕ್ಷಿಣ ಧ್ರುವದಲ್ಲಿ ಇಳಿಯುವುದು ಮತ್ತು ಸುರಕ್ಷಿತವಾಗಿ ಇಳಿಸುವುದು ಅತ್ಯಂತ ಕ್ಲಿಷ್ಟಕರ ಮತ್ತು ಸವಾಲಿನಿಂದ ಕೂಡಿದ ಕೆಲಸ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಹೀಗಾಗಿ ಈ ಕಾರ್ಯದಲ್ಲಿ ಇಸ್ರೋ ಗೆದ್ದಿದ್ದೇ ಆದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಸ್ರೋ ಪಡೆದುಕೊಳ್ಳುವ ಚಂದ್ರನ ಕುರಿತಾದ ಮಾಹಿತಿಯ ಬಗ್ಗೆ ವಿಶ್ವದ ಎಲ್ಲ ರಾಷ್ಟ್ರಗಳು ಕುತೂಹಲದ ಕಣ್ಣಿಟ್ಟಿವೆ.

ಹೇಗಿರಲಿದೆ ಲ್ಯಾಂಡಿಂಗ್:

ಸೆಪ್ಟೆಂಬರ್ 7ರ ಮುಂಜಾನೆ 1.40ರಿಂದ 1.55ರ ಅವಧಿಯಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆ ನಡೆಯಲಿದ್ದು, ರೋವರ್(ಪ್ರಜ್ಞಾನ್)​​ ಹೊಂದಿರುವ ಲ್ಯಾಂಡರ್(ವಿಕ್ರಮ್) ಸುರಕ್ಷಿತವಾಗಿ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ.

ಆರು ಚಕ್ರಗಳಿರುವ ಪ್ರಜ್ಞಾನ್ ರೋವರ್ ಚಂದ್ರನಲ್ಲಿ ಇಳಿದ ಕೆಲ ಗಂಟೆಗಳಲ್ಲಿ ಹೊರಬರಲಿದೆ. ಈ ರೋವರ್​ ಲ್ಯಾಂಡರ್ ಜೊತೆಗೆ ಮಾತ್ರ ಸಂವಹನ ನಡೆಸಲಿದೆ. ಇದು ಅರ್ಧ ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ವಿಕ್ರಮ್ ಹೆಸರಿನ ಲ್ಯಾಂಡರ್, ರೋವರ್ ರವಾನಿಸುವ ಎಲ್ಲ ಮಾಹಿತಿಯನ್ನು ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ಬಾಹ್ಯಾಕಾಶ ಕೇಂದ್ರಕ್ಕೆ ಮಾಹಿತಿ ಕಳುಹಿಸಿಕೊಡಲಿದೆ. ಈ ಲ್ಯಾಂಡರ್​​ ಎರಡು ವಾರಗಳ ಕಾಲ ಕಾರ್ಯನಿರ್ವಹಿಸಲಿದೆ.​

ABOUT THE AUTHOR

...view details